ಕರವೇ ಕನ್ನಡ ಫಲಕ ಸಮರ!

| Published : Dec 28 2023, 01:47 AM IST

ಸಾರಾಂಶ

ಕನ್ನಡೇತರ ನಾಮಫಲಕಗಳ ವಿರುದ್ಧ ಸಮರ ಸಾರಿರುವ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಟಿ.ಎ.ನಾರಾಯಣಗೌಡ ಬಣದ ಕಾರ್ಯಕರ್ತರು, ಬೆಂಗಳೂರು ಮಹಾನಗರದ ಬಹುತೇಕ ಕಡೆಗಳಲ್ಲಿ ರಾರಾಜಿಸುತ್ತಿದ್ದ ಆಂಗ್ಲ ಭಾಷೆಯ ನಾಮಫಲಕಗಳನ್ನು ಧ್ವಂಸಗೊಳಿದರು. ಕನ್ನಡೇತರ ಬ್ಯಾನರ್‌ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡೇತರ ನಾಮಫಲಕಗಳ ವಿರುದ್ಧ ಸಮರ ಸಾರಿರುವ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಟಿ.ಎ.ನಾರಾಯಣಗೌಡ ಬಣದ ಕಾರ್ಯಕರ್ತರು, ಬೆಂಗಳೂರು ಮಹಾನಗರದ ಬಹುತೇಕ ಕಡೆಗಳಲ್ಲಿ ರಾರಾಜಿಸುತ್ತಿದ್ದ ಆಂಗ್ಲ ಭಾಷೆಯ ನಾಮಫಲಕಗಳನ್ನು ಧ್ವಂಸಗೊಳಿದರು. ಕನ್ನಡೇತರ ಬ್ಯಾನರ್‌ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಗೇಟ್‌ ಸಮೀಪದಿಂದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕನ್ನಡ ನಾಮಫಲಕ ಜಾಗೃತಿ ಆಂದೋಲನದಲ್ಲಿ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡಿದರು. ಆರಂಭದಲ್ಲಿಯೇ ಸಾದಹಳ್ಳಿಯ ಟೋಲ್‌ನಲ್ಲಿ ಹಾಕಲಾಗಿದ್ದ ಆಂಗ್ಲ ಭಾಷೆಯ ನಾಮಫಲಕವನ್ನು ಧ್ವಂಸಗೊಳಿಸಿದ್ದರು.ದೇವನಹಳ್ಳಿ ಸಮೀಪದ ವಿಮಾನ ನಿಲ್ದಾಣ ರಸ್ತೆ ಮೂಲಕ ಬೆಂಗಳೂರು ನಗರದತ್ತ ರ್‍ಯಾಲಿಯಲ್ಲಿ ಹೊರಟ ಕಾರ್ಯಕರ್ತರು ರಸ್ತೆಯುದ್ದಕ್ಕೂ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡೇತರ ಭಾಷೆಯಲ್ಲಿ ಹಾಕಲಾಗಿದ್ದ ನಾಮಫಲಕಗಳನ್ನು ಕಿತ್ತೆಸೆದರು. ಯಲಹಂಕ ನ್ಯೂಟೌನ್‌ ಬಳಿಯ ಡೆಕಥ್ಲಾನ್‌ನ ದೊಡ್ಡ ಗಾತ್ರದ ನಾಮಫಲಕಗಳನ್ನು ಪುಡಿಪುಡಿ ಮಾಡಿ ಕಿತ್ತೆಸೆದರು. ಸಾದಹಳ್ಳಿ ಗೇಟ್‌ ಬಳಿ ಸುಮಾರು 40 ಅಡಿ ಎತ್ತರದ ಆಂಗ್ಲ ಬ್ಯಾನರ್‌ವೊಂದನ್ನು ಕಾರ್ಯಕರ್ತರು ಹರಿದು ಹಾಕಿದರು.

ಹೆಬ್ಬಾಳ, ಕೆ.ಆರ್‌.ಪುರಂ, ರಾಜಾಜಿನಗರ, ಬೆಂಗಳೂರು ಕೇಂದ್ರ, ಶಿವಾಜಿನಗರ ಯಲಹಂಕ ಸೇರಿದಂತೆ ಅನೇಕ ಕಡೆಗಳಲ್ಲಿ ಕರವೇ ಕಾರ್ಯಕರ್ತರು ‘ಉಳಿಸಿ, ಉಳಿಸಿ ಕನ್ನಡ ಉಳಿಸಿ’ ಘೋಷವಾಕ್ಯದೊಂದಿಗೆ ಕನ್ನಡ ನಾಮಫಲಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಸೇಂಟ್‌ಮಾರ್ಕ್ಸ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಕೆಂಪೇಗೌಡ ರಸ್ತೆ, ಚಾಮರಾಜಪೇಟೆ ಸೇರಿದಂತೆ ಯುಬಿ ಸಿಟಿ ಸಮೀಪವೂ ಹಲವು ಇಂಗ್ಲಿಷ್ ನಾಮಫಲಕಗಳಿಗೆ ಕಪ್ಪು ಮಸಿ ಬಳಿದರು. ಅಲ್ಲದೆ ಹಲವು ನಾಮಫಲಕಗಳನ್ನು ಪುಡಿಪುಡಿ ಮಾಡಿದರು. ಸ್ಟೇಬೂಮ್‌ ಹೋಟೆಲ್‌ ಮೇಲೆ ದಾಳಿ ಮಾಡಿದ ಕಾರ್ಯಕರ್ತರು ಹೂಕುಂಡಗಳನ್ನು ಒಡೆದು ಹಾಕಿದರು.ಕೆಲ ಬಸ್‌ ತಂಗುನಿಲ್ದಾಣಗಳಲ್ಲಿ ಅಳವಡಿಸಲಾಗಿದ್ದ ಇಂಗ್ಲಿಷ್‌ ಜಾಹೀರಾತುಗಳು, ಸಾದಹಳ್ಳಿಯ ಮೆಕ್ ಡೊನಾಲ್ಡ್‌ ಮಳಿಗೆ, ಕರ್ಲಾನ್‌ ಮಳಿಗೆ, ಸತ್ವ ಮ್ಯಾಗ್ನಿಫಿಷಿಯ ರಿಯಲ್‌ ಎಸ್ಟೇಟ್‌ನ ನಾಮಫಲಕ , ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ ನಾಮಫಲಕ, ನಮ್ಮ ಮೆಟ್ರೋ ಇಂಗ್ಲಿಷ್‌ ಫಲಕ ಹೀಗೆ ಆಂಗ್ಲ ಭಾಷೆಯಲ್ಲಿದ್ದ ಎಲ್ಲ ನಾಮಫಲಕಗಳಿಗೆ ಮಸಿ ಬಳಿದರೆ, ಕೆಲವೆಡೆ ನಾಮಫಲಕಗಳನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು. ರಾಜಾಜಿನಗರ, ಶಿವಾಜಿನಗರ, ಎಂ.ಜಿ.ರಸ್ತೆ ಸೇರಿದಂತೆ ಹಲವೆಡೆ ಮೈಕ್‌ ಮೂಲಕ ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಎಚ್ಚರಿಕೆ ನೀಡಿದರು.

ಪೆಪ್ಪರ್‌ಸ್ಪ್ರೇ ಹಾಕಿದ ಕಾರ್ಯಕರ್ತೆಯರು:

ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುವ ಮುನ್ಸೂಚನೆ ಹಿನ್ನೆಲೆಯಲ್ಲಿ ಫಿನಿಕ್ಸ್‌ ಮಾಲ್‌ ಆಫ್‌ ಏಷ್ಯಾ ಬಂದ್‌ ಮಾಡಲಾಗಿತ್ತು. ಆದರೂ, ಹಿಂಬಾಗಿಲ ಮೂಲಕ ಒಳಗೆ ಪ್ರವೇಶಿಸಲು ಯತ್ನಿಸಿದ ಕರವೇ ಮಹಿಳಾ ಕಾರ್ಯಕರ್ತೆಯರು ಅಲ್ಲಿನ ಭದ್ರತಾ ಸಿಬ್ಬಂದಿ ಮೇಲೆ ಪೆಪ್ಪರ್‌ಸ್ಪ್ರೇ ಹಾಕಿ ಒಳಗೆ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಕಾರ್ಯಕರ್ತೆಯರನ್ನು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆ ಮಾಲ್‌ ಮುಂದೆಯೇ ಮಲಗಿ ಪ್ರತಿಭಟಿಸಿದರು. ಪೊಲೀಸರು ಎಲ್ಲ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಆಟೋ, ಜೀಪ್‌ಗಳಲ್ಲಿ ಕರೆದೊಯ್ದರು.

ಮಾಲ್‌ ಕನ್ನಡೀಕರಣ:

ಕರವೇ ಅಧ್ಯಕ್ಷ ನಾರಾಯಣಗೌಡ ಅವರು, ಫೀನಿಕ್ಸ್‌ ಮಾಲ್‌ ಆಫ್‌ ಏಷ್ಯಾಗೆ ಪತ್ರ ಬರೆದು ಕನ್ನಡದಲ್ಲಿ ನಾಮಫಲಕ ಹಾಕುವಂತೆ ಎಚ್ಚರಿಕೆ ನೀಡಿದ್ದರು. ಬಿಬಿಎಂಪಿ ಅಧಿಕಾರಿಗಳು ಕೂಡ ಕನ್ನಡ ಬಳಸುವಂತೆ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಈವರೆಗೂ ಇಂಗ್ಲೀಷ್‌ನಲ್ಲಿದ್ದ ನಾಮಫಲಕವನ್ನು ಕನ್ನಡದಲ್ಲಿ ಹಾಕಿದ್ದು ಗಮನ ಸೆಳೆಯಿತು.

ನಾರಾಯಣಗೌಡ ವಶಕ್ಕೆ :

ಸಾದಹಳ್ಳಿ ಗೇಟ್‌ನಿಂದ ಸುಮಾರು 10 ಕಿ.ಮೀ.ವರೆಗೂ ರ್‍ಯಾಲಿಯಲ್ಲಿ ಬರುತ್ತಿದ್ದ ವೇಳೆ ರಸ್ತೆಯ ಅಕ್ಕಪಕ್ಕದ ಅಂಗಡಿಗಳು, ಮಳಿಗೆಗಳಲ್ಲಿ ಕನ್ನಡೇತರ ಭಾಷೆಯಲ್ಲಿ ಇದ್ದ ನಾಮಫಲಕಗಳನ್ನು ಕಾರ್ಯಕರ್ತರು ಯಾವುದೆ ಮುಲಾಜಿಲ್ಲದೇ ಕಿತ್ತು ಹಾಕುತ್ತಿದ್ದರು. ಕೆಲವೆಡೆ ಅಂಗಡಿ ಮಾಲೀಕರು ವಾಗ್ವಾದಕ್ಕೆ ಇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಪೊಲೀಸರು ಫಲಕ ಕೀಳದಂತೆ ಹೇಳುತ್ತಿದ್ದರೂ ಕಿವಿಗೊಡುವವರು ಯಾರೂ ಇರಲಿಲ್ಲ. ರ್‍ಯಾಲಿ ಯಲಹಂಕ ಸಮೀಪಕ್ಕೆ ಬರುತ್ತಿದ್ದಂತೆ ನಾರಾಯಣಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ಯಲು ಮುಂದಾದರು.

ಆಕ್ರೋಶಗೊಂಡ ಕಾರ್ಯಕರ್ತರು ನಾರಾಯಣಗೌಡ ಅವರು ಇದ್ದ ಬಸ್‌ ಸುತ್ತುವರೆದು ಕೋಲುಗಳಿಂದ ಬಸ್‌ ಗಾಜು ಒಡೆಯಲು ಯತ್ನಿಸಿದರು. ಇನ್ನು ಕೆಲವರು ಬಸ್‌ ಪಂಚರ್‌ ಮಾಡಲು ಮುಂದಾದರು. ತಡೆಯಲು ಬಂದ ಪೊಲೀಸರೊಂದಿಗೆ ಮಾತಿನ ಚಕಮಕಿಗೆ ಇಳಿದರು. ಸುಮಾರು ಅರ್ಧಗಂಟೆ ಕಾಲ ಹರಸಾಹಸ ಪಟ್ಟ ಪೊಲೀಸರು ಬಸ್‌ ತೆಗೆದುಕೊಂಡು ಹೋದರು.

5 ಕಡೆ ಕೇಸು ದಾಖಲು:

ಟಿ.ಎ.ನಾರಾಯಣಗೌಡ ಸೇರಿದಂತೆ ಸಾವಿರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ಖಾಸಗಿ ಆಸ್ತಿಗಳಿಗೆ ಹೆಚ್ಚಿನ ಹಾನಿಯಾಗುವುದನ್ನು ತಡೆಯುವಲ್ಲಿ ಸಫಲರಾದರು. ನಗರದೆಲ್ಲೆಡೆ ವಶಕ್ಕೆ ಪಡೆದ ಪ್ರತಿಭಟನಾಕಾರರನ್ನು ಯಲಹಂಕ ಪೊಲೀಸ್‌ ತರಬೇತಿ ಕೇಂದ್ರ, ಥಣಿಸಂದ್ರ ಮತ್ತು ಸಂಪಂಗಿರಾಮನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಇರಿಸಲಾಗಿತ್ತು. ಆ ನಂತರ ಸಂಜೆಯ ವೇಳೆಗೆ ಎಲ್ಲರಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಯಿತು. ಅಮೃತಹಳ್ಳಿ, ಕೆ.ಆರ್‌.ಪುರಂ, ರಾಜಾಜಿನಗರ, ಕೊಡಿಗೇಹಳ್ಳಿ, ದೇವನಹಳ್ಳಿ ಪೊಲೀಸ್‌ ಠಾಣೆಗಳಲ್ಲಿ ಕರವೇ ಕಾರ್ಯಕರ್ತರ ವಿರುದ್ಧ ಕೇಸುಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.