ಸಾರಾಂಶ
ನವದೆಹಲಿ : ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅವ್ಯವಹಾರಕ್ಕೂ, ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಗೂ ನಂಟು ಇರುವುದು ಪತ್ತೆಯಾಗಿದೆ ಎಂದು ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಸ್ಫೋಟಕ ಮಾಹಿತಿ ನೀಡಿದೆ.
ನಿಗಮದಿಂದ ಅಕ್ರಮವಾಗಿ ವರ್ಗಾವಣೆ ಮಾಡಲಾದ ಹಣವನ್ನು ಲೋಕಸಭಾ ಚುನಾವಣೆ ವೇಳೆ ಮದ್ಯ ಖರೀದಿಗೆ ಬಳಸಿರುವುದು ಕಂಡು ಬಂದಿದೆ ಎಂದು ಇ.ಡಿ. ಬುಧವಾರ ಬಿಡುಗಡೆ ಮಾಡಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಅಲ್ಲದೆ ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮನೆ ಮೇಲೆ ದಾಳಿ ನಡೆಸಿದ ವೇಳೆ, ಅಕ್ರಮದ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿರುವ ಕುರಿತೂ ದಾಖಲೆಗಳು ಸಿಕ್ಕಿವೆ ಎಂದು ಇ.ಡಿ. ಮಾಹಿತಿ ನೀಡಿದೆ.ಈ ಮಾಹಿತಿ, ಪ್ರಕರಣದಲ್ಲಿ ಪಕ್ಷದ ಯಾವುದೇ ಸಚಿವರು, ಶಾಸಕರು ಭಾಗಿಯಾಗಿಲ್ಲ ಎಂದು ವಾದಿಸಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಇರುಸುಮುರಸು ಉಂಟುಮಾಡಿದೆ.ಇ.ಡಿ. ಹೇಳಿದ್ದೇನು?:
ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಕುರಿತ ಪ್ರಕರಣದ ತನಿಖೆ ವೇಳೆ, 90 ಕೋಟಿ ರು. ಹಣವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ 18 ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಲಾಗಿರುವುದು ಕಂಡುಬಂದಿದೆ. ಹೀಗೆ ವರ್ಗ ಮಾಡಿದ ಹಣವನ್ನು ಆ ರಾಜ್ಯಗಳಲ್ಲಿ ಮತ್ತೆ ಹಲವು ನಕಲಿ ಖಾತೆಗಳಿಗೆ ಹಂಚಲಾಗಿತ್ತು. ಹೀಗೆ ಹಂಚಿದ ಹಣವನ್ನು ಆರೋಪಿಗಳು ಹಂಚಿಕೊಂಡಿದ್ದಾರೆ ಮತ್ತು ಚಿನ್ನ ಖರೀದಿಗೆ ಬಳಸಿರುವುದು ಕಂಡುಬಂದಿದೆ. ಅಲ್ಲದೆ ಲೋಕಸಭಾ ಚುನಾವಣೆಗೂ ಮುನ್ನ ಮದ್ಯ ಖರೀದಿಗೆ ಹಣ ಬಳಸಲಾಗಿದೆ. ಅಲ್ಲದೆ ಅಕ್ರಮವಾಗಿ ವರ್ಗ ಮಾಡಿಕೊಂಡ ಹಣವನ್ನು ಲ್ಯಾಂಬೋರ್ಗಿನಿಯಂಥ ಐಷಾರಾಮಿ ಕಾರು ಖರೀದಿಗೂ ಬಳಸಲಾಗಿದೆ ಎಂದು ಇ.ಡಿ. ಮಾಹಿತಿ ನೀಡಿದೆ.
ಇನ್ನು, ಬಿ.ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಅವರ ಮನೆ ಮೇಲೆ ಇತ್ತೀಚೆಗೆ ನಡೆಸಿದ ದಾಳಿ ವೇಳೆ, ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ವರ್ಗಾಯಿಸಿದ ಹಣವನ್ನು ಲೋಕಸಭಾ ಚುನಾವಣೆ ಬಳಸಿದ್ದರಲ್ಲಿ ಇಬ್ಬರ ಪಾತ್ರದ ಕುರಿತು ಸಾಕಷ್ಟು ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಜೊತೆಗೆ ಬಿ.ನಾಗೇಂದ್ರ ಅವರ ಆಪ್ತರು ಹಣ ವರ್ಗಾವಣೆ ಮತ್ತು ಹಣ ನಿರ್ವಹಣೆಯಲ್ಲಿ ಭಾಗಿಯಾಗಿದ್ದರ ಕುರಿತೂ ಮಾಹಿತಿ ಸಿಕ್ಕಿದೆ. ಇದಲ್ಲದೇ ದದ್ದಲ್ ಅವರ ಮನೆ ಮೇಲೆ ನಡೆಸಿದ ದಾಳಿ ವೇಳೆ ಅಕ್ರಮವಾಗಿ ವರ್ಗಾವಣೆಯಾದ ಹಣ ಬಳಕೆ ಮಾಡಿರುವ ಕುರಿತು ಮಹತ್ವದ ದಾಖಲೆಗಳು ಸಿಕ್ಕಿವೆ ಎಂದು ಇ.ಡಿ. ಹೇಳಿದೆ.ಈ ಹಗರಣದ ಸಂಬಂಧ ನಾಗೇಂದ್ರ ಈಗಾಗಲೇ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇ.ಡಿ. ಅವರನ್ನು ತನ್ನ ವಶಕ್ಕೆ ಪಡೆದಿದೆ. ಮತ್ತೊಂದೆಡೆ ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿದ್ದ ದದ್ದಲ್ ಹಗರಣ ಬೆಳಕಿಗೆ ಬಂದ ಬಳಿಕ ನಾಪತ್ತೆಯಾಗಿದ್ದಾರೆ.ಏನಿದು ಪ್ರಕರಣ?:
ವಾಲ್ಮೀಕಿ ನಿಗಮದಿಂದ ಹಣ ಹಲವಾರು ಖಾತೆಗಳಿಗೆ ಅಕ್ರಮವಾಗಿ ವರ್ಗ ಆಗಿದೆ ಎಂದು ಪತ್ರ ಬರೆದಿಟ್ಟು ನಿಗಮದ ಅಧಿಕಾರಿ ಚಂದ್ರಶೇಖರನ್ ಮೇ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗೆ ಹಗರಣ ಬೆಳಕಿಗೆ ಬಂದಿತ್ತು. ಅದಾದ ಬಳಿಕ ಸಚಿವ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
-