ತಾಜ್‌ಮಹಲ್‌ನ ಗುಮ್ಮಟದಲ್ಲಿ ಸೋರಿಕೆ: ಮಳೆಯ ಅಬ್ಬರಕ್ಕೆ ವಿಶ್ವ ಪಾರಂಪರಿಕ ತಾಣ ತತ್ತರ?

| Published : Sep 15 2024, 01:52 AM IST / Updated: Sep 15 2024, 08:40 AM IST

ಸಾರಾಂಶ

ಆಗ್ರಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಜ್‌ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರುತ್ತಿದ್ದು, ಸುತ್ತಲಿನ ಉದ್ಯಾನವೂ ಜಲಾವೃತಗೊಂಡಿದೆ. ಗುಮ್ಮಟಕ್ಕೆ ಹಾನಿಯಾಗಿಲ್ಲ ಎಂದು ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ.

  ಆಗ್ರಾ :  ಕಳೆದ 3 ದಿನದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಅಮರ ಪ್ರೇಮ ಸ್ಮಾರಕ ‘ತಾಜ್‌ ಮಹಲ್‌’ನ ಮುಖ್ಯ ಗುಮ್ಮಟ ಸೋರುತ್ತಿದ್ದು, ಕಟ್ಟಡದ ಸುತ್ತ ಇರುವ ಉದ್ಯಾನ ನೀರಿನಲ್ಲಿ ಮುಳುಗಿದೆ.

ನೀರಿನ ಸೋರಿಕೆಯು ಸಹಜವಾಗಿಯೇ ಗುಮ್ಮಟಕ್ಕೆ ಹಾನಿ ಆಗಿದೆಯೇ ಎಂಬ ಗುಮಾನಿ ಸೃಷ್ಟಿಸಿವೆ. ಇದರ ಕೆಲ ವೀಡಿಯೋಗಳು ವೈರಲ್‌ ಆಗುತ್ತಿವೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಆಗ್ರಾದ ಪುರಾತತ್ವ ಇಲಾಖೆ (ಎಎಸ್‌ಐ) ಹಿರಿಯ ಅಧಿಕಾರಿ ರಾಜಕುಮಾರ್‌ ಪಟೇಲ್‌, ‘ತಾಜ್‌ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರುತ್ತಿರುವುದು ನಿಜ. ಮೇಲೆ ಸಂಗ್ರಹವಾದ ಮಳೆ ನೀರು ಸೋರುತ್ತಿದ್ದು, ಗುಮ್ಮಟಕ್ಕೆ ಯಾವುದೇ ಹಾನಿಯಾಗಿಲ್ಲ. ಈ ಕುರಿತು ಡ್ರೋನ್‌ ಬಳಸಿ ಪರಿಶೀಲಿಸಲಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಜ್‌ ಮಹಲ್‌ನ ಸರ್ಕಾರಿ ಮಾರ್ಗದರ್ಶಕನಾಗಿ ಕೆಲಸ ಮಾಡುತ್ತಿರುವ ಸ್ಥಳೀಯ ನಿವಾಸಿ ಮೋನಿಕಾ ಶರ್ಮಾ ಮಾತನಾಡಿ, ‘ತಾಜ್‌ ಮಹಲ್‌ ಆಗ್ರಾ ಹಾಗೂ ಭಾರತದ ಹೆಮ್ಮೆಯಾಗಿದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅನೇಕ ಸ್ಥಳಿಯರಿಗೆ ಉದ್ಯೋಗ ನೀಡಿದೆ. ಇದು ನಮ್ಮೆಲ್ಲರ ಏಕೈಕ ಭರವಸೆಯಾಗಿರುವ ಕಾರಣ ಇದರ ಸರಿಯಾದ ನಿರ್ವಹಣೆ ಅಗತ್ಯ’ ಎಂದರು.

ಮಳೆಯಿಂದಾಗಿ ಆಗ್ರಾದ ಹಲವು ಭಾಗಗಳಲ್ಲಿ ನೀರು ನಿಂತಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಜೊತೆಗೆ ಅನೇಕ ಕಡೆ ಬೆಳೆ ಮುಳುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.