ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತ : ಅವಶೇಷದ ಅಡಿ ಸಿಲುಕಿದವರ ರಕ್ಷಣೆಗೆ ಹರಸಾಹಸ

| Published : Aug 01 2024, 12:17 AM IST / Updated: Aug 01 2024, 09:17 AM IST

ಸಾರಾಂಶ

ವಯನಾಡಿನಲ್ಲಿ ಸಂಭವಿಸಿರುವ ಘನಘೋರ ದುರಂತದ ಭೀಕರತೆ ಕ್ಷಣಕಳೆದಂತೆ ಹೆಚ್ಚಾಗುತ್ತಿದೆ. ಒಂದೆಡೆ ಸಾವಿನ ಸಂಖ್ಯೆ ಏರಿಕೆಯಾಗುವ ಆತಂಕ. ಮತ್ತೊಂದೆಡೆ ಮಣ್ಣಿನಡಿ, ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಸೇನೆ ಸೇರಿದಂತೆ ರಕ್ಷಣಾ ತಂಡಗಳ 1167 ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.

ತಿರುವನಂತಪುರಂ: ವಯನಾಡಿನಲ್ಲಿ ಸಂಭವಿಸಿರುವ ಘನಘೋರ ದುರಂತದ ಭೀಕರತೆ ಕ್ಷಣಕಳೆದಂತೆ ಹೆಚ್ಚಾಗುತ್ತಿದೆ. ಒಂದೆಡೆ ಸಾವಿನ ಸಂಖ್ಯೆ ಏರಿಕೆಯಾಗುವ ಆತಂಕ. ಮತ್ತೊಂದೆಡೆ ಮಣ್ಣಿನಡಿ, ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಸೇನೆ ಸೇರಿದಂತೆ ರಕ್ಷಣಾ ತಂಡಗಳ 1167 ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.

ದುರಂತದಲ್ಲಿ 4 ಹಳ್ಳಿಗಳು ಕೊಚ್ಚಿ ಹೋಗಿರುವ ಪರಿಣಾಮ ಸಾವಿನ ಸಂಖ್ಯೆ ಮತ್ತು ಗಾಯಗೊಂಡಿರುವವರ ಸಂಖ್ಯೆ ಇನ್ನಷ್ಟು ಜಾಸ್ತಿಯಾಗುವ ಆತಂಕ ಎದುರಾಗಿದೆ. ಒಂದು ವೇಳೆ ಕಾರ್ಯಚರಣೆ ವಿಳಂಬವಾದರೆ ಸಾವಿನ ಸಂಖ್ಯೆ ಹೆಚ್ಚಳವಾಗುವ ಅಪಾಯವಿರುವ ಕಾರಣ, ರಕ್ಷಣಾ ತಂಡಗಳು ಹಲವು ಸವಾಲುಗಳ ನಡುವೆಯೂ ಅವಶೇಷಗಳಡಿ ಸಿಲುಕಿದ್ದವರನ್ನು ಹೊರತೆಗೆಯಲು ಅವಿರತವಾಗಿ ಪ್ರಯತ್ನಿಸುತ್ತಿವೆ. 

ಡಿಫೆನ್ಸ್‌ ಸೆಕ್ಯೂರಿಟಿ ಕಾರ್ಪ್ಸ್‌(ಡಿಎಸ್‌ಸಿ), 122 ಟಿಎ ಬೆಟಾಲಿಯನ್ ತಂಡ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ( ಎನ್‌ಡಿಆರ್‌ಎಫ್‌), ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ಕೆಲವು ಸ್ಥಳೀಯ ರಕ್ಷಣಾ ತಂಡಗಳು ಕೂಡ ಸ್ಥಳದಲ್ಲಿಯೇ ಬೀಡು ಬಿಟ್ಟಿವೆ. ಊರಿಗೆ ಊರೇ ನಾಮಾವಶೇಷವಾಗಿದ್ದು, ಸಂಪರ್ಕಗಳು ಕಡಿತವಾಗಿರುವುದು ಕಾರ್ಯಚರಣೆಗಳು ತೊಡಕಾಗಿವೆ. ಅಂತಹ ಕಡೆಗಳಲ್ಲಿ ರಕ್ಷಣಾ ತಂಡಗಳೇ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿಕೊಂಡಿವೆ. ಸೇನೆಯು ಕೇರಳ ಸರ್ಕಾರದ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಈಗಾಗಲೇ ಅವಶೇಷಗಳಡಿ ಸಿಲುಕಿರುವ ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಸುಮಾರು 1,167 ಸಿಬ್ಬಂದಿಗಳು ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.