ಪುಟ್ಟಪರ್ತಿ(ಆಂಧ್ರಪ್ರದೇಶ): 5 ದಿನಗಳ ಭಾರತ ಪ್ರವಾಸದಲ್ಲಿರುವ ವೆನಿಜುವೆಲಾ ಹಂಗಾಮಿ ಅಧ್ಯಕ್ಷೆ ಡೆಲ್ಸಿ ಎಲೋಯಿನಾ ರೊಡಿಗ್ರಸ್ ಆಂಧ್ರಪ್ರದೇಶದ ಪುಟ್ಟುಪರ್ತಿಯಲ್ಲಿರುವ ಸಾಯಿಬಾಬಾ ಮಂದಿರ ‘ಪ್ರಶಾಂತಿ ನಿಲಯ’ಕ್ಕೆ ಭೇಟಿ ನೀಡಿದ್ದರು. ಶನಿವಾರವೇ ಶ್ರೀ ಸತ್ಯ ಸಾಯಿ ಏರ್ಪೋರ್ಟ್‌ಗೆ ಬಂದಿಳಿದಿದ್ದ ಡೆಲ್ಸಿ ಅವರನ್ನು ಮಂದಿರದ ಆಡಳಿತ ಮಂಡಳಿಯವರು ಸ್ವಾಗತಿಸಿದರು. ಶನಿವಾರ ಮತ್ತು ಭಾನುವಾರ ಅವರು ಇಲ್ಲಿನ ಸಾಯಿ ಕುಲ್ವಂತ್ ಸಭಾಂಗಣಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಪ್ರಾರ್ಥನೆ, ಭಜನೆ, ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯವರು ನೆನಪಿನ ಕಾಣಿಕೆಯಾಗಿ ಸತ್ಯ ಸಾಯಿ ಬಾಬಾ ಫೋಟೋವನ್ನು ನೀಡಿದ್ದಾರೆ.
ವೆನಿಜುವೆಲಾದ ಹಿಂದಿನ ಅಧ್ಯಕ್ಷ, ಅಮೆರಿಕ ಸೇನೆಯಿಂದ ಈ ವರ್ಷದ ಆರಂಭದಲ್ಲಿ ಬಂಧನಕ್ಕೊಳಗಾಗಿದ್ದ ನಿಕೋಲಸ್ ಮಡುರೋ ಕೂಡ ಪುಟ್ಟಪರ್ತಿ ಸಾಯಿಬಾಬಾರ ಪರಮ ಭಕ್ತರಾಗಿದ್ದರು.==
ಬೆಂಗಳೂರಿನ ರಾಜೇಶ್ ಎಕ್ಸ್‌ಪೋರ್ಟ್‌ಗೆ ಕೇಂದ್ರದ ಪ್ರೋತ್ಸಾಹ ಧನ ಕಟ್?ಈ ಬಗ್ಗೆ ಎಚ್‌ಡಿಕೆ ನಿರ್ಧಾರ ಬಾಕಿ
ನವದೆಹಲಿ: ನಕಲಿ ಆದಾಯ ತೋರಿಸಿದ ಆರೋಪ ಎದುರಿಸುತ್ತಿರುವ ಬೆಂಗಳೂರು ಮೂಲದ ಚಿನ್ನ ಸಂಸ್ಕರಣಾ ಮತ್ತು ರಫ್ತುದಾರ ಕಂಪನಿ ರಾಜೇಶ್ ಎಕ್ಸ್‌ಪೋರ್ಟ್‌ಗೆ, ಕೇಂದ್ರ ಸರ್ಕಾರದಿಂದ ಉದ್ಯಮಗಳಿಗೆ ನೀಡಲಾಗುವ ಉತ್ಪಾದನೆ ಪ್ರೋತ್ಸಾಹ ಧನವನ್ನು(ಪಿಎಲ್‌ಐ) ನಿಲ್ಲಿಸಲು ಭಾರೀ ಕೈಗಾರಿಕೆಗಳ ಸಚಿವಾಲಯ ಚಿಂತನೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.ಈ ಬಗೆಗಿನ ನಿರ್ಧಾರವನ್ನು ಕರ್ನಾಟಕದವರೇ ಆದ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕಿರ್ಗಿಸ್ತಾನ್ ಭೇಟಿ ಮುಗಿಸಿ ಮರಳಿದ ಬಳಿಕ ತೆಗೆದುಕೊಳ್ಳಲಿದ್ದಾರೆ.
2021-2025ರ ನಡುವೆ ತಮ್ಮ ಆಸ್ತಿಯನ್ನು ಅಸಲಿಗಿಂತ ಹೆಚ್ಚು ಮಾಡಿ 15.15 ಲಕ್ಷ ಕೋಟಿ ರು., ಅಂದರೆ ಅದರ ಅಂಗಸಂಸ್ಥೆಗಳ ಒಟ್ಟು ಆದಾಯದ ಶೇ.99.8ರಷ್ಟು ಎಂದು ತಪ್ಪು ಲೆಕ್ಕ ತೋರಿಸಿರುವುದಾಗಿ ಷೇರು ಮಾರುಕಟ್ಟೆಯ ಮೇಲ್ವಿಚಾರಕ ಸಂಸ್ಥೆ ಸೆಬಿ ಆರೋಪಿಸಿತ್ತು. ಅದರ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ವ್ಯವಹರಿಸದಂತೆ ಕಂಪನಿಯ ಮಾಲೀಕ ರಾಜೇಶ್ ಮೆಹ್ತಾರ ಮೇಲೆ ನಿರ್ಬಂಧವನ್ನು ಹೇರಲಾಗಿತ್ತು.
==ಇನ್ನು ದೇಶಾದ್ಯಂತ ಜಿರಳೆ ಪಾರ್ಟಿ ಆಂದೋಲನ
ಪ್ರಧಾನ್ ರಾಜೀನಾಮೆ ನೀಡೋವರೆಗೂ ಹೋರಾಟ: ದೀಪ್ಕೆಛತ್ರಪತಿ ಸಂಭಾಜಿನಗರ: ‘ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಪರೀಕ್ಷಾ ಅಕ್ರಮಗಳ ವಿರುದ್ಧದ ನಮ್ಮ ಆಂದೋಲನ ನಿಲ್ಲುವುದಿಲ್ಲ’ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಭಾನುವಾರ ತಿಳಿಸಿದ್ದಾರೆ.ತಮ್ಮ ತವರೂರಿಗೆ ಆಗಮಿಸಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಶನಿವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಆಯೋಜಿಸಿದ್ದ ಪ್ರತಿಭಟನೆಯು ಬಹುತೇಕ ಯಶಸ್ವಿಯಾಗಿದ್ದು, ಸುಮಾರು 7,000 ಜನರು ಇದರಲ್ಲಿ ಭಾಗವಹಿಸಿದ್ದರು. ಈ ಚಳವಳಿ ಈಗ ದೇಶಾದ್ಯಂತ ವಿಸ್ತರಿಸಲಿದೆ. ಇದನ್ನು ದೇಶಾದ್ಯಂತ ಕೊಂಡೊಯ್ಯಲು ನಾವು ಮತ್ತಷ್ಟು ಕ್ರಿಯಾಯೋಜನೆಯನ್ನು ರೂಪಿಸುತ್ತೇವೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಾವು ಹಿಂದೆ ಸರಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ವಿರೋಧಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಶನಿವಾರ ಸಿಜೆಪಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿತ್ತು.
==ರಾಮಮಂದಿರಕ್ಕೆ ದೇಣಿಗೆ ಬಂದ ಕೋಟ್ಯಂತರ ಹಣ ಕಾಣೆ: ಅಖಿಲೇಶ್ ಆರೋಪ
ಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ನಡೆಸಲಿ: ಆಗ್ರಹ
ಲಖನೌ: ‘ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತಾದಿಗಳ ದೇಣಿಗೆಯಿಂದ ಬಂದ ಕೋಟ್ಯಂತರ ರು.ಗಳು ಕಾಣೆಯಾಗಿವೆ ಎಂಬ ವರದಿಗಳಿವೆ. ದೇವಾಲಯದ ಆಡಳಿತ ಮಂಡಳಿ ಮತ್ತು ಸರ್ಕಾರದ ಮೌನ ಶಂಕಾಸ್ಪದವಾಗಿದೆ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಭಾನುವಾರ ಆರೋಪಿಸಿದ್ದಾರೆ.ಟ್ವೀಟ್ ಮಾಡಿರುವ ಅವರು, ‘ರಾಮ ಮಂದಿರಕ್ಕೆ ದೇಣಿಗೆಯಿಂದ ಬಂದ ಕೋಟ್ಯಂತರ ರು.ಗಳು ನಾಪತ್ತೆಯಾಗಿವೆ. ಇದು ಪ್ರಪಂಚದಾದ್ಯಂತದ ಶ್ರೀರಾಮನ ಭಕ್ತರಿಗೆ ಬಹಳ ಸೂಕ್ಷ್ಮ ಸುದ್ದಿಯಾಗಿದೆ. ಇದು ದೇವಾಲಯದ ಟ್ರಸ್ಟ್‌ಗೆ ಅತ್ಯಂತ ನಾಚಿಕೆಗೇಡಿನ ಪರಿಸ್ಥಿತಿ. ಯಾರೂ ಮುಂದೆ ಬಂದು ವಿವರಣೆ ನೀಡಲು ಸಿದ್ಧರಿಲ್ಲ. ಟ್ರಸ್ಟ್ ಮತ್ತು ಸರ್ಕಾರದ ಮೌನ ಶಂಕಾಸ್ಪದವಾಗಿದೆ. ಹೀಗಾಗಿ ಕೋರ್ಟ್ ಇದನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಯಾದವ್ ಹೇಳಿಕೆಗೆ ಟ್ರಸ್ಟ್ ಅಥವಾ ಉತ್ತರ ಪ್ರದೇಶ ಸರ್ಕಾರದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.