ಟೆಹ್ರಾನ್‌: ಇರಾನ್‌ನ ಸರ್ವೋಚ್ಚ ನಾಯಕನಾಗಿದ್ದ ಅಲಿ ಖಮೇನಿಯನ್ನು ಹತ್ಯೆ ಮಾಡಿದ ಅಮೆರಿಕ-ಇಸ್ರೇಲ್‌ ಇದೀಗ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಗಾಗಿ ಹುಡುಕಾಟ ನಡೆಸುತ್ತಿವೆ.

ಗುಪ್ತಚರ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ

ತಂದೆಯ ಸಾವಿನ ಬಳಿಕ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಳ್ಳದ ಮೊಜ್ತಬಾ ಪತ್ತೆಗಾಗಿ ಶತ್ರುದೇಶಗಳ ಗುಪ್ತಚರ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪರ್ಷಿಯನ್ನರ ಹೊಸ ವರ್ಷ ನೊವ್ರುಜ್‌ ಪ್ರಯುಕ್ತ ಕಾಣಿಸಿಕೊಂಡಿಲ್ಲ

ಶುಕ್ರವಾರ ಪರ್ಷಿಯನ್ನರ ಹೊಸ ವರ್ಷ ನೊವ್ರುಜ್‌ ಪ್ರಯುಕ್ತ ಮೊಜ್ತಬಾ ತಮ್ಮ ತಂದೆಯಂತೆಯೇ ಸಾರ್ವಜನಿಕರನ್ನುದ್ದೇಶಿ ಮಾತನಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೊಜ್ತಬಾ ಅಲ್ಲಿಯೂ ಕಾಣಿಸಿಕೊಂಡಿಲ್ಲ. ಬದಲಾಗಿ ಅವರ ಲಿಖಿತ ಸಂದೇಶವನ್ನು ಟೆಲಿಗ್ರಾಂ ಮೂಲಕ ರವಾನಿಸಲಾಗಿದೆ. ಇದರಿಂದ ಅಮೆರಿಕ ಹಾಗೂ ಇಸ್ರೇಲ್‌ಗೆ ಕೊಂಚ ನಿರಾಸೆಯಾಗಿದೆ. ಆದರೂ ಮೊಜ್ತಬಾ ತಮ್ಮ ದಾಳಿಗೆ ಸಾವನ್ನಪ್ಪಿದ್ದಾರೆ ಎಂಬ ವಾದವನ್ನೇ ಮತ್ತೆ ಮತ್ತೆ ಉಚ್ಚರಿಸುತ್ತಿದ್ದು, ‘ಇರಾನ್‌ಗೆ ಮೊಜ್ತಬಾ ಅವರೇ ಆದೇಶ ನೀಡುತ್ತಿದ್ದಾರೆ’ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಅನುಮಾನ ವ್ಯಕ್ತಪಡಿಸಿವೆ.