ಸರ್ಕಾರದ ಹಿಡಿತದಿಂದ ಹಿಂದೂ ದೇವಾಲಯಗಳನ್ನು ಮುಕ್ತ ಮಾಡಲು ವಿಎಚ್‌ಪಿ ರಾಷ್ಟ್ರವ್ಯಾಪಿ ಚಳವಳಿ

| Published : Dec 27 2024, 12:45 AM IST / Updated: Dec 27 2024, 05:03 AM IST

ಸಾರಾಂಶ

ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಬಿಡಿಸಲು ರಾಷ್ಟ್ರವ್ಯಾಪಿ ಚಳವಳಿ ನಡೆಸುವುದಾಗಿ ವಿಶ್ವ ಹಿಂದೂ ಪರಿಷತ್‌ ಗುರುವಾರ ಘೋಷಿಸಿದೆ. ಜೊತೆಗೆ ಈ ಕುರಿತು ಜಾಗೃತಿ ಮೂಡಿಸಲು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜ.5ರಂದು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದೆ.

ನವದೆಹಲಿ: ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಬಿಡಿಸಲು ರಾಷ್ಟ್ರವ್ಯಾಪಿ ಚಳವಳಿ ನಡೆಸುವುದಾಗಿ ವಿಶ್ವ ಹಿಂದೂ ಪರಿಷತ್‌ ಗುರುವಾರ ಘೋಷಿಸಿದೆ. ಜೊತೆಗೆ ಈ ಕುರಿತು ಜಾಗೃತಿ ಮೂಡಿಸಲು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜ.5ರಂದು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದೆ.

ಈ ಕುರಿತು ವಿಎಚ್‌ಪಿಯ ಪ್ರಧಾನ ಕಾರ್ಯದರ್ಶಿ ಮಿಲಿಂದ್‌ ಪರಾಂಡೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ‘ದೇವಸ್ಥಾನಗಳನ್ನು ಹಿಂದೂಗಳೇ ನಿರ್ವಹಿಸುವ ನಿಟ್ಟಿನಲ್ಲಿ ಕಳೆದ 2-3 ವರ್ಷಗಳಿಂದ ಕೆಲಸ ಮಾಡುತ್ತಿದ್ದೆವು. ಈಗಾಗಲೇ ಹೈ ಕೋರ್ಟ್‌ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್‌ನ ವಕೀಲರು, ಧಾರ್ಮಿಕ ನಾಯಕರು ಹಾಗೂ ಪರಿಷತ್‌ ಸದಸ್ಯರ ಸಲಹೆಯಂತೆ ಕರಡನ್ನು ಸಿದ್ಧಪಡಿಸಲಾಗಿದೆ.

 ಇದರ ಪ್ರತಿಯನ್ನು ಕೆಲ ದಿನಗಳ ಹಿಂದೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ನೀಡಿದ್ದೇನೆ’ ಎಂದರು. ಜತೆಗೆ, ‘ದೇವಸ್ಥಾನಗಳನ್ನು ಸಮಾಜಕ್ಕೇ ಮರಳಿಸುವ ಇಂಗಿತವನ್ನು ಕರ್ನಾಟಕ(ಬಿಜೆಪಿ) ಸರ್ಕಾರ ವ್ಯಕ್ತಪಡಿಸಿತ್ತು, ಹೀಗಾದರೆ ಅಧಿಕಾರದಲ್ಲಿರುವ ಪಕ್ಷಕ್ಕೆ ಚುನಾವಣೆಯಲ್ಲಿ ಸೋಲಾಗಲಿದ್ದ ಕಾರಣ ಈ ವಿಷಯವನ್ನು ಅಲ್ಲಿಯೇ ಕೈಬಿಡಲಾಯಿತು’ ಎಂದರು.