ಹಳಿತಪ್ಪಿದ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್‌ ರೈಲಿನ 8 ಕೋಚ್‌ಗಳು : 3 ಸಾವು- ದುಷ್ಕೃತ್ಯ ಶಂಕೆ

| Published : Jul 19 2024, 12:47 AM IST / Updated: Jul 19 2024, 05:25 AM IST

ಸಾರಾಂಶ

ದೇಶದಲ್ಲಿ ರೈಲು ಅಪಘಾತಗಳ ಸರಣಿ ಮುಂದುವರೆದಿದೆ. ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್‌ ರೈಲಿನ 4ಎ.ಸಿ ಕೋಚ್‌ಗಳು ಸೇರಿ 8 ಕೋಚ್‌ಗಳು ಹಳಿ ತಪ್ಪಿದ ಪರಿಣಾಮ ಮೂವರು ಪ್ರಯಾಣಿಕರು ಸಾವನ್ನಪ್ಪಿ 34 ಜನ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗೊಂಡಾ-ಝಾನ್ಸಿ ನಡುವೆ ಗುರುವಾರ ನಡೆದಿದೆ.

ಗೊಂಡಾ (ಉತ್ತರ ಪ್ರದೇಶ): ದೇಶದಲ್ಲಿ ರೈಲು ಅಪಘಾತಗಳ ಸರಣಿ ಮುಂದುವರೆದಿದೆ. ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್‌ ರೈಲಿನ 4ಎ.ಸಿ ಕೋಚ್‌ಗಳು ಸೇರಿ 8 ಕೋಚ್‌ಗಳು ಹಳಿ ತಪ್ಪಿದ ಪರಿಣಾಮ ಮೂವರು ಪ್ರಯಾಣಿಕರು ಸಾವನ್ನಪ್ಪಿ 34 ಜನ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗೊಂಡಾ-ಝಾನ್ಸಿ ನಡುವೆ ಗುರುವಾರ ನಡೆದಿದೆ.

ಇದರ ಬೆನ್ನಲ್ಲೇ ಇದು ದುಷ್ಕೃತ್ಯ ಇರಬಹುದು ಎಂದು ಶಂಕೆ ಉಂಟಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ಆರಂಭಿಸಲು ಪೊಲೀಸರು ಹಾಗೂ ರೈಲ್ವೆ ಇಲಾಖೆ ನಿರ್ಧರಿಸಿವೆ. ರೈಲು ಚಾಲಕ ಮಾತನಾಡಿ, ‘ನಾನು ಸಾಗುವ ಮಾರ್ಗದಲ್ಲಿ ಸ್ಫೋಟದ ಶಬ್ದ ಕೇಳಿತು. 

ಹೀಗಾಗಿ ಎಮರ್ಜೆನ್ಸಿ ಬ್ರೇಕ್‌ ಹಾಕಿದೆ. ಅಷ್ಟರಲ್ಲೇ ರೈಲು ಹಳಿತಪ್ಪಿತು’ ಎಂದಿದ್ದಾನೆ. ಇನ್ನು ಕೆಲವು ಪ್ರಯಾಣಿಕರು ಕೂಡ ಸ್ಫೋಟ ಶಬ್ದ ಕೇಳಿದ ತಕ್ಷಣ ರೈಲು ಹಳಿತಪ್ಪಿದೆ ಎಂದಿದ್ದು, ಚಾಲಕನ ಹೇಳಿಕೆ ಅನುಮೋದಿಸಿದ್ದಾರೆ. ಹೀಗಾಗಿ ಇದು ಹಳಿಗಳನ್ನು ಸ್ಫೋಟಿಸಿ ನಡೆಸಿದ ದುಷ್ಕೃತ್ಯವೇ ಎಂಬ ಬಲವಾದ ಗುಮಾನಿ ಉಂಟಾಗಿದೆ.ಜೂ.17ರಂದು ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಗೂಡ್ಸ್‌ ರೈಲು ಮಧ್ಯೆ ಪ.ಬಂಗಾಳದಲ್ಲಿ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ನಂತರದ 2ನೇ ಘಟನೆ ಇದಾಗಿದೆ.

ಆಗಿದ್ದೇನು?:

‘ಬುಧವಾರ ರಾತ್ರಿ ಚಂಡೀಗಢದಿಂದ ಹೊರಟ 15904 ಸಂಖ್ಯೆಯ ರೈಲು ಉತ್ತರಪ್ರದೇಶದ ಗೊಂಡಾ ಹಾಗೂ ಝಾನ್ಸಿ ಸನಿಹದ ಪಿಕ್ವರಾದಲ್ಲಿ ಸಾಗುತ್ತಿದ್ದ ವೇಳೆ ಅಪಘಾತಕ್ಕೆ ತುತ್ತಾಗಿದೆ. ಗುರುವಾರ ಮಧ್ಯಾಹ್ನ 2:37ಕ್ಕೆ ರೈಲಿನ 12 ಕೋಚ್‌ಗಳ ಪೈಕಿ 8 ಕೋಚ್‌ಗಳು ಹಳಿ ತಪ್ಪಿವೆ’ ಎಂದು ಈಶಾನ್ಯ ರೈಲ್ವೆ ಪಿಆರ್‌ಒ ಹೇಳಿದ್ದಾರೆ.

ವೇಗದಲ್ಲಿ ರೈಲು ಸಾಗುವಾಗಲೇ ಹಳಿ ತಪ್ಪಿದ ಪರಿಣಾಮ ಪಕ್ಕದ ಹೊಲಗಳಲ್ಲೂ ಬೋಗಿಗಳು ಹೋಗಿ ಬಿದ್ದಿದ್ದು, ಪ್ರಯಾಣಿಕರು ರೈಲಿಂದ ಹೊರಬರಲು ಹರಸಾಹಸ ಮಾಡಿದ್ದಾರೆ. ಹಳಿ ತಪ್ಪಿ ವಾಲಿದ ಬೋಗಿಗಳಲ್ಲಿ ಜನ ತಮ್ಮ ವಸ್ತುಗಳಿಗಾಗಿ ಹುಡುಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಅಪಘಾತದ ಕಾರಣ ಆ ಮಾರ್ಗದಲ್ಲಿ ಸಂಚರಿಸುವ ಅನ್ಯ ರೈಲುಗಳ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಅವುಗಳ ಮಾರ್ಗವನ್ನು ಬದಲಿಸಲಾಗಿದೆ. ನಾಲ್ಕು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು, 40 ಜನರ ವೈದ್ಯಕೀಯ ತಂಡ ಹಾಗೂ 15 ಆಂಬುಲೆನ್ಸ್‌ಗಳನ್ನು ನಿಯೋಜಿಸಿ ರಕ್ಷಣಾ ಕಾರ್ಯ ನಡೆಸಲಾಗದೆ.

ಮೋದಿ, ವೈಷ್ಣವ್ ಹೊಣೆ ಹೊರಲಿ- ಕಾಂಗ್ರೆಸ್‌:  ರೈಲು ಹಳಿತಪ್ಪಿದ ಲೋಪದ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಅವರು ಹೊರಬೇಕು. ಎಂದು ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ. ಮೋದಿ ಅಡಿ ರೈಲ್ವೆ ಅಪಾಯಕ್ಕೆ ಸಿಲುಕಿದ್ದಕ್ಕೆ ಮತ್ತೊಂದು ಉದಾಹರಣೆ ಇದು ಎಂದಿದ್ದಾರೆ.