ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ : ನಗರ, ಕೇಂದ್ರವಾರು ಫಲಿತಾಂಶ ಪ್ರಕಟಕ್ಕೆ ಸುಪ್ರೀಂ ಆದೇಶ

| Published : Jul 19 2024, 01:03 AM IST / Updated: Jul 19 2024, 05:09 AM IST

ಸಾರಾಂಶ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ (ನೀಟ್‌)ಯಲ್ಲಿ ನಡೆದ ಅಕ್ರಮಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌, ಜು.20ರ ಮಧ್ಯಾಹ್ನ 12 ಗಂಟೆಯೊಳಗೆ 2024ನೇ ಸಾಲಿನ ನೀಟ್‌-ಯುಜಿ ಪರೀಕ್ಷೆಯ ನಗರವಾರು ಹಾಗೂ ಕೇಂದ್ರವಾರು ಸಂಪೂರ್ಣ ಫಲಿತಾಂಶವನ್ನು ಪ್ರಕಟಿಸುವಂತೆ ಆದೇಶ ನೀಡಿದೆ. 

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ (ನೀಟ್‌)ಯಲ್ಲಿ ನಡೆದ ಅಕ್ರಮಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌, ಜು.20ರ ಮಧ್ಯಾಹ್ನ 12 ಗಂಟೆಯೊಳಗೆ 2024ನೇ ಸಾಲಿನ ನೀಟ್‌-ಯುಜಿ ಪರೀಕ್ಷೆಯ ನಗರವಾರು ಹಾಗೂ ಕೇಂದ್ರವಾರು ಸಂಪೂರ್ಣ ಫಲಿತಾಂಶವನ್ನು ಪ್ರಕಟಿಸುವಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಗೆ ಆದೇಶ ನೀಡಿದೆ. ಆದರೆ, ವಿದ್ಯಾರ್ಥಿಗಳ ಗುರುತನ್ನು ಮುಚ್ಚಿಡುವಂತೆ ತಾಕೀತು ಮಾಡಿದೆ.

ಆರೋಪಿತ ಪರೀಕ್ಷಾ ಕೇಂದ್ರಗಳಲ್ಲಿನ ವಿದ್ಯಾರ್ಥಿಗಳಿಗೆ ಎಷ್ಟು ಅಂಕ? ಇತರ ಕೇಂದ್ರಗಳ ವಿದ್ಯಾರ್ಥಿಗಳಿಗೆ ಎಷ್ಟು ಅಂಕ ಎಂಬ ಸ್ಪಷ್ಟ ಚಿತ್ರಣ ಲಭಿಸುವ ಉದ್ದೇಶದಿಂದ ತಾನು ಈ ಸೂಚನೆ ನೀಡಿರುವುದಾಗಿ ಕೋರ್ಟ್‌ ಸ್ಪಷ್ಟಡಿಸಿದೆ.

ಈ ಹಿಂದೆಯೇ ನೀಟ್‌-ಯುಜಿ ಫಲಿತಾಂಶ ಪ್ರಕಟವಾಗಿದ್ದರೂ, ನಗರವಾರು ಹಾಗೂ ಕೇಂದ್ರವಾರು ಫಲಿತಾಂಶ ಪ್ರಕಟಗೊಂಡಿರಲಿಲ್ಲ. ದೇಶದ ಕೆಲ ಪರೀಕ್ಷಾ ಕೇಂದ್ರ ಹಾಗೂ ಕೆಲ ನಗರಗಳಿಗೆ ಸೀಮಿತವಾಗಿ ಪರೀಕ್ಷಾ ಅಕ್ರಮಗಳು ನಡೆದಿದ್ದು, ಇಡೀ ದೇಶದಲ್ಲಿ ಅಕ್ರಮ ನಡೆದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಹೀಗಾಗಿ ನಗರವಾರು ಹಾಗೂ ಕೇಂದ್ರವಾರು ಫಲಿತಾಂಶ ಪ್ರಕಟಿಸಿದರೆ ಅಕ್ರಮದ ಬಗ್ಗೆ ಒಂದು ಚಿತ್ರಣ ಲಭಿಸುತ್ತದೆ. ಆದ್ದರಿಂದ ಫಲಿತಾಂಶದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಮಗ್ರ ಫಲಿತಾಂಶ ಪ್ರಕಟಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದರು.

ಅದನ್ನು ಒಪ್ಪಿದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ತ್ರಿಸದಸ್ಯ ಪೀಠ, ಜು.20ರಂದು ವೆಬ್‌ಸೈಟಿನಲ್ಲಿ ಸಂಪೂರ್ಣ ಫಲಿತಾಂಶ ಪ್ರಕಟಿಸಬೇಕು. ಆದರೆ, ವಿದ್ಯಾರ್ಥಿಗಳ ಗುರುತನ್ನು ಮಾಸ್ಕ್‌ ಮಾಡಬೇಕು. ಗೋಧ್ರಾ, ಪಟನಾ ಮತ್ತು ಹಜಾರಿಬಾಗ್‌ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಆ ಕೇಂದ್ರಗಳಿಗೆ ಮಾತ್ರ ಅಕ್ರಮ ಸೀಮಿತವಾಗಿದೆಯೋ ಅಥವಾ ಬೇರೆ ಕಡೆಗೂ ನಡೆದಿದೆಯೋ ಎಂಬುದನ್ನು ನೋಡಬೇಕಿದೆ. ಹೀಗಾಗಿ ನಗರ ಮತ್ತು ಕೇಂದ್ರವಾರು ಫಲಿತಾಂಶ ಪ್ರಕಟಿಸಿದರೆ ಅಕ್ರಮದ ಬಗ್ಗೆ ಒಂದು ಚಿತ್ರಣ ಲಭಿಸಲಿದೆ. ಆರೋಪಿತ ಪರೀಕ್ಷಾ ಕೇಂದ್ರಗಳಲ್ಲಿನ ವಿದ್ಯಾರ್ಥಿಗಳಿಗೆ ಎಷ್ಟು ಅಂಕ? ಇತರ ಕೇಂದ್ರಗಳ ವಿದ್ಯಾರ್ಥಿಗಳಿಗೆ ಎಷ್ಟು ಅಂಕ ಎಂದು ಗೊತ್ತಾಗುತ್ತದೆ ಎಂದು ಹೇಳಿತು.

ಬಳಿಕ ಮುಂದಿನ ವಿಚಾರಣೆಯನ್ನು ಜು.22ಕ್ಕೆ ನಿಗದಿಪಡಿಸಿತು.

ಇಡೀ ನೀಟ್‌ ಪರೀಕ್ಷೆಯ ಪಾವಿತ್ರ್ಯ ಹಾಳಾಗಿದ್ದರೆ ಮಾತ್ರ ಮರುಪರೀಕ್ಷೆ: ಸುಪ್ರೀಂ

ನವದೆಹಲಿ: ಈ ಬಾರಿಯ ನೀಟ್‌-ಯುಜಿ ಪರೀಕ್ಷೆಯಲ್ಲಿ ‘ಇಡೀ ಪರೀಕ್ಷೆಯ ಪಾವಿತ್ರ್ಯ ಹಾಳಾಗಿದ್ದರೆ ಮಾತ್ರ ಮರುಪರೀಕ್ಷೆಗೆ ಆದೇಶಿಸಲಾಗುವುದು’ ಎಂದು ಸುಪ್ರೀಂಕೋರ್ಟ್‌ ಪುನರುಚ್ಚಾರ ಮಾಡಿದೆ.‘ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಈ ಅರ್ಜಿಗಳ ವಿಚಾರಣೆ ನಡೆಸಿ ಒಂದು ನಿರ್ಧಾರಕ್ಕೆ ಬರೋಣ. ಮೇ 5ರಂದು ನಡೆದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ‘ವ್ಯವಸ್ಥಿತವಾಗಿ’ ನಡೆದಿದೆ ಮತ್ತು ಇಡೀ ಪರೀಕ್ಷೆಯ ಪಾವಿತ್ರ್ಯ ಹಾಳಾಗಿದೆ ಎಂಬುದನ್ನು ಸಾಬೀತುಪಡಿಸಿ. ಪರೀಕ್ಷೆ ರದ್ದುಪಡಿಸಬೇಕು ಎಂಬುದಕ್ಕೆ ಕಾರಣ ತೋರಿಸಿ’ ಎಂದು ಅರ್ಜಿದಾರರಿಗೆ ಸುಪ್ರೀಂಕೋರ್ಟ್‌ ಪೀಠ ಗುರುವಾರ ಸೂಚಿಸಿತು.