‘ಪುಷ್ಪ-2’ ಸಿನಿಮಾದ ಪ್ರೀಮಿಯರ್‌ ಶೋ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಗೆ ನ್ಯಾಯ ಕೋರಿ ಗುಂಪೊಂದು ಚಿತ್ರದ ನಾಯಕ ನಟ ಅಲ್ಲು ಅರ್ಜುನ್‌ ಅವರ ಹೈದ್ರಾಬಾದ್‌ ಮನೆ ಮೇಲೆ ದಾಳಿ ನಡೆಸಿದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ.

ಹೈದರಾಬಾದ್‌: ‘ಪುಷ್ಪ-2’ ಸಿನಿಮಾದ ಪ್ರೀಮಿಯರ್‌ ಶೋ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಗೆ ನ್ಯಾಯ ಕೋರಿ ಗುಂಪೊಂದು ಚಿತ್ರದ ನಾಯಕ ನಟ ಅಲ್ಲು ಅರ್ಜುನ್‌ ಅವರ ಹೈದ್ರಾಬಾದ್‌ ಮನೆ ಮೇಲೆ ದಾಳಿ ನಡೆಸಿದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ. ಅದೃಷ್ಟವಶಾತ್‌ ದಾಳಿ ನಡೆದಾಗ ಮನೆಯಲ್ಲಿ ಅಲ್ಲು ಅರ್ಜುನ್‌ ಕುಟುಂಬದ ಯಾವುದೇ ಸದಸ್ಯರು ಇರದ ಕಾರಣ ಅನಾಹುತ ತಪ್ಪಿದೆ.

ಒಸ್ಮಾನಿಯಾ ವಿವಿಯ ಜಂಟಿ ಕಾರ್ಯಸಮಿತಿ ಸದಸ್ಯರು ಎನ್ನಲಾದವರ ತಂಡವೊಂದು ಮೊದಲಿಗೆ ಅಲ್ಲು ಅರ್ಜುನ್‌ ಮನೆಯ ಮೇಲೆ ಕಲ್ಲು, ಟೊಮೆಟೋ ಎಸೆದಿದೆ. ಬಳಿಕ ಗುಂಪು ಕಾಂಪೌಂಡ್‌ ಹಾರಿ ಒಳಗೆ ನುಗ್ಗಿ, ಒಳಗಿದ್ದ ಹೂವಿನ ಕುಂಡಗಳನ್ನು ಒಡೆದು ನಟನ ವಿರುದ್ಧ ಘೋಷಣೆ ಕೂಗಿದೆ. ಜೊತೆಗೆ ಮೃತ ಮಹಿಳೆಯ ಕುಟುಂಬಕ್ಕೆ 1 ಕೋಟಿ ರು. ಪರಿಹಾರ ನೀಡುವಂತೆ ಆಗ್ರಹಿಸಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ದಾಳಿ ನಡೆಸಿದ 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದು, ಮನೆಗೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.

ಈ ಗುಂಪು ನಟನ ಮನೆಯೊಳಗೆ ಬಿಟ್ಟು ಹೋದ ಘೋಷಣಾ ಫಲಕಗಳಲ್ಲಿ, ‘ಸಿನಿಮಾ ಮಾಡಿ ಕೋಟಿಗಟ್ಟಲೆ ಸಂಪಾದಿಸಿದರು. ಆದರೆ ಅದನ್ನು ನೋಡಲು ಬಂದವರು ಸಾಯುತ್ತಿದ್ದಾರೆ’ ಎಂದು ಬರೆಯಲಾಗಿತ್ತು.

ಮೃತ ಮಹಿಳೆ ಕುಟುಂಬಕ್ಕೆ ಅಲ್ಲು ಅರ್ಜುನ್‌ ಈಗಾಗಲೇ ವೈಯಕ್ತಿಕವಾಗಿ 25 ಲಕ್ಷ ರು. ಘೋಷಿಸಿದ್ದಾರೆ. ಆದರೆ ಇದೀಗ 1 ಕೋಟಿ ರು. ಪರಿಹಾರ ನೀಡುವಂತೆ ಆಗ್ರಹ ಕೇಳಿಬಂದಿದೆ. ಪುಷ್ಪಾ 2 ಚಿತ್ರ ಈಗಾಗಲೇ ವಿಶ್ವಾದ್ಯಂತ 1500 ಕೋಟಿ ರು. ಸಂಪಾದಿಸಿದೆ.