ಸಾರಾಂಶ
ಕೇಂದ್ರದಲ್ಲಿ ಬಿಜೆಪಿ ಸತತ ಎರಡು ಬಾರಿ ಗದ್ದುಗೆ ಏರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉತ್ತರಪ್ರದೇಶದಲ್ಲಿ ಈ ಬಾರಿ ಯಾರೂ ನಿರೀಕ್ಷಿಸದ ರೀತಿ ಫಲಿತಾಂಶ ಬಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಸಮಾಜವಾದಿ ಪಕ್ಷ ನೇತೃತ್ವದ ಇಂಡಿಯಾ ಒಕ್ಕೂಟ ಸಡ್ಡು ಹೊಡೆದಿದ್ದು, ಅರ್ಧದಷ್ಟು ಸ್ಥಾನಗಳನ್ನು ಬಾಚಿಕೊಂಡಿದೆ. ಉತ್ತರಪ್ರದೇಶ ಗೆದ್ದವರು ದೇಶ ಆಳುತ್ತಾರೆ ಎಂಬ ನಾಣ್ಣುಡಿಯಂತೆ, ಬಿಜೆಪಿ ಈ ಬಾರಿ ಬಹುಮತ ಕಳೆದುಕೊಂಡಿದ್ದರ ಹಿಂದೆ ಉತ್ತರ ಪ್ರದೇಶದಲ್ಲಿನ ಸೋಲು ಪ್ರಮುಖ ಕಾರಣವಾಗಿದೆ.
ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಗ್ಗೂಡಿ ನಡೆಸುತ್ತಿದ್ದ ಪ್ರಚಾರವನ್ನು ಬಿಜೆಪಿಗರು ‘ಇಬ್ಬರು ಹುಡುಗರ ಗ್ಯಾಂಗ್’ ಎಂದು ಲೇವಡಿ ಮಾಡಿದ್ದರು. ಆದರೆ ಇದೀಗ ಇದೇ ಹುಡುಗರ ಜೋಡಿ ಜಾದೂ ಮಾಡಿದ್ದು, ಬಿಜೆಪಿಯನ್ನು ಮಣ್ಣು ಮುಕ್ಕಿಸುವಲ್ಲಿ ಸಫಲವಾಗಿದೆ.
ಗಮನಾರ್ಹ ಎಂದರೆ, ಉತ್ತರಪ್ರದೇಶ ಹಿಂದಿನಾಡು. ವಿಧಾನಸಭೆಯಿಂದ ಸ್ಥಳೀಯ ಸಂಸ್ಥೆಗಳವರೆಗೂ ಬಿಜೆಪಿ ಶಾಸಕರೇ ಇದ್ದಾರೆ. ಆದರೂ ಪಕ್ಷ ಅಲ್ಲಿ ಕಳಪೆ ಸಾಧನೆ ತೋರಿದೆ. ಕಳೆದ ಜನವರಿಯಲ್ಲಿ ಅಯೋಧ್ಯೆ ರಾಮಮಂದಿರವನ್ನು ಉದ್ಘಾಟಿಸಿ, ಅದರ ಲಾಭವನ್ನು ಪಡೆಯಲು ಬಿಜೆಪಿ ಯತ್ನಿಸಿತ್ತು. ಆದರೆ ಉತ್ತರಪ್ರದೇಶ ಇರಲಿ, ಅಯೋಧ್ಯೆಯಲ್ಲೇ ಬಿಜೆಪಿ ಅಭ್ಯರ್ಥಿ ಹಿನ್ನಡೆ ಅನುಭವಿಸಿದ್ದಾರೆ.
ಅಮೇಠಿಯಲ್ಲಿ ನೆಹರು-ಗಾಂಧಿ ಮನೆತನಕ್ಕೆ ಸಡ್ಡು ಹೊಡೆದಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ರಾಹುಲ್ ಆಪ್ತ, ಪಂಜಾಬ್ ಮೂಲದ ಕಿಶೋರಿ ಲಾಲ್ ವಿರುದ್ಧ ಭಾರಿ ಅಂತರದಿಂದ ಪರಾಜಿತರಾಗಿದ್ದಾರೆ. ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಜಯಭೇರಿ ಬಾರಿಸಿದ್ದಾರೆ.
ಯಾದವೇತರ ಒಬಿಸಿ, ಮೇಲ್ವರ್ಗಗಳಿಗೆ ಅಖಿಲೇಶ್ ಟಿಕೆಟ್ ಹಂಚಿದ್ದು, ಬಿಜೆಪಿ ರೀತಿ ದೊಡ್ಡ ರ್‍ಯಾಲಿಗಳ ಬದಲಿಗೆ ಸಣ್ಣ ಸಭೆಗಳಿಗೆ ಒತ್ತು ನೀಡಿದ್ದು ಎಸ್‌ಪಿ ಮೈತ್ರಿಕೂಟದ ಗೆಲುವಿಗೆ ಕಾರಣ ಎನ್ನಲಾಗಿದೆ. ಜತೆಗೆ ನಿರುದ್ಯೋಗ, ಬೆಲೆ ಏರಿಕೆ, ಅಗ್ನಿವೀರ ಯೋಜನೆಗಳು ಬಿಜೆಪಿಗೆ ದುಬಾರಿಯಾಗಿ ಪರಿಣಮಿಸಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
10 ವರ್ಷಗಳ ಕಾಲ ಆಡಳಿತ ನಡೆಸಿಯೂ ಬಿಜೆಪಿ ಅರ್ಧದಷ್ಟು ಸ್ಥಾನಗಳನ್ನು ಉಳಿಸಿಕೊಂಡಿರುವುದು ಗಮನಾರ್ಹ. ಇಷ್ಟು ಸ್ಥಾನಗಳನ್ನು ಉಳಿಸಿಕೊಳ್ಳದಿದ್ದರೆ ಇನ್ನಷ್ಟು ಸಂಕಷ್ಟ ಎದುರಾಗುತ್ತಿತ್ತು ಎನ್ನಲಾಗಿದೆ.--
ಗೆದ್ದ ಪ್ರಮುಖರು
ನರೇಂದ್ರ ಮೋದಿ, ರಾಹುಲ್ ಗಾಂಧಿ, ಮನೇಕಾ ಗಾಂಧಿ, ಅಖಿಲೇಶ್ ಯಾದವ್, ಡಿಂಪಲ್ ಯಾದವ್