ಸಾರಾಂಶ
ಉತ್ತರಾಖಂಡದ ಶ್ರೀಕ್ಷೇತ್ರ ಬದರಿನಾಥ ಸನಿಹದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಸಿಲುಕಿದ್ದ ಗಡಿ ರಸ್ತೆ ಸಂಸ್ಥೆಯ (ಬ್ರೋ) 50 ಕಾರ್ಮಿಕರನ್ನು ಹೊರತರಲಾಗಿದ್ದು, ಅವರಲ್ಲಿ 4 ಜನ ಮೃತಪಟ್ಟಿದ್ದಾರೆ. ಇನ್ನೂ 5 ಕಾರ್ಮಿಕರ ರಕ್ಷಣೆ ಬಾಕಿ ಇದೆ.
ಡೆಹ್ರಾಡೂನ್: ಉತ್ತರಾಖಂಡದ ಶ್ರೀಕ್ಷೇತ್ರ ಬದರಿನಾಥ ಸನಿಹದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಸಿಲುಕಿದ್ದ ಗಡಿ ರಸ್ತೆ ಸಂಸ್ಥೆಯ (ಬ್ರೋ) 50 ಕಾರ್ಮಿಕರನ್ನು ಹೊರತರಲಾಗಿದ್ದು, ಅವರಲ್ಲಿ 4 ಜನ ಮೃತಪಟ್ಟಿದ್ದಾರೆ. ಇನ್ನೂ 5 ಕಾರ್ಮಿಕರ ರಕ್ಷಣೆ ಬಾಕಿ ಇದೆ.
ಈ ಬಗ್ಗೆ ಮಾತನಾಡಿರುವ ಸೇನಾ ವಕ್ತಾರರು, ‘ಭಾರತೀಯ ಸೇನೆಯ 3, ವಾಯುಪಡೆಯ 3 ಹಾಗೂ ಸೇನೆ ಬಾಡಿಗೆಗೆ ಪಡೆದಿರುವ 1 ಸೇರಿ 6 ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಗಾಯಾಳು ಕಾರ್ಮಿಕರ ರಕ್ಷಣೆ ಹಾಗೂ ಸ್ಥಳಾಂತರಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ರಸ್ತೆಗಳು ಹಿಮಾವೃತವಾಗಿರುವ ಕಾರಣ ಸಂಚಾರಕ್ಕೆ ತೊಡಕಾಗಿದ್ದು, ಬದರಿನಾಥ ಹಾಗೂ ಜೋಶಿಮಠದ ನಡುವಿನ ಹೆದ್ದಾರಿ 15ರಿಂದ 20 ಕಡೆಗಳಲ್ಲಿ ಮುಚ್ಚಿಹೋಗಿದೆ ಎಂದು ಸೇನಾಧಿಕಾರಿ ಮಾಹಿತಿ ನೀಡಿದ್ದಾರೆ. ಬ್ರೋ ಕ್ಯಾಂಪ್‌ಗಳ ಬಳಿ ಕಾರ್ಮಿಕರು ಇದ್ದ 8 ಕಂಟೇನರ್‌ಗಳಿದ್ದು, ಅವುಗಳಲ್ಲಿ 5 ಮಾತ್ರ ಪತ್ತೆಯಾಗಿವೆ. ಉಳಿದ 3 ಇನ್ನೂ ಪತ್ತೆಯಾಗಿಲ್ಲ.