ಟಿವಿಕೆ ಅಧ್ಯಕ್ಷ, ನಟ ವಿಜಯ್‌ ಸಿಎಂ ಅಭ್ಯರ್ಥಿ; ಬಿಜೆಪಿಜತೆಯಲ್ಲಿ ಮೈತ್ರಿ ಇಲ್ಲ

| N/A | Published : Jul 05 2025, 01:48 AM IST / Updated: Jul 05 2025, 04:19 AM IST

Actor-turned politician Vijay
ಟಿವಿಕೆ ಅಧ್ಯಕ್ಷ, ನಟ ವಿಜಯ್‌ ಸಿಎಂ ಅಭ್ಯರ್ಥಿ; ಬಿಜೆಪಿಜತೆಯಲ್ಲಿ ಮೈತ್ರಿ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

2026ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ದಳಪತಿ ವಿಜಯ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಚೆನ್ನೈ: 2026ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ದಳಪತಿ ವಿಜಯ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಇದೇ ವೇಳೆ ಯಾರೊಂದಿಗೂ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶುಕ್ರವಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವೇಳೆ ಬಿಜೆಪಿ ಜತೆಗೆ ಟಿವಿಕೆ ಮೈತ್ರಿ ವದಂತಿಗೂ ತೆರೆ ಬಿದ್ದಿದೆ. ಈ ಬಗ್ಗೆ ವಿಜಯ್‌ ಮಾತನಾಡಿದ್ದು, ‘ ಬಿಜೆಪಿ ಅಗ್ಗದ ರಾಜಕೀಯ ಲಾಭಕ್ಕಾಗಿ ಜನರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸಲು ಬಯಸುತ್ತದೆ. ನಮ್ಮ ನೀತಿ ವಿರೋಧಿಗಳು ಮತ್ತು ವಿಭಜಕ ಶಕ್ತಿಗಳೊಂದಿಗೆ ಯಾವುದೇ ನೇರ ಅಥವಾ ಪರೋಕ್ಷ ಮೈತ್ರಿ ಇರುವುದಿಲ್ಲ. ಡಿಎಂಕೆ ಅಥವಾ ಬಿಜೆಪಿಯೊಂದಿಗೆ ಯಾವುದೇ ಮೈತ್ರಿ ಇಲ್ಲ’ ಎಂದಿದ್ದಾರೆ.

ಬ್ಯಾಟಲ್‌ ಆಫ್‌ ಗಲ್ವಾನ್‌: ಚೀನಾ ಸಂಘರ್ಷ ಬಗ್ಗೆ ಸಲ್ಮಾನ್‌ ಹೊಸ ಚಿತ್ರ

ಮುಂಬೈ: 2020ರಲ್ಲಿ ಲಡಾಖ್ ಗಡಿಯಲ್ಲಿ ನಡೆದ ಭಾರತ ಮತ್ತು ಚೀನಾ ನಡುವಿನ ಗಲ್ವಾನ್ ಕಣಿವೆ ಸಂಘರ್ಷದ ಕುರಿತಾದ ಸಿನಿಮಾವೊಂದು ಶೀಘ್ರದಲ್ಲಿಯೇ ತೆರೆಗೆ ಬರಲಿದ್ದು, ನಟ ಸಲ್ಮಾನ್ ಖಾನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ವತಃ ಸಲ್ಮಾನ್ ಖ್ಯಾನ್ ಅವರೇ 1.22 ನಿಮಿಷಗಳ ಮೋಷನ್‌ ಪೋಸ್ಟರ್‌ ತುಣುಕನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾವನ್ನು ‘ಶೂಟೌಟ್‌ ಎಟ್‌ ಲೋಖಂಡವಾಲಾ’ ಖ್ಯಾತಿಯ ಅಪೂರ್ವ ಲಾಖಿಯಾ ನಿರ್ದೇಶಿಸಲಿದ್ದಾರೆ. ಲಡಾಖ್‌ನ ಗಡಿ ವಾಸ್ತವ ನಿಯಂತ್ರಣ ರೇಖೆಯ ಗಲ್ವಾನ್ ಕಣಿವೆಯಲ್ಲಿ 2020ರ ಜೂ.15-16ರಂದು ಭಾರತ ಮತ್ತು ಚೀನಾದ ಸೈನಿಕರು ಪರಸ್ಪರ ಕಲ್ಲು, ದೊಣ್ಣೆ, ಲೋಹದ ವಸ್ತುಗಳಿಂದ ಹೊಡೆದಾಡಿಕೊಂಡಿದ್ದರು. ಯಾಕೆಂದರೆ ಹಿಂದಿನ ಒಪ್ಪಂದದ ಪ್ರಕಾರ ಬಂದೂಕು ಬಳಕೆಗೆ ಅವಕಾಶವಿರಲಿಲ್ಲ. ಈ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಿದ್ದರು. ಚೀನಾದ ಕಡೆ 30ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದರು.

ರಿಕ್ಷಾ ರೀತಿಯ ಬ್ಯಾಗ್‌ಗೆ 35 ಲಕ್ಷ ರು.: ಫ್ರಾನ್ಸ್‌ ಕಂಪನಿ ಹೊಸ ವಿವಾದ

ನವದೆಹಲಿ: ಫ್ರಾನ್ಸ್‌ನ ಪ್ರತಿಷ್ಠಿತ ಬ್ಯಾಗ್ ತಯಾರಿಕಾ ಕಂಪನಿ ಲೂಯಿ ವಿಟಾನ್ ತಯಾರಿಸಿರುವ ಹೊಸ ಬ್ಯಾಗ್‌ವೊಂದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಆಟೋ ರಿಕ್ಷಾದ ರೀತಿಯಲ್ಲಿ ಕಾಣುವ ಪುಟ್ಟ ಹ್ಯಾಂಡ್‌ ಬ್ಯಾಗ್‌ನ್ನು ಸಂಸ್ಥೆ ತಯಾರಿಸಿದ್ದು, ಅದರ ಬೆಲೆ ಬರೋಬ್ಬರಿ 35 ಲಕ್ಷ ರು. ಈ ಹ್ಯಾಂಡ್‌ ಬ್ಯಾಗ್‌ ಫೋಟೋಗಳು ಜಾಲತಾಣದಲ್ಲಿ ವೈರಲ್‌ ಆಗಿದ್ದು ತರೇವಾರಿ ಕಾಮೆಂಟ್‌ಗಳು ವ್ಯಕ್ತವಾಗಿದೆ. ಅದರಲ್ಲಿಯೂ ಭಾರತದಲ್ಲಿ ಕೆಲವರು ಇದನ್ನು ಟೀಕಿಸಿದ್ದು, ‘ಬಡವರ ಹೋರಾಟವು ಶ್ರೀಮಂತರ ಸಂಸ್ಕೃತಿ’, ‘ ಇದನ್ನು ಯಾರು ಕೊಂಡುಕೊಳ್ಳುತ್ತಾರೆ?’. ‘ ನಮ್ಮ ರಿಕ್ಷಾ ಭಾಯ್‌ ಸ್ಟೈಲ್ ಐಕಾನ್ ಆಗಲಿದ್ದಾರಾ?’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಸಂಸ್ಕೃತ ಶ್ಲೋಕಗಳು ಯಾರಿಗೆ ಅರ್ಥ ಆಗಲ್ಲ: ತ.ನಾಡು ಸಚಿವ ವೇಲು

ವೆಲ್ಲೂರು: ತಮಿಳುನಾಡಿನಲ್ಲಿ ಡಿಎಂಕೆ ಸಚಿವರಿಂದ ಹಿಂದೂ ಸಂಸ್ಕೃತಿ ಅವಹೇಳನ ಮುಂದುವರೆದಿದ್ದು, ಇದೀಗ ಸಚಿವ ಇ.ವಿ.ವೇಲು, ‘ಸಂಸ್ಕೃತ ಶ್ಲೋಕಗಳು ಯಾರಿಗೆ ತಾನೇ ಅರ್ಥವಾಗುತ್ತವೆ? ತಮಿಳಿನಲ್ಲಿ ಐ ಲವ್ ಯೂ ಎನ್ನಬಹುದು. ಆದರೆ ಸಂಸ್ಕೃತದಲ್ಲಿ ಸಾಧ್ಯವಿಲ್ಲ’ ಎಂದಿದ್ದಾರೆ. ವೆಲ್ಲೂರಿನಲ್ಲಿ ಮಾತನಾಡಿದ ಅವರು, ‘ಯಾರಿಗೂ ಅರ್ಥವಾಗದ ಸಂಸ್ಕೃತ ಭಾಷೆಗೆ ಕೇಂದ್ರ ಸರ್ಕಾರ 2,500 ಕೋಟಿ ರು. ಅನುದಾನ ನೀಡುತ್ತಿದೆ. ಆದರೆ ತಮಿಳಿಗೆ ಕೇವಲ 167 ಕೋಟಿ ರು. ನೀಡಿದೆ. ‘ನಮ್ಮ ಜಿಎಸ್‌ಟಿ ಹಣವನ್ನು ಕೇಂದ್ರ ಸರ್ಕಾರ ಸಂಸ್ಕೃತದ ಉದ್ಧಾರಕ್ಕಾಗಿ ಬಳಸುತ್ತಿದೆ. ಆ ಭಾಷೆ ಯಾರು ಅರ್ಥಮಾಡಿಕೊಳ್ಳುತ್ತಾರೆ? ನಾವು ತಮಿಳಿನಲ್ಲಿ ‘ಐ ಲವ್ ಯೂ’ ಎನ್ನಬಹುದು. ಮದುವೆ ಕಾರ್ಯಕ್ರಮಕ್ಕೆ ಹೋದರೆ, ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಅದು ಯಾರಿಗೆ ತಾನೇ ಅರ್ಥವಾಗುತ್ತದೆ?’ ಎಂದು ಪ್ರಶ್ನಿಸಿದ್ದಾರೆ.

Read more Articles on