ಸಾರಾಂಶ
ಕಾಶ್ಮೀರಿ ಪಂಡಿತರಿಗೆ ಅವರು ಇರುವಲ್ಲಿಂದಲೇ ಮತಕ್ಕೆ ಅವಕಾಶ ಕೊಡಿ ಎಂದು ಬಿಜೆಪಿ ಮನವಿ ಮಾಡಿದೆ.
ಶ್ರೀನಗರ: ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಂತೆಯೇ ಜಮ್ಮು ಕಾಶ್ಮೀರದಲ್ಲಿ ಅದರ ಜೊತೆಗೇ ವಿಧಾನಸಭೆ ಚುನಾವಣೆಯನ್ನೂ ನಡೆಸುವಂತೆ ರಾಜ್ಯದ ಎಲ್ಲ ಪಕ್ಷಗಳ ಮುಖಂಡರು ಚುನಾವಣಾ ಆಯೋಗಕ್ಕೆ ಸಲಹೆ ನೀಡಿದ್ದಾರೆ.
ಲೋಕಸಭೆ ಚುನಾವಣೆಗೆ ರಾಜ್ಯ ಸಿದ್ಧತೆ ನಡೆಸಿರುವುದನ್ನು ಪರಿಶೀಲಿಸಲು ಚುನಾವಣಾ ಆಯೋಗ ಬಂದಿದ್ದ ವೇಳೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಈ ಸಲಹೆ ನೀಡಿದ್ದಾರೆ.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಪ್ರತಿನಿಧಿ ಅಸ್ಲಂ ವಾನಿ, ‘ಚುನಾವಣಾ ಆಯೋಗಕ್ಕೆ ಲೋಕಸಭೆಯ ಜೊತೆಗೇ ವಿಧಾನಸಭೆ ಚುನಾವಣೆ ನಡೆಸುವುದರಿಂದ ರಾಜ್ಯದ ಪ್ರವಾಸೋದ್ಯಮಕ್ಕೆ ಧಕ್ಕೆ ಆಗುವುದಿಲ್ಲ ಮತ್ತು ಇಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಡುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ನಮ್ಮ ಮನವಿಯನ್ನು ತಾಳ್ಮೆಯಿಂದ ಆಲಿಸಿದ್ದು, ತೀರ್ಮಾನ ತೆಗೆದುಕೊಳ್ಳುವುದು ಅವರ ವಿವೇಚನೆಗೆ ಬಿಟ್ಟ ವಿಚಾರ’ ಎಂದು ತಿಳಿಸಿದರು. ಈ ವೇಳೆ ಬಿಜೆಪಿ ನಾಯಕರು ಕೆಲವು ಕಾಶ್ಮೀರಿ ಪಂಡಿತರು ತಮ್ಮ ರಾಜ್ಯದ ವ್ಯಾಪ್ತಿಯಿಂದ ಹೊರಗೆ ವಾಸಿಸುತ್ತಿದ್ದು, ಅವರಿಗೆ ಅಲ್ಲಿಂದಲೇ ಮತದಾನದ ಹಕ್ಕು ಕಲ್ಪಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದರು. ಚುನಾವಣಾ ಆಯೋಗವು ಮಂಗಳವಾರದಿಂದ ಜಮ್ಮು ಕಾಶ್ಮೀರಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದು, ರಾಜಕೀಯ ಪಕ್ಷಗಳ ಜೊತೆಗೆ ಪೊಲೀಸ್ ಮತ್ತು ಇತರ ಚುನಾವಣಾ ಅಧಿಕಾರಿಗಳ ಜೊತೆಗೂ ಸಂವಾದ ನಡೆಸಲಿದೆ. 2014ರ ಆಗಸ್ಟ್ 5ರಂದು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿಯನ್ನು ರದ್ದುಗೊಳಿಸಿ ಆ ಪ್ರದೇಶವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಂಗಡಿಸಲಾಗಿದೆ. ಆಗಿನಿಂದಲೂ ಅಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿಲ್ಲ.