ಸಾರಾಂಶ
ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಪ್ರಮುಖ ಪ್ರತಿಪಕ್ಷ ಬಿಜೆಪಿಯು ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ.ಮಾಜಿ ಸಚಿವ ಸಿ.ಟಿ.ರವಿ, ಹಾಲಿ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಹಾಗೂ ಮಾಜಿ ಶಾಸಕ ಎಂ.ಜಿ.ಮುಳೆ ಅವರು ಅಭ್ಯರ್ಥಿಗಳಾಗಿದ್ದು, ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಸೋಮವಾರ ಮಧ್ಯಾಹ್ನ 12.30ಕ್ಕೆ ತಮ್ಮ ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ.
ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಆದ್ಯತೆ ನೀಡಬೇಕು ಎಂಬ ಪಕ್ಷದ ಹಿರಿಯ ನಾಯಕರ ಒತ್ತಾಯಕ್ಕೆ ಮನ್ನಣೆ ಸಿಕ್ಕಿದ್ದು, ಮೂವರು ಅಭ್ಯರ್ಥಿಗಳ ಪೈಕಿ ರವಿಕುಮಾರ್ ಮತ್ತು ಮುಳೆ ಇಬ್ಬರೂ ಒಬಿಸಿಗೆ ಸೇರಿದವರಾಗಿದ್ದಾರೆ.ರವಿಕುಮಾರ್ ಅವರು ಹಾಲಿ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕರಾಗಿದ್ದು, ಅವರ ಕಾರ್ಯವೈಖರಿ ಆಧರಿಸಿ ಎರಡನೇ ಬಾರಿ ಅವಕಾಶ ನೀಡಲಾಗಿದೆ. ಮರಾಠ ಸಮುದಾಯಕ್ಕೆ ಈ ಬಾರಿ ಪ್ರಾತಿನಿಧ್ಯ ನೀಡಬೇಕು ಎಂಬ ಕೂಗಿನ ಹಿನ್ನೆಲೆಯಲ್ಲಿ ಎಂ.ಜಿ.ಮುಳೆ ಅವರಿಗೆ ಟಿಕೆಟ್ ಕೊಡಲಾಗಿದೆ.
ಇನ್ನು ಸಿ.ಟಿ.ರವಿ ಅವರಿಗೆ ಟಿಕೆಟ್ ನೀಡುವ ಬಗ್ಗೆ ರಾಜ್ಯ ನಾಯಕರಿಗೆ ಅಷ್ಟಾಗಿ ಒಲವು ಇರಲಿಲ್ಲ. ಕಳೆದ ವಿಧಾನಸಭಾ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ರವಿ ಅವರು ಪ್ರಸಕ್ತ ಲೋಕಸಭಾ ಚುನಾವಣೆಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದರೂ ಟಿಕೆಟ್ ಸಿಗಲಿಲ್ಲ. ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಅಭಿಪ್ರಾಯವನ್ನು ಹಲವು ರಾಜ್ಯ ನಾಯಕರು ಹೊಂದಿದ್ದರು.
ಆದರೆ, ಸಂಘ ಪರಿವಾರ ರವಿ ಅವರ ಬೆನ್ನಿಗೆ ನಿಂತಿದ್ದರಿಂದ ಟಿಕೆಟ್ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.ಕೇವಲ ಮೂರು ಸ್ಥಾನಗಳು ಲಭ್ಯವಿದ್ದರೂ ಆಕಾಂಕ್ಷಿಗಳ ಸಂಖ್ಯೆ 50 ದಾಟಿತ್ತು. ಇದು ರಾಜ್ಯ ನಾಯಕರಿಗೆ ತಲೆಬಿಸಿ ಉಂಟು ಮಾಡಿತ್ತು. ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಬಳಿಕ ಸುಮಾರು 15 ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ ಕಳುಹಿಸಲಾಗಿತ್ತು. ಈ ಪಟ್ಟಿಯಿಂದಲೇ ಈಗ ಟಿಕೆಟ್ ಘೋಷಣೆಯಾಗಿರುವ ಹೆಸರುಗಳನ್ನು ಆಯ್ಕೆ ಮಾಡಿದ್ದು, ಅಚ್ಚರಿಯ ಅಭ್ಯರ್ಥಿಗಳು ಇರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಹೆಸರನ್ನು ಅಂತಿಮಗೊಳಿಸಲು ಖುದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಬಲವಾಗಿ ಒತ್ತಾಯಿಸಿದ್ದರೂ, ಹೈಕಮಾಂಡ್ ನಿರಾಕರಿಸಿದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ತುಮಕೂರು ಕ್ಷೇತ್ರದ ಅಧಿಕೃತ ಅಭ್ಯರ್ಥಿ ಗೆಲುವಿಗಾಗಿ ಪ್ರಚಾರದಲ್ಲಿ ಮಾಧುಸ್ವಾಮಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳದೆ ಇದ್ದುದ್ದರಿಂದ ರಾಷ್ಟ್ರೀಯ ನಾಯಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.