ಅಮೆರಿಕ, ಇರಾನ್‌ ನಡುವಿನ ತಿಂಗಳ ಯುದ್ಧದ ಸಂಧಾನ ಮಾತುಕತೆಗೆ ಇಸ್ಲಾಮಾಬಾದ್‌ನಲ್ಲಿ ವೇದಿಕೆ ಸಜ್ಜಾಗಿರುವ ನಡುವೆ ಅಮೆರಿಕದ ಜತೆ ಆಟ ಆಡಬೇಡಿ ಎಂದು ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಕೊಲ್ಲಿ ಮೇಲೆ ದಾಳಿ, ಹೋರ್ಮಜ್‌ ಬಂದ್‌ ಮಾಡಿದ್ದಕ್ಕೆ ಕಿಡಿ?ವಾಷಿಂಗ್ಟನ್‌: ಅಮೆರಿಕ, ಇರಾನ್‌ ನಡುವಿನ ತಿಂಗಳ ಯುದ್ಧದ ಸಂಧಾನ ಮಾತುಕತೆಗೆ ಇಸ್ಲಾಮಾಬಾದ್‌ನಲ್ಲಿ ವೇದಿಕೆ ಸಜ್ಜಾಗಿರುವ ನಡುವೆ ಅಮೆರಿಕದ ಜತೆ ಆಟ ಆಡಬೇಡಿ ಎಂದು ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಮತ್ತು ಇರಾನ್‌ ನಡುವೆ 2 ವಾರಗಳ ಕದನ ವಿರಾಮ ಘೋಷಣೆ ಹೊರತಾಗಿಯೂ ಕೊಲ್ಲಿ ದೇಶಗಳ ಮೇಲೆ ಶುಕ್ರವಾರವೂ ಇರಾನ್‌ ದಾಳಿ ನಡೆಸಿದ ಆರೋಪ ಕೇಳಿಬಂದಿತ್ತು. ಮತ್ತೊಂದೆಡೆ ಹೋರ್ಮಜ್‌ನಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ಇರಾನ್‌ ಅಡ್ಡಿ ಮಾಡಿತ್ತು. ಈ ಬಗ್ಗೆ ಟ್ರಂಪ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಇದೀಗ ವ್ಯಾನ್ಸ್‌ ಕೂಡಾ ಎಚ್ಚರಿಕೆಯ ದಾಟಿಯ ಮಾತುಗಳನ್ನು ಆಡಿದ್ದಾರೆ.

ಸಂಧಾನ ಮಾತುಕತೆಗೆ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವ್ಯಾನ್ಸ್‌, ‘ನಾವು ಮಾತುಕತೆಗೆ ಸಿದ್ಧರಿದ್ದೇವೆ. ಅದು ಸಕಾರಾತ್ಮಕವಾಗಿರುತ್ತದೆ ಎಂದು ಭಾವಿಸುತ್ತೇನೆ. ಇರಾನಿಯರು ಉತ್ತಮ ರೀತಿಯಲ್ಲಿ ಮಾತುಕತೆ ನಡೆಸಲು ಸಿದ್ಧರಿದ್ದರೆ ನಾವು ಖಂಡಿತವಾಗಿಯೂ ಕೈ ಚಾಚಲು ಸಿದ್ಧರಿದ್ದೇವೆ. ಅವರು ಆಟ ಆಡಿದರೆ ಅದು ಸ್ವೀಕಾರ್ಹವಲ್ಲ’ ಎಂದಿದ್ದಾರೆ.