ಸಂಭಲ್‌ ಗಲಭೆ, ಹಿಂಸಾಚಾರ : ಶಾಹಿ ಜಾಮಾ ಮಸೀದಿ ಮುಖ್ಯಸ್ಥ ವಶಕ್ಕೆ, 25 ಮಂದಿ ಸೆರೆ

| Published : Nov 26 2024, 12:49 AM IST / Updated: Nov 26 2024, 04:50 AM IST

ಸಾರಾಂಶ

ಇಲ್ಲಿನ ಶಾಹಿ ಜಾಮಾ ಮಸೀದಿ ಈ ಹಿಂದೆ ಹರಿಹರೇಶ್ವರ ಮಂದಿರ ಆಗಿತ್ತೇ ಎಂಬ ಬಗ್ಗೆ ನಡೆಯುತ್ತಿರುವ ಕೋರ್ಟ್ ನಿರ್ದೇಶಿತ ಸಮೀಕ್ಷೆ ವಿರೋಧಿಸಿ ನಡೆದ ಹಿಂಸಾಚಾರದಲ್ಲಿ ಮೃತರ ಸಂಖ್ಯೆ 5ಕ್ಕೇರಿದೆ. ಗಲಭೆಯಲ್ಲಿ ಗಾಯಗೊಂಡಿದ್ದ ಇಬ್ಬರು ಸೋಮವಾರ ನಸುಕಿನಲ್ಲಿ ಅಸುನೀಗಿದ್ದಾರೆ.

 ಸಂಭಲ್‌ (ಉ.ಪ್ರ.) : ಇಲ್ಲಿನ ಶಾಹಿ ಜಾಮಾ ಮಸೀದಿ ಈ ಹಿಂದೆ ಹರಿಹರೇಶ್ವರ ಮಂದಿರ ಆಗಿತ್ತೇ ಎಂಬ ಬಗ್ಗೆ ನಡೆಯುತ್ತಿರುವ ಕೋರ್ಟ್ ನಿರ್ದೇಶಿತ ಸಮೀಕ್ಷೆ ವಿರೋಧಿಸಿ ನಡೆದ ಹಿಂಸಾಚಾರದಲ್ಲಿ ಮೃತರ ಸಂಖ್ಯೆ 5ಕ್ಕೇರಿದೆ. ಗಲಭೆಯಲ್ಲಿ ಗಾಯಗೊಂಡಿದ್ದ ಇಬ್ಬರು ಸೋಮವಾರ ನಸುಕಿನಲ್ಲಿ ಅಸುನೀಗಿದ್ದಾರೆ. ಈ ನಡುವೆ, 25 ಗಲಭೆಕೋರರನ್ನು ಬಂಧಿಸಲಾಗಿದೆ ಹಾಗೂ ಮಸೀದಿ ಮುಖ್ಯಸ್ಥ ಜಫರ್‌ ಅಲಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇದೇ ವೇಳೆ, ಎಸ್ಪಿ ಸಂಸದ ಜಿಯಾ ಉರ್‌ ರೆಹಮಾನ್‌ ಬರ್ಕ್‌ ಹಾಗೂ ಸ್ಥಳೀಯ ಎಸ್ಪಿ ಶಾಸಕ ಇಕ್ಬಾಲ್‌ ಮೆಹಮೂದ್‌ ಅವರ ಪುತ್ರ ಸೊಹೈಲ್‌ ಇಕ್ಬಾಲ್‌ನ್ನು ಆರೋಪಿ ಎಂದು ಹೆಸರಿಸಲಾಗಿದೆ. ‘ಗಲಭೆಯಲ್ಲಿ ನಿರತರಾದ 2750 ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್ಐಆರ್‌ ದಾಲಿಸಲಾಗಿದೆ. ಈ ಗಲಭೆಗೆ ಬರ್ಕ್‌ ಅವರೇ ಕಾರಣ. ‘ಜಾಮಾ ಮಸೀದಿ ರಕ್ಷಿಸಿ’ ಎಂಬ ಅವರ ಪ್ರಚೋದಕ ಕರೆಯಿಂದಲೇ ಗಲಭೆ ಸಂಭವಿಸಿದೆ’ ಎಂದು ಸಂಭಲ್‌ ಎಸ್‌ಪಿ ಕೃಷ್ಣಕುಮಾರ್‌ ಹೇಳಿದ್ದಾರೆ.

ಸಂಭಲ್‌ನಲ್ಲಿ ಪ್ರತಿಬಂಧಕಾಜ್ಞೆ ವಿಧಿಸಲಾಗಿದ್ದು, ನ.30ರವರೆಗೆ ಹೊರಗಿನವರ ಪ್ರವೇಶ ನಿರ್ಬಂಧಿಸಲಾಗಿದೆ ಹಾಗೂ ಸೋಮವಾರದ ಮಟ್ಟಿಗೆ ಶಾಲೆ-ಕಾಲೇಜು ರಜೆ ಸಾರಿ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ.

ಪೊಲೀಸರ ಮೇಲೆ ಮಸೀದಿ ಮುಖ್ಯಸ್ಥ ಕಿಡಿ:

ಗಲಭೆಗೆ ಪೊಲೀಸರು ಹಾಗೂ ಉತ್ತರ ಪ್ರದೇಶ ಸರ್ಕಾರದ ಪ್ರಚೋದನೆಯೇ ಕಾರಣ ಎಂದು ಅರೋಪಿಸಿದ್ದ ಮಸೀದಿ ಮುಖ್ಯಸ್ಥನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಎನ್‌ಎಸ್‌ಎ ಕೇಸಿಗೆ ವಿಎಚ್‌ಪಿ ಆಗ್ರಹ:

ಈ ನಡುವೆ ಸಂಭಲ್‌ನಲ್ಲಿ ಗಲಭೆ ಮಾಡಿದವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಉಗ್ರವಾದ ನಡೆಸಿದ ಕೇಸು ಹಾಕಬೇಕು ಎಂದು ವಿಎಚ್‌ಪಿ ಆಗ್ರಹಿಸಿದೆ. ಕಾಂಗ್ರೆಸ್‌ ಪಕ್ಷ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟು ಈ ಪ್ರಕರಣ ಕೈಗೆತ್ತಿಕೊಂಡು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದೆ.

ಕಲ್ಲು ಸಂಗ್ರಹ, ಸೋಡಾ ಬಾಟಲಿ ಸಂಗ್ರಹ ನಿಷೇಧ:

ಸಂಭಲ್‌ನಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಕಾರಣ ಜನರು ಮೇಲ್ಛಾವಣಿಯ ಮೇಲೆ ಕಲ್ಲುಗಳು, ಸೋಡಾ ಬಾಟಲಿಗಳು, ಸುಡುವ ವಸ್ತುಗಳನ್ನು ಸಂಗ್ರಹಿಸಿ ಉಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಸಾರ್ವಜನಿಕ ರಸ್ತೆಗಳಲ್ಲಿ ಬಿಟ್ಟುಹೋಗಿರುವ ಯಾವುದೇ ನಿರ್ಮಾಣ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನಗರಪಾಲಿಕೆಗೆ ಸೂಚಿಸಲಾಗಿದೆ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶನದಲ್ಲಿ ಎಚ್ಚರಿಸಲಾಗಿದೆ.

ನಾನು ಬೆಂಗಳೂರಲ್ಲಿದ್ದೇನೆ, ಹಿಂಸೆ ಹಿಂದಿಲ್ಲ: ಬರ್ಕ್‌

ಲಖನೌ: ಸಂಭಲ್‌ ಹಿಂಸಾಚಾರದಲ್ಲಿ ಆರೋಪಿ ಎಂದು ಹೆಸರಿಸಲಾಗಿರುವ ಸಮಾಜವಾದಿ ಪಕ್ಷದ ಸಂಸದ ಜಿಯಾವುರ್ ರೆಹಮಾನ್ ಬರ್ಕ್ ‘ನಾನು ಬೆಂಗಳೂರಲ್ಲಿದ್ದೇನೆ. ಹಿಂಸೆಗೆ ಹೇಗೆ ಪ್ರಚೋದಿಸಲಿ’ ಎಂದು ಪ್ರಶ್ನಿಸಿದ್ದಾರೆ ಹಾಗೂ ಇದು ಸರ್ಕಾರದ ಪಿತೂರಿ ಎಂದು ಅರೋಪಿಸಿದ್ದಾರೆ.

ಪತ್ರಕರ್ತರ ಜತೆ ಅವರು ಮಾತನಾಡಿ, ‘ಗಲಭೆ ವೇಳೆ ನಾನು ಸಂಭಲ್‌ನಲ್ಲಿ ಇರಲಿಲ್ಲ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸಭೆಯಲ್ಲಿ ಭಾಗವಹಿಸಲು ನಾನು ಬೆಂಗಳೂರಿಗೆ ಹೋಗಿದ್ದೆ. ಆದರೂ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು ಪೊಲೀಸರು ಮತ್ತು ಆಡಳಿತದ ಪಿತೂರಿ. ಸಮೀಕ್ಷೆಯ ಸಮಯವೇ ಜನರಿಗೆ ಗೊತ್ತಿರಲಿಲ್ಲ. ಹೀಗಾಗಿ ಪಿತೂರಿ ಹೇಗೆ ಸಾಧ್ಯ? ಗೋಲಿಬಾರ್‌ ಮಾಡಿದ ಪೊಲೀಸರ ಮೇಲೆ ಕೇಸು ಹಾಕಿ’ ಎಂದರು.

ಯುಪಿಯಲ್ಲಿ ಮತ್ತೊಂದು ವಕ್ಫ್‌ ವಿವಾದ

ಎಟಾ: ಉತ್ತರ ಪ್ರದೇಶ ಸಂಭಲ್‌ನಲ್ಲಿ ಮಸೀದಿ ವಿವಾದದ ಬೆನ್ನಲ್ಲೇ ಇದೀಗ ಎಟಾದಲ್ಲಿ ವಕ್ಫ್‌ ವಿವಾದವೊಂದು ಸೃಷ್ಟಿಯಾಗಿದೆ. ಇಲ್ಲಿನ ಎಟಾ ದರ್ಗಾ ಬಳಿ ಖಾಸಗಿ ಜಮೀನನ್ನು ವಕ್ಫ್‌ ಆಸ್ತಿಯೆಂದು ಹೇಳಿಕೊಂಡು ಜನರ ಗುಂಪೊಂದು, ಅಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾಮಗಾರಿಗೆ ತಡೆಯೊಡ್ಡಿರುವುದು ಗಲಾಟೆಗೆ ಕಾರಣವಾಗಿದೆ.

ಜಲೇಸರ್‌ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಹಿಂದೂ ವ್ಯಕ್ತಿಯ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯೊಂದು ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮುಸ್ಲಿಂ ಯುವಕರ ಗುಂಪೊಂದು ಸ್ಥಳಕ್ಕೆ ಬಂದು, ಇದು ವಕ್ಫ್‌ ಜಮೀನು ಎಂದು ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಅಲ್ಲದೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಹಾನಿ ಮಾಡಿ, ಹಲವು ವಾಹನಗಳನ್ನು ಧ್ವಂಸಗೊಳಿಸಿ ಹಲವರ ಮೇಲೆ ಹಲ್ಲೆ ನಡೆಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.16 ಶಂಕಿತರು ಹಾಗೂ 50 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.