ಪ್ರಿಯಾಂಕಾಗಿಂತ ನನಗೆ ಅನುಭವ ಜಾಸ್ತಿ: ಬಿಜೆಪಿ ಅಭ್ಯರ್ಥಿ ನವ್ಯಾ

| Published : Oct 23 2024, 12:44 AM IST

ಸಾರಾಂಶ

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ವಯನಾಡು ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಪ್ರಿಯಾಂಕಾ ಗಾಂಧಿಗಿಂತ ತನಗೆ ಅನುಭವ ಜಾಸ್ತಿ ಎಂದು ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್‌ ಹೇಳಿದ್ದಾರೆ.

ವಯನಾಡ್‌: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ವಯನಾಡು ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಪ್ರಿಯಾಂಕಾ ಗಾಂಧಿಗಿಂತ ತನಗೆ ಅನುಭವ ಜಾಸ್ತಿ ಎಂದು ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್‌ ಹೇಳಿದ್ದಾರೆ.ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು,‘ ಪ್ರಿಯಾಂಕಾ ಗಾಂಧಿ ನೆಹರು ಕುಟುಂಬ ಹಿನ್ನೆಲೆಯಿಂದ ರಾಷ್ಟ್ರೀಯ ವ್ಯಕ್ತಿ. ಆದರೆ ಇದು ಅವರ ಮೊದಲ ಚುನಾವಣೆ. ಆದರೆ ನಾನು 2 ಬಾರಿ ಕಲ್ಲಿಕೋಟೆ ಕಾರ್ಪೋರೆಷನ್‌ನಲ್ಲಿ ಕೌನ್ಸಿಲರ್‌ ಆಗಿ ಕೆಲಸ ಮಾಡಿದ್ದೇನೆ. 2021ರ ವಿಧಾನಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದೇನೆ. ಹಲವಾರು ವರ್ಷಗಳಿಂದ ಜನರನ್ನು ಪ್ರತಿನಿಧಿಸಿದ್ದೇನೆ. ಹೀಗಾಗಿ ಪ್ರಿಯಾಂಕಾ ವಿರುದ್ಧ ಸ್ಪರ್ಧೆ ಮಾಡುತ್ತಿರುವುದು ನನಗೆ ಹೆಚ್ಚು ವ್ಯತ್ಯಾಸ ಕಾಣುತ್ತಿಲ್ಲ. ಅವರಿಗಿಂತ ನನಗೆ ಹೆಚ್ಚು ಅನುಭವವಿದೆ ಎಂದು ನಾನು ನಂಬುತ್ತೇನೆ’ ಎಂದರು.

ನ.13ರಂದು ವಯನಾಡಿನಲ್ಲಿ ಉಪ ಚುನಾವಣೆ ನಡೆಯಲಿದೆ.

ಇಂದು ಪ್ರಿಯಾಂಕಾ ನಾಮಪತ್ರ:

ಈ ನಡುವೆ ವಯನಾಡ್‌ಗೆ ಬುಧವಾರ ಪ್ರಿಯಾಂಕಾ ಗಾಂಧಿ ಆಗಮಿಸಲಿದ್ದು, ನಾಮಪತ್ರ ಸಲ್ಲಿಸಲಿದ್ದಾರೆ.

==

ಪೂರ್ವ ಲಡಾಖ್ ಬಿಕ್ಕಟ್ಟು ಇತ್ಯರ್ಥಕ್ಕೆ ಭಾರತದ ಜತೆ ಒಪ್ಪಂದ: ಚೀನಾ

ಬೀಜಿಂಗ್: ಲಡಾಖ್‌ನ 2 ವಿವಾದಿತ ಪ್ರದೇಶಗಳಲ್ಲಿ ಜಂಟಿ ಗಸ್ತು ನಡೆಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ ಎಂಬ ಭಾರತದ ಘೋಷಣೆಯನ್ನು ಮಂಗಳವಾರ ಚೀನಾ ದೃಢ ಪಡಿಸಿದೆ. ‘ಪೂರ್ವ ಲಡಾಖ್‌ನಲ್ಲಿ ಉಭಯ ಸೇನೆಗಳ ನಡುವಿನ ಬಿಕ್ಕಟ್ಟನ್ನು ಬಗೆಹರಿಸಲು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ’ ಎಂದಿದೆ.ಈ ಬಗ್ಗೆ ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಲಿನ್ ಜಿಯಾನ್ ಮಾತನಾಡಿ,‘ಇತ್ತೀಚೆಗೆ ಚೀನಾ ಮತ್ತು ಭಾರತದ ನಡುವೆ ಗಡಿ, ರಾಜತಾಂತ್ರಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಿಕಟ ಸಂವಹನ ನಡೆಯುತ್ತಿದೆ. ಈಗ ಎರಡೂ ಕಡೆಯವರು ಚೀನಾ ಹೆಚ್ಚು ಮಾತನಾಡುವ ವಿಷಯಗಳ ಬಗ್ಗೆ ನಿರ್ಣಯ ಹಂತ ತಲುಪಿದ್ದಾರೆ. ಈ ನಿರ್ಣಯವನ್ನು ಜಾರಿಗೆ ತರಲು ಭಾರತದೊಂದಿಗೆ ಕೆಲಸ ಮಾಡುತ್ತೇವೆ’ ಎಂದರು.

==

ಕೇರಳ ಲೈಂಗಿಕ ದೌರ್ಜನ್ಯ: ನಟ ಮುಕೇಶ್‌ 2ನೇ ಸಲ ಬಂಧನ, ಬಿಡುಗಡೆ

ತ್ರಿಶೂರ್‌: 2010ರಲ್ಲಿ ಮಧ್ಯ ಕೇರಳ ಜಿಲ್ಲೆಯ ತ್ರಿಶೂರ್‌ನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ಸಿಪಿಎಂ ಶಾಸಕ ಎ. ಮುಕೇಶ್‌ ಅವರನ್ನು ಸೋಮವಾರ ಎಸ್‌ಐಟಿ ಪೊಲೀಸರು 2ನೇ ಬಾರಿ ಬಂಧಿಸಿದ್ದಾರೆ. ಅದರೆ ಈ ಹಿಂದೆ ಕೋರ್ಟ್‌ ನಿರೀಕ್ಷಣಾ ಜಾಮೀನು ನೀಡಿದ್ದರಿಂದ ಮುಕೇಶ್‌ ಬಿಡುಗಡೆಯಾಗಿದ್ದಾರೆ.ಮಲಯಾಳಿ ನಟಿಯೊಬ್ಬರು, ಮುಖೇಶ್ ವಿರುದ್ಧ ವಡಕ್ಕಂಚೇರಿ ಮತ್ತು ಮರಡು- ಎರಡೂ ಪೊಲೀಸ್‌ ಠಾಣೆಯಲ್ಲೂ ದೂರು ದಾಖಲಿಸಿದ್ದರು. ಈ ಎರಡೂ ಠಾಣೆಯಿಂದಲೂ ಮುಕೇಶ್‌ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

ಈ ಸೆಕ್ಸ್‌ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಟ ಇಡವೇಲ ಬಾಬುರನ್ನು ಬಂಧಿಸಿದ್ದರು. ಮುಕೇಶ್‌ರನ್ನು ಮೊದಲ ರಂದು ಬಾರಿಗೆ ಸೆ.24 ರಂದು ಬಂಧಿಸಿದ್ದರು.

==

ಸಚಿವೆ ಸುರೇಖಾ ವಿರುದ್ಧ ಕೆಟಿಆರ್ ₹100 ಕೋಟಿ ಮಾನನಷ್ಟ ದಾವೆ

ಹೈದರಾಬಾದ್: ‘ನಟ ನಾಗಚೈತನ್ಯ ಹಾಗೂ ಸಮಂತಾ ಅವರ ವಿಚ್ಛೇದನಕ್ಕೆ ಕೆಟಿಆರ್‌ ಕಾರಣ’ ಎಂದು ಆರೋಪಿಸಿದ್ದ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಅವರ ವಿರುದ್ಧ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್‌ (ಕೆಟಿಆರ್‌) 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.‘ನನ್ನ ಮೇಲಿನ ಆಧಾರರಹಿತ ಆರೋಪಗಳು ಹಾಗೂ ವೈಯಕ್ತಿಕ ನಿಂದನೆಗಳ ವಿರುದ್ಧ ನಾನು ದೃಢವಾದ ನಿರ್ಧಾರ ತೆಗೆದುಕೊಂಡಿದ್ದೇನೆ. ಸುರೇಖಾ ಅವರ ದುರುದ್ದೇಶಪೂರಿತ ಹಾಗೂ ಕೀಳು ಮಟ್ಟದ ಹೇಳಿಕೆಗಳಿಗೆ ನಾನು 100 ಕೋಟಿ ಮಾನನಷ್ಟ ದಾವೆ ಹೂಡಿದ್ದೇನೆ’ ಎಂದಿದ್ದಾರೆ.

ನಟ ನಾಗಚೈತನ್ಯ ಅವರ ತಂದೆ ನಟ ನಾಗಾರ್ಜುನ ಅವರು ಈಗಾಗಲೇ ಕ್ರಿಮಿನಲ್‌ ಮಾನನಷ್ಟ ದಾವೆ ಹೂಡಿದ್ದಾರೆ.

==

ಹೊಸ ಉಗ್ರ ನೇಮಕ ಜಾಲ ಭೇದಿಸಿದ ಕಾಶ್ಮೀರ ಪೊಲೀಸರು

ಶ್ರೀನಗರ: ಯುವಕರನ್ನು ಭಯೋತ್ಪಾದನೆ ಜಾಲಕ್ಕೆ ಸೆಳೆಯಲೆಂದೇ ಸ್ಥಾಪಿತವಾಗಿದ್ದ ಉಗ್ರ ಜಾಲವೊಂದನ್ನು ಭೇದಿಸುವಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಯಶಸ್ವಿಯಾಗಿದ್ದಾರೆ. ಲಷ್ಕರ್‌ ಎ ತೊಯ್ಬಾದ ಉಪ ಸಂಘಟನೆ ಎನ್ನಲಾದ‘ ತೆಹ್ರೀಕ್‌ ಲಬೈಕ್‌ ಯಾ ಮುಸ್ಲಿಂ’ ಎಂಬ ಈ ಸಂಘಟನೆ ಯುವಕರನ್ನು ಉಗ್ರವಾದಕ್ಕೆ ಸೆಳೆದು ಅವರನ್ನು ಉಗ್ರ ಕೃತ್ಯಗಳಿಗೆ ನೇಮಕ ಮಾಡುವ ಕೆಲಸ ಮಾಡುತ್ತಿತ್ತು.ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಸೋಮವಾರ ಶ್ರೀನಗರ, ಗಂದರ್‌ಬಲ್‌, ಬಂಡಿಪೋರಾ, ಕುಲ್ಗಾಂ, ಬುದ್ಗಾಂ, ಅನಂತನಾಗ್ ಮತ್ತು ಪುಲ್ವಾಮಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ ಜಾಲ ಭೇದಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಬಾಬಾ ಹಮಾಸ್‌ ಎಂಬಾತ ಈ ಉಗ್ರ ಸಂಘಟನೆ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

==

ಜಿಡಿಪಿ ಈ ವರ್ಷ ಶೇ.7ಕ್ಕೆ, 2025ರಲ್ಲಿ ಶೇ.6.5ಕ್ಕೆ ಇಳಿಕೆ ಸಂಭವ: ಐಎಂಎಫ್‌

ವಾಷಿಂಗ್ಟನ್‌: 2023ರಲ್ಲಿ ಶೇ.8.2ರಷ್ಟಿದ್ದ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ), ಈ ವರ್ಷ ಶೇ.7ಕ್ಕೆ ಹಾಗೂ 2025ರಲ್ಲಿ ಶೇ.6.5ಕ್ಕೆ ಕುಸಿತವಾಗುವ ಸಾಧ್ಯತೆ ಇದದೆ ಎಂದು ಮಂಗಳವಾರ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಅಂದಾಜಿಸಿದೆ.ಪ್ರಮುಖವಾಗಿ ಕೋವಿಡ್‌-19 ಮುಗಿದ ನಂತರ ವಸ್ತುಗಳ ಬೇಡಿಕೆ ಹೆಚ್ಚಿತ್ತು. ಆದ್ದರಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಯಲ್ಲಿ ತೊಡಗಿದ್ದರು. ಇದರಿಂದ ಭಾರತದ ಜಿಡಿಪಿ ಏರಿಕೆ ಕಂಡಿತ್ತು. ಆದರೆ ಈಗ ಜಗತ್ತು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಹೀಗಾಗಿ ಜಿಡಿಪಿ ಇಳಿಕೆಯಾಗಲಿದೆ ಎಂದು ಅದು ಹೇಳಿದೆ.