ವಿವಾಹಿತ ಸ್ತ್ರೀಯರು ಸಮಾರಂಭಕ್ಕೆಧರಿಸುವ ಚಿನ್ನಕ್ಕೆ ಈ ಊರಲ್ಲಿ ಮಿತಿ

| Published : Oct 29 2025, 01:15 AM IST

ವಿವಾಹಿತ ಸ್ತ್ರೀಯರು ಸಮಾರಂಭಕ್ಕೆಧರಿಸುವ ಚಿನ್ನಕ್ಕೆ ಈ ಊರಲ್ಲಿ ಮಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರಾಖಂಡದ ಕಂಧಾರ್‌ ಎಂಬ ಗ್ರಾಮದಲ್ಲಿ, ಆಭರಣಪ್ರಿಯ ಸ್ತ್ರೀಯರು ಶುಭಸಮಾರಂಭಗಳಲ್ಲಿ ಧರಿಸುವ ಚಿನ್ನಾಭರಣಗಳಿಗೆ ಮಿತಿ ಹೇರಲಾಗಿದೆ.

ಹೆಚ್ಚು ವೆಚ್ಚ ಮತ್ತು ಆಡಂಬರ ತಗ್ಗಿಸಲು ಕ್ರಮ

ಮೂಗುತಿ, ಓಲೆ, ಮಾಂಗಲ್ಯಕ್ಕಷ್ಟೇ ಅವಕಾಶ

ನಿಯಮ ಉಲ್ಲಂಘಿಸಿದರೆ 50000 ರು. ದಂಡ

ಡೆಹ್ರಾಡೂನ್‌: ಉತ್ತರಾಖಂಡದ ಕಂಧಾರ್‌ ಎಂಬ ಗ್ರಾಮದಲ್ಲಿ, ಆಭರಣಪ್ರಿಯ ಸ್ತ್ರೀಯರು ಶುಭಸಮಾರಂಭಗಳಲ್ಲಿ ಧರಿಸುವ ಚಿನ್ನಾಭರಣಗಳಿಗೆ ಮಿತಿ ಹೇರಲಾಗಿದೆ. ಆಭರಣ ಖರೀದಿಗೆಂದು ಅಧಿಕ ವೆಚ್ಚ ಮಾಡಿ ಜನ ಸಾಲಗಾರರಾಗುವುದನ್ನು ತಪ್ಪಿಸಲು ಹಾಗೂ ಸಮಾಜದಲ್ಲಿ ಸಮಾನತೆ ತರಲು ಈ ಹೊಸ ನಿಯಮವನ್ನು ರೂಪಿಸಲಾಗಿದ್ದು, ಇದನ್ನು ಉಲ್ಲಂಘಿಸುವವರಿಗೆ ಭಾರೀ ಮೊತ್ತದ ದಂಡವನ್ನೂ ನಿಗದಿಪಡಿಸಲಾಗಿದೆ.

ಬಡ ಪರಿವಾರಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಸಮುದಾಯ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾದ ನಿಯಮದ ಅನುಸಾರ, ಮದುವೆ ಹಾಗೂ ಇತರೆ ಶುಭಕಾರ್ಯಗಳಿಗೆ ಹಾಜರಾಗುವ ವಿವಾಹಿತ ಹೆಂಗಳೆಯರು ಕೇವಲ 3 ಬಗೆಯ ಆಭರಣ ತೊಡಬಹುದಾಗಿದೆ. ಅವುಗಳು ಮೂಗುತಿ, ಕಿವಿಯೋಲೆ, ಮಾಂಗಲ್ಯ ಸರ. ಉಳಿದೆಲ್ಲಾ ಆಡಂಬರದ ಆಭರಣ ನಿರ್ಬಂಧಿಸಲಾಗಿದೆ. ಒಂದೊಮ್ಮೆ ಈ ನಿಯಮವನ್ನು ಉಲ್ಲಂಘಿಸಿದರೆ, ಅಂಥವರ ಮೇಲೆ 50,000 ರು. ದಂಡ ವಿಧಿಸಲಾಗುವುದು.

ಉದ್ದೇಶವೇನು?:

ಮದುವೆಯಂತಹ ಸಮಾರಂಭಗಳು ಪವಿತ್ರ ಆಚರಣೆಗಳೇ ಹೊರತು ತೋರಿಕೆಗಾಗಿ ಮಾಡುವ ಆಡಂಬರವಲ್ಲ ಎಂಬುದು ಗ್ರಾಮಸ್ಥರ ನಿಲುವು. ಅನ್ಯರನ್ನು ನೋಡಿಕೊಂಡು, ಅವರನ್ನು ಮೀರಿಸುವಂತೆ ಮಿಂಚುವ ಸ್ತ್ರೀಸಹಜ ಹಂಬಲದಿಂದ ಪರಿವಾರಕ್ಕೆ ಆರ್ಥಿಕ ಹೊರೆಯಾಗುತ್ತದೆ. ಜತೆಗೆ ಇದರಿಂದ ಸಮಾಜದಲ್ಲಿ ಜನರ ನಡುವಿನ ಅಂತರವೂ ಹೆಚ್ಚುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಈ ನಿಯಮ ರೂಪಿಸಲಾಗಿದೆ. ಈ ಮೂಲಕ ಕಂಧಾರ್‌ ಗ್ರಾಮಸ್ಥರು ಹೊಸ ರೀತಿಯ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ.