ಸಾರಾಂಶ
ಉತ್ತರಾಖಂಡದಲ್ಲೀ ಭೀಕರ ದುರಂತ. ಪೈಪ್ ಮೂಲಕ ಗಾಳಿ, ನೀರು, ಆಹಾರ.
ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಸಿಲ್‌ಕ್ಯಾರಾ ಮತ್ತು ದಾಂಡಲ್‌ಗಾಂವ್ ಮಧ್ಯೆ ನಿರ್ಮಾಣ ಹಂತದಲ್ಲಿದ್ದ ರಾಷ್ಟ್ರೀಯ ಹೆದ್ದಾರಿಯ ಸುರಂಗದ ಒಂದು ಭಾಗ ಕುಸಿದು 40 ಮಂದಿ ಕಾರ್ಮಿಕರು ಅಪಾಯದಲ್ಲಿ ಸಿಲುಕಿದ್ದಾರೆ. ಕಾರ್ಮಿಕರು ಸಿಲುಕಿರುವ ಜಾಗದಿಂದ ಸುರಂಗದ ಪ್ರವೇಶ ದ್ವಾರವು 200 ಮೀ. ದೂರದಲ್ಲಿದ್ದು, ಅವರಿಗೆ ಉಸಿರಾಟದ ತೊಂದರೆಯಾಗದಂತೆ ಆಕ್ಸಿಜನ್ ಪೈಪ್‌ಗಳನ್ನು ನೀಡಲಾಗಿದೆ. ಅಲ್ಲದೇ ಪೈಪ್ ಮೂಲಕ ನೀರು, ಆಹಾರದ ಪೊಟ್ಟಣಗಳನ್ನು ಒದಗಿಸಲಾಗಿದ್ದು, ಜೆಸಿಬಿ ಮತ್ತು ಡ್ರಿಲ್ಲಿಂಗ್ ಮಶಿನ್‌ಗಳಿಂದ 160 ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
12 ತಾಸಿಗಿಂತಲೂ ಹೆಚ್ಚಿನ ಅವಧಿಯ ರಕ್ಷಣಾ ಕಾರ್ಯ ಫಲ ನೀಡಿಲ್ಲ. ಆದರೆ ವಾಟರ್ ಔಟ್‌ಲೆಟ್‌ನಿಂದ ನೀರು ಹೊರಬಂದಿದೆ. ಇದು ಅವರು ಸುರಕ್ಷಿತವಾಗಿದ್ದಾರೆ ಎಂಬುದ ಸಂಕೇತ ಎಂದು ರಸ್ತೆ ನಿರ್ಮಾಣ ಹೊಣೆ ಹೊತ್ತಿರುವ ನವಯುಗ ಕನ್‌ಸ್ಟ್ರಕ್ಷನ್ ಅಧಿಕಾರಿ ಭಾನುವಾರ ರಾತ್ರಿ ಹೇಳಿದ್ದಾರೆ.ಆಗಿದ್ದೇನು?:
ಇಲ್ಲಿನ ಬ್ರಹ್ಮಖಾಲ್- ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮುಂಜಾನೆ 6 ರಿಂದ 7 ಗಂಟೆ ನಡುವೆ ಸುರಂಗದ ಒಂದು ಭಾಗ ದಿಢೀರನೇ ಕುಸಿದಿದೆ. ಈ ವೇಳೆ ಸ್ಥಳದಲ್ಲಿದ್ದ 40 ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾರ್ಮಿಕರು ಹೆಚ್ಚಿನವರು ಉತ್ತರ ಭಾರತದ ರಾಜ್ಯದವರು.ಇನ್ನು ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸುರಂಗವು ಚಾರ್ ಧಾಮ್ ರಸ್ತೆ ಯೋಜನೆಯ ಭಾಗವಾಗಿದ್ದು, ಇದು ಉತ್ತರಕಾಶಿ ಮತ್ತು ಯಮುನೋತ್ರಿ ನಡುವಿನ ಪ್ರಯಾಣದ ಅವಧಿಯನ್ನು 26 ಕಿ.ಮೀಗಳಷ್ಟು ಕಡಿಮೆ ಮಾಡಲಿದೆ.