ಒಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ವಲಸಿಗರ ಮೇಲೆ ನಾನಾ ರೀತಿಯ ಕಠಿಣ ನಿಯಮಗಳನ್ನು ಹೇರುತ್ತಿದ್ದರೆ, ಇನ್ನೊಂದೆಡೆ ಟ್ರಂಪ್ ಅವರ ಮಾಜಿ ಸಲಹೆಗಾರ, ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌, ಪ್ರತಿಭಾವಂತ ಭಾರತೀಯರಿಂದಾಗಿ ಅಮೆರಿಕಕ್ಕೆ ಸಾಕಷ್ಟು ಲಾಭವಾಗಿದೆ ಎಂದಿದ್ದಾರೆ.

ನವದೆಹಲಿ: ಒಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ವಲಸಿಗರ ಮೇಲೆ ನಾನಾ ರೀತಿಯ ಕಠಿಣ ನಿಯಮಗಳನ್ನು ಹೇರುತ್ತಿದ್ದರೆ, ಇನ್ನೊಂದೆಡೆ ಟ್ರಂಪ್ ಅವರ ಮಾಜಿ ಸಲಹೆಗಾರ, ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌, ಪ್ರತಿಭಾವಂತ ಭಾರತೀಯರಿಂದಾಗಿ ಅಮೆರಿಕಕ್ಕೆ ಸಾಕಷ್ಟು ಲಾಭವಾಗಿದೆ ಎಂದಿದ್ದಾರೆ.

ಜೆರೋಧಾ ಸಹಸಂಸ್ಥಾಪಕ, ಕನ್ನಡಿಗ ನಿಖಿಲ್‌ ಕಾಮತ್ ನಡೆಸಿಕೊಡುವ ಪಾಡ್‌ಕಾಸ್ಟ್‌ನಲ್ಲಿ ಭಾನುವಾರ ಮಾತನಾಡಿದ ಅವರು, ‘ಅಮೆರಿಕಕ್ಕೆ ಬಂದಿರುವ ಪ್ರತಿಭಾನ್ವಿತ ಭಾರತೀಯರಿಂದ ಅಮೆರಿಕ ಅಪಾರ ಪ್ರಯೋಜನ ಪಡೆದಿದೆ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಮತ್, ‘ಆದರೆ ಈಗ ಅದು ಬದಲಾಗುತ್ತಿರುವಂತೆ ತೋರುತ್ತಿದೆ’ ಎಂದು ಇತ್ತೀಚೆಗೆ ಟ್ರಂಪ್ ವಲಸಿಗರನ್ನು ಗುರಿಯಾಗಿಸಿ ಎಚ್‌1ಬಿ ವೀಸಾ ಶುಲ್ಕ ಏರಿಸಿದ ಘಟನೆಯನ್ನು ಪ್ರಸ್ತಾವಿಸಿದ್ದಾರೆ. ಬಳಿಕ ಇಬ್ಬರೂ ನಕ್ಕಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ದಿನ ‘ಶೌರ್ಯ ದಿವಸ’: ರಾಜಸ್ಥಾನ ಸಚಿವ ವಿವಾದ

ಜೈಪುರ: ಬಾಬ್ರಿ ಮಸೀದಿ ಧ್ವಂಸದ ದಿನವಾದ ಡಿಸೆಂಬರ್‌ 6 ಅನ್ನು ಶಾಲೆಗಳಲ್ಲಿ ‘ಶೌರ್ಯ ದಿವಸ್’ ಎಂದು ಆಚರಿಸಿ ಎಂದು ರಾಜಸ್ಥಾನ ಶಿಕ್ಷಣ ಮತ್ತು ಪಂಚಾಯತ್ ರಾಜ್ ಸಚಿವ ಮದನ್ ದಿಲಾವರ್ ಸೂಚನೆ ನೀಡಿ ವಿವಾದಕ್ಕೀಡಾಗಿದ್ದಾರೆ. ಅವರ ಸೂಚನೆಗೆ ಆಕ್ರೋಶ ವ್ಯಕ್ತವಾದ ಕಾರಣ, ಕೇವಲ 12 ತಾಸಿನಲ್ಲಿ ಆದೇಶವನ್ನು ರಾಜಸ್ಥಾನ ಶಿಕ್ಷಣ ಇಲಾಖೆ ಭಾನುವಾರ ಬೆಳಗ್ಗೆ ಹಿಂತೆಗೆದುಕೊಂಡಿದೆ. ‘ಡಿಸೆಂಬರ್ 6 ಬಾಬರಿ ಮಸೀದಿ ಧ್ವಂಸದ ವಾರ್ಷಿಕೋತ್ಸವವಾಗಿದ್ದು, ಅದನ್ನು ಶಾಲೆಗಳಲ್ಲಿ ಶೌರ್ಯ ದಿನ ಎಂದು ಆಚರಿಸಿ’ ಎಂದು ದಿಲಾವರ್‌ ಶನಿವಾರ ಆದೇಶಿಸಿದ್ದರು.

ನಡ್ಡಾ ಭಾಷಣದ ವೇಳೆ ಕುಸಿದು ಬಿದ್ದ ಭದ್ರತಾ ಸಿಬ್ಬಂದಿ 

ವಡೋದರಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾಷಣ ಮಾಡುತ್ತಿದ್ದ ವೇಳೆ, ಅವರ ಭದ್ರತಾ ಸಿಬ್ಬಂದಿ ಆಯಾಸದಿಂದ ಕುಸಿದು ಬಿದ್ದ ಅನಿರೀಕ್ಷಿತ ಘಟನೆ ವಡೋದರಾದಲ್ಲಿ ಶನಿವಾರ ನಡೆದಿದೆ.ಸಿಬ್ಬಂದಿ ಬಿದ್ದರೂ ಅವರತ್ತ ಲೆಕ್ಕಿಸದೆ ನಡ್ಡಾ ಭಾಷಣ ಮುಂದುವರಿಸಿದ ವಿಡಿಯೋ ವೈರಲ್‌ ಆಗಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.

ಆಗಿದ್ದೇನು?:ಸರ್ದಾರ್‌ ವಲ್ಲಭಭಾಯಿ ಪಟೇಲರ 150ನೇ ಜಯಂತಿ ಪ್ರಯುಕ್ತ ವಡೋದರಾದಲ್ಲಿ ರಾಷ್ಟ್ರೀಯ ಏಕತಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ನಡ್ಡಾ ಭಾಷಣ ಮಾಡುತ್ತಿದ್ದರೆ, ಇತರ ಗಣ್ಯರು ವೇದಿಕೆ ಮೇಲಿದ್ದರು. ಈ ವೇಳೆ ವೇದಿಕೆಯ ಮುಂಭಾಗದಲ್ಲಿ ನಿಂತಿದ್ದ ನಡ್ಡಾ ಅವರ ಝಡ್‌ ಪ್ಲಸ್‌ ಭದ್ರತಾ ಸಿಬ್ಬಂದಿ ನಿತ್ರಾಣವಾಗಿ ಕುಸಿದುಬಿದ್ದಿದ್ದಾರೆ. ತಕ್ಷಣ ಹಲವರು ಬಂದು ಸಿಬ್ಬಂದಿಯನ್ನು ಎತ್ತಿ ಕರೆದೊಯ್ದಿದ್ದಾರೆ. ಆದರೆ ನಡ್ಡಾ ಮಾತ್ರ ಭಾಷಣವನ್ನು ಕ್ಷಣಕಾಲವೂ ನಿಲ್ಲಿಸದೆ ಮುಂದುವರಿಸಿದರೆ, ವೇದಿಕೆ ಮೇಲಿದ್ದ ಇತರರು ಯಥಾಸ್ಥಿತಿ ಕುಳಿತಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಬಿಜೆಪಿ ನಾಯಕರ ಈ ನಡೆಗೆ ನೆಟ್ಟಿಗರು ಕಿಡಿ ಕಾರಿದ್ದಾರೆ.

ಗಗನಸಖಿಗೆ ಅಸಭ್ಯವಾಗಿ ಸ್ಪರ್ಶಿಸಿದ ಕೇರಳದ ಟೆಕ್ಕಿ ಬಂಧನ

 ಹೈದರಾಬಾದ್‌ : ದುಬೈನಿಂದ ಹೈದರಾಬಾದ್‌ಗೆ ತೆರಳುವ ವಿಮಾನದಲ್ಲಿ ಗಗನಸಖಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಪೊಲೀಸರು ಕೇರಳ ಮೂಲದ 30 ವರ್ಷದ ಸಾಫ್ಟ್‌ವೇರ್‌ ಉದ್ಯೋಗಿಯನ್ನು ಬಂಧಿಸಿದ್ದಾರೆ.

ಗಗನಸಖಿ ನೀಡಿದ ದೂರಿನ ಪ್ರಕಾರ, ಆಕೆ ವಿಮಾನ ನಿಲ್ದಾಣದಲ್ಲಿ ಸೇವೆ ಒದಗಿಸುತ್ತಿದ್ದಾಗ, ಆತ ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆತನ ವಿರುದ್ಧ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಯಲ್ಲಿ ಲೈಂ*ಕ ಕಿರುಕುಳದ ಪ್ರಕರಣ ದಾಖಲಾಗಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ.

 ಅದಕ್ಕೂ ಮುನ್ನ ಆರೋಪಿ ಮದ್ಯದ ಅಮಲಿನಲ್ಲಿರುವುದನ್ನು ವಿಮಾನದ ಸಿಬ್ಬಂದಿ ಗಮನಿಸಿದ್ದಾರೆ. ವಿಮಾನ ಲ್ಯಾಂಡ್‌ ಆಗುತ್ತಿದ್ದಂತೆ ಕ್ಯಾಪ್ಟನ್‌ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಗೆ ವಿಚಾರ ಮುಟ್ಟಿಸಲಾಯಿತು. ಈ ವೇಳೆ ಪ್ರಶ್ನಿಸಿದಾಗ ತನ್ನ ಪಾಸ್ಪೋರ್ಟ್‌ ಕಳೆದುಹೋಗಿದೆ ಎಂದಿದ್ದಾನೆ. ಆಗ ವಿಮಾನ ಸಿಬ್ಬಂದಿ ಹುಡುಕಾಟ ನಡೆಸಿದಾಗ ಅವಹೇಳನಕಾರಿ ಮತ್ತು ನಿಂದನಾತ್ಮಕ ಬರಹಗಳಿರುವ ಪೋಸ್ಟ್‌ಗಳು ಆತನ ಮೊಬೈಲಲ್ಲು ಪತ್ತೆಯಾಗಿವೆ.