ಯುಪಿಐನಲ್ಲಿ ಮತ್ತೆ ದೋಷ : ಹಣ ಕಳಿಸಲಾಗದೇ ಭಾರಿ ಸಮಸ್ಯೆ - 15 ದಿನದಲ್ಲಿ 3ನೇ ಸಲ ಈ ತೊಂದರೆ

| N/A | Published : Apr 13 2025, 02:03 AM IST / Updated: Apr 13 2025, 06:28 AM IST

ಸಾರಾಂಶ

ತಾಂತ್ರಿಕ ಕಾರಣಗಳಿಂದಾಗಿ ದೇಶಾದ್ಯಂತ ಶನಿವಾರ ಗೂಗಲ್‌ ಪೇ, ಫೋನ್‌ ಪೇ, ಭೀಮ್‌ ಆ್ಯಪ್‌ನಂಥ ಯುಪಿಐ ಬಳಕೆದಾರರು ಮತ್ತೆ ಸಮಸ್ಯೆ ಎದುರಿಸಿ ತೀವ್ರವಾಗಿ ಪರದಾಡಿದ್ದಾರೆ. ಬೆಳಗ್ಗೆ 11.30 ನಂತರ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಹಣಪಾವತಿಗೆ ಬಳಕೆದಾರರು ಪರದಾಡಬೇಕಾಯಿತು.

ನವದೆಹಲಿ: ತಾಂತ್ರಿಕ ಕಾರಣಗಳಿಂದಾಗಿ ದೇಶಾದ್ಯಂತ ಶನಿವಾರ ಗೂಗಲ್‌ ಪೇ, ಫೋನ್‌ ಪೇ, ಭೀಮ್‌ ಆ್ಯಪ್‌ನಂಥ ಯುಪಿಐ ಬಳಕೆದಾರರು ಮತ್ತೆ ಸಮಸ್ಯೆ ಎದುರಿಸಿ ತೀವ್ರವಾಗಿ ಪರದಾಡಿದ್ದಾರೆ. ಬೆಳಗ್ಗೆ 11.30 ನಂತರ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಹಣಪಾವತಿಗೆ ಬಳಕೆದಾರರು ಪರದಾಡಬೇಕಾಯಿತು.

15 ದಿನಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ ಮಾ.26 ಮತ್ತು ಏ.2ರಂದು ಇದೇ ರೀತಿ ಯುಪಿಎ ಪಾವತಿ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.ದೇಶಾದ್ಯಂತ ಭಾಗಶಃ ಹಣದ ವರ್ಗಾವಣೆ ಸಮಸ್ಯೆ ಆಗಿತ್ತು.

ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ(ಎನ್‌ಪಿಸಿಐ), ಯುಪಿಐ ಸೇವೆಯ ಉಸ್ತುವಾರಿ ಹೊತ್ತಿದೆ. ಈ ಸಮಸ್ಯೆ ಬಗ್ಗೆ ಅದು ಹೇಳಿಕೆ ನೀಡಿ, ‘ಸಮಸ್ಯೆ ಪರಿಹಾರಕ್ಕೆ ನಾವು ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗೆ ವಿಷಾದಿಸುತ್ತೇವೆ’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ತಿಳಿಸಿದೆ.

ಎಟಿಎಂಗಳ ಮುಂದೆ ಜನ!:

ಈ ನಡುವೆ ಯುಪಿಐ ಹಣ ಪಾವತಿ ವಿಫಲವಾದ ಕಾರಣ ಜನರು ಎಟಿಎಂಗಳ ಮುಂದೆ ದುಡ್ಡು ಡ್ರಾ ಮಾಡಲು ಭಾರಿ ಪ್ರಮಾಣದಲ್ಲಿ ಕ್ಯೂ ನಿಂತಿದ್ದು ಕಂಡುಬಂತು. ಇನ್ನು ಕೆಲವೆಡೆ ನಗದು ಇಲ್ಲದೇ ಯುಪಿಐ ಮೇಲಷ್ಟೇ ಅವಲಂಬಿತವಾಗಿದ್ದ ಜನರು ಹಣ ಪಾವತಿಸಲಾಗದೇ ಪರದಾಡಿದರು.