ಸಾರಾಂಶ
ಹಾಥ್ರಸ್ : 121 ಜನರ ಸಾವಿಗೆ ಕಾರಣವಾದ ಹಾಥ್ರಸ್ ಧಾರ್ಮಿಕ ಸಭೆ ಕಾಲ್ತುಳಿತ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.
ಈ ಘಟನೆ ದುಷ್ಕೃತ್ಯ ಇರಬಹುದು ಎಂಬ ಶಂಕೆ ಇದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಯಲಿದೆ ಎಂದಿದ್ದಾರೆ.ಬುಧವಾರ ಹಾಥ್ರಸ್‌ಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಈಗಾಗಲೇ ನಾವು ಆಗ್ರಾ ಎಡಿಜಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ್ದೇವೆ. ಇದು ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಈ ಬಗ್ಗೆ ಆಳವಾದ ತನಿಖೆ ನಡೆಸುವಂತೆ ಎಸ್‌ಐಟಿಗೆ ಸೂಚಿಸಲಾಗಿದೆ. ಇದಕ್ಕೆ ಸಮಾನಾಂತರವಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲೂ ರಾಜ್ಯ ಸರ್ಕಾರ ನಿರ್ಧರಿಸಿದೆ. ನಿವೃತ್ತ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸಹ ನ್ಯಾಯಾಂಗ ತನಿಖೆಯ ಭಾಗವಾಗಲಿದ್ದಾರೆ’ ಎಂದು ಹೇಳಿದರು.
‘ದುರಂತಕ್ಕೆ ಯಾರು ಹೊಣೆ? ಇದು ಆಕಸ್ಮಿಕ ಘಟನೆಯೇ ಅಥವಾ ಇದು ಪಿತೂರಿಯೇ ಎಂದು ಸಮಿತಿಯು ಪತ್ತೆ ಮಾಡುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. ಇದಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ಸರ್ಕಾರವು ಜಾರಿಗೆ ತರಬಹುದು’ ಎಂದರು.