ಸಾರಾಂಶ
ನವದೆಹಲಿ: ವಕ್ಪ್ ಕಾಯ್ದೆ ತಿದ್ದುಪಡಿ ಕುರಿತು ವರದಿ ನೀಡಲು ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿ, ತನ್ನ ಅವಧಿಯನ್ನು ಮುಂದಿನ ಬಜೆಟ್ ಅಧಿವೇಶನದ ಅಂತ್ಯದವರೆಗೂ ವಿಸ್ತರಣೆ ಮಾಡುವಂತೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ಕೋರಲು ಸರ್ವಾನುಮತದಿಂದ ನಿರ್ಧರಿಸಿದೆ. ಹೀಗಾಗಿ ಬಹುನಿರೀಕ್ಷಿತ ವಕ್ಫ್ ತಿದ್ದುಪಡಿ ಮಸೂದೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವುದು ಬಹುತೇಕ ಅನುಮಾನವೆಂಬಂತೆ ಕಂಡುಬಂದಿದೆ.
ಬುಧವಾರ ಜೆಪಿಸಿ ಸಭೆ ಆರಂಭವಾದ ಕೆಲ ಹೊತ್ತಿನಲ್ಲೇ, ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಸಭೆಯನ್ನು ಅಣಕ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳ ಸದಸ್ಯರು ಸಭೆಯಿಂದ ಹೊರ ನಡೆದರು. ಇದಾದ ಕೆಲ ಹೊತ್ತಿನಲ್ಲೇ ಬಿಜೆಪಿ ನಾಯಕ ದುಬೆ, ಸಮಿತಿ ಅವಧಿ ವಿಸ್ತರಣೆ ಕೋರಿ ಮನವಿ ಮಾಡಿದರು. ಇದು ಸಮಿತಿಯ ಅವಧಿಯ ವಿಸ್ತರಣೆ ಸುಳಿವು ಎಂದ ಅರಿತ ವಿಪಕ್ಷ ಸದಸ್ಯರು ಒಂದು ಗಂಟೆ ಬಳಿಕ ಮತ್ತೆ ಜೆಪಿಸಿ ಸಭೆಗೆ ಹಾಜರಾದರು. ಬಳಿಕ ಪಾಲ್ ಕೂಡಾ ಸದಸ್ಯರ ಮನವಿಗೆ ಓಗೊಟ್ಟು ಸಮಿತಿ ಅವಧಿ ವಿಸ್ತರಣೆಗೆ ಕೋರಿಕೆ ಸಲ್ಲಿಸಲು ಸಮ್ಮತಿಸಿದರು.