ಸಾರಾಂಶ
ಉತ್ತರಕಾಶಿ: ಉತ್ತರಾಖಂಡದ ಸಿಲ್‌ಕ್ಯಾರಾ ಸುರಂಗದಲ್ಲಿ ಭೂಕುಸಿತ ಸಂಭವಿಸಿ 150 ತಾಸು ಕಳೆದರೂ ಒಳಗೆ ಸಿಕ್ಕಿಬಿದ್ದ 41 ಕಾರ್ಮಿಕರ ರಕ್ಷಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ, ಇಡೀ ಕಾರ್ಯಾಚರಣೆಯನ್ನೇ ಹೊಸ ದಿಕ್ಕಿನಲ್ಲಿ ನಡೆಸಲು ಯೋಜಿಸಲಾಗಿದೆ.ಇದುವರೆಗೂ ಸುರಂಗದ ಮುಖಭಾಗದಿಂದ ಮಣ್ಣು ಹೊರತೆಗೆದು, ಅದರೊಳಗೆ ದೊಡ್ಡ ಸ್ಟೀಲ್ ಪೈಪ್ ತೂರಿಸಿ ಕಾರ್ಮಿಕರ ರಕ್ಷಣೆಗೆ ನಿರ್ಧರಿಸಲಾಗಿತ್ತು. ಆದರೆ ಅದರ ಬದಲು ಇದೀಗ ಸುರಂಗದಿಂದ ಮೇಲ್ಭಾಗದಿಂದ ರಂಧ್ರ ಕೊರೆಯಲು ಯೋಜಿಸಲಾಗಿದೆ.ಪ್ಲ್ಯಾನ್ ಬದಲು:ಸಿಲ್‌ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರ ರಕ್ಷಣೆ 7ನೇ ದಿನವಾದ ಶನಿವಾರವೂ ಸಾಧ್ಯವಾಗಿಲ್ಲ. ಕಾರ್ಯಾಚರಣೆ ಸ್ಥಳದಲ್ಲಿ ಪದೇ ಪದೇ ಮಣ್ಣು ಕುಸಿಯುತ್ತಿರುವುದು, ಯಂತ್ರಗಳು ಕೈಕೊಡುತ್ತಿರುವುದು ರಕ್ಷಣಾ ಸಿಬ್ಬಂದಿಯನ್ನು ಕಂಗೆಡಿಸಿದೆ. ಜೊತೆಗೆ ಕಾರ್ಯಾಚರಣೆ ಮುಂದುವರೆಸಿದರೆ ಮತ್ತಷ್ಟು ಮಣ್ಣು ಕುಸಿತದ ಆತಂಕ ಎದುರಾಗಿದೆ.ಹೀಗಾಗಿ ಸುರಂಗದ ಮೇಲ್ಭಾಗದಿಂದ ರಂಧ್ರ ಕೊರೆದು ಕಾರ್ಮಿಕರನ್ನು ರಕ್ಷಿಸುವ ಯೋಜನೆ ರೂಪಿಸಲಾಗಿದೆ. ‘ನಾವು ಲಂಬವಾದ ರಂಧ್ರ ಕೊರೆಯುವ ಮೂಲಕ ಕಾರ್ಮಿಕರ ರಕ್ಷಿಸುವ ಯೋಜನೆ ರೂಪಿಸುತ್ತಿದ್ದೇವೆ. ಇದಕ್ಕಾಗಿ ಸುರಂಗದ ಮೇಲ್ಭಾಗದ ಸುಮಾರು 1 ಸಾವಿರ ಮೀ. ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗಿದೆ. ಶೀಘ್ರವೇ ರಂಧ್ರ ಕೊರೆಯುವ ಕೆಲಸ ಆರಂಭವಾಗಲಿದೆ. ಇದಕ್ಕೆ ಎಷ್ಟು ಸಮಯ ಹಿಡಿಯುತ್ತದೆ ಎಂಬ ಮಾಹಿತಿ ಭಾನುವಾರ ಮಧ್ಯಾಹ್ನದ ವೇಳೆಗೆ ಲಭ್ಯವಾಗಲಿದೆ ಎಂದು ಗಡಿ ರಸ್ತೆ ಪ್ರಾಧಿಕಾರದ ಮುಖ್ಯಸ್ಥ ಮೇಜರ್ ನಮನ್ ನರೂಲಾ ಹೇಳಿದ್ದಾರೆ. ಇದಕ್ಕಾಗಿ ಇಂದೋರ್‌ನಿಂದ ಶಕ್ತಿಶಾಲಿಯಾದ ಸುರಂಗ ಕೊರೆಯುವ ಯಂತ್ರವನ್ನು ತರಿಸಿಕೊಳ್ಳಲಾಗಿದ್ದು, ಈ ಯಂತ್ರದ ಮೂಲಕ ರಂಧ್ರ ಕೊರೆಯುವ ಕಾರ್ಯ ನಡೆಸಲಾಗುತ್ತದೆ. ಈಗಾಗಲೇ ಭೂ ಕುಸಿತ ಸಂಭವಿಸಿರುವ ಭಾಗಕ್ಕಿಂತ ಮುಂದೆ ರಂಧ್ರ ಕೊರೆದು ಕಾರ್ಮಿಕರನ್ನು ರಕ್ಷಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.