ಸಾರಾಂಶ
ವಯನಾಡು: ವಯನಾಡು ಜಿಲ್ಲೆಯ 4 ಗ್ರಾಮಗಳ ವ್ಯಾಪ್ತಿಯಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 413ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಇನ್ನೂ 152 ಜನರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ.
ಭುಕುಸಿತದಿಂದ ಹಾನಿಗೊಳಗಾದ ಮೆಪ್ಪಾಡಿ ಪಂಚಾಯತ್ ವ್ಯಾಪ್ತಿಯ ಮೂರು ಪ್ರದೇಶಗಳಿಗೆ ಮುಂದಿನ ಆರು ತಿಂಗಳ ಕಾಲ ಉಚಿತ ವಿದ್ಯುತ್ ನೀಡುವಂತೆ ಸಚಿವ ಕೆ. ಕೃಷ್ಣನ್‌ಕುಟ್ಟಿ ಕೇರಳ ರಾಜ್ಯ ವಿದ್ಯುತ್ ಮಂಡಳಿಗೆ ಮಂಗಳವಾರ ಸೂಚಿಸಿದ್ದಾರೆ. ಜೊತೆಗೆ 3 ಗ್ರಾಮಗಳ ವ್ಯಾಪ್ತಿಯ 1139 ಜನರು ಪಂಚಾಯಿತಿಗಳಿಗೆ ಉಳಿಸಿಕೊಂಡ ಬಾಕಿ ಪಾವತಿಯನ್ನೂ ಮನ್ನಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ನಡುವೆ ಭೂಕುಸಿತದಲ್ಲಿ ಕಾಣೆಯಾದವರ ಹುಡುಕಾಟ ಸತತವಾಗಿ ನಡೆಯುತ್ತಿದ್ದು, ರಕ್ಷಣಾ ಪಡೆಗಳು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿವೆ. ಆರು ಸೈನಿಕರು, ಕೇರಳ ಪೊಲೀಸರ ವಿಶೇಷ ಕಾರ್ಯಾಚರಣೆ ವಿಭಾಗದ ನಾಲ್ವರು ಕಮಾಂಡೋಗಳು ಸೇರಿದಂತೆ 12 ಜನರ ರಕ್ಷಣಾ ತಂಡವನ್ನು ಸನ್‌ರೈಸ್ ವ್ಯಾಲಿ ಪ್ರದೇಶದಲ್ಲಿ ಹುಡುಕಾಟ ನಡೆಸಲು ನಿಯೋಜಿಸಲಾಗಿದ್ದು, ಶ್ವಾನ ದಳ ಅವರಿಗೆ ಸಹಕರಿಸಲಿದೆ.
ವಯನಾಡಿನ ಭೂಕುಸಿತ ಬಾಧಿತ ಪ್ರದೇಶಗಳಿಗೆ ಮೋದಿ ಭೇಟಿ?
ವಯನಾಡ್: ಭೂಕುಸಿತದಿಂದ ಅಪಾರ ನಷ್ಟ ಅನುಭವಿಸಿರುವ ಪ್ರದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಆ.10 ಅಥವಾ 11ರಂದು ಭೇಟಿ ನೀಡುವ ಸಾಧ್ಯತೆ ಇದೆ. ಪ್ರಧಾನಿಗಳ ಭದ್ರತೆಯ ಹೊಣೆ ಹೊತ್ತಿರುವ ಎಸ್‌ಪಿಜಿ ಘಟಕ ಬುಧವಾರ ವಯನಾಡಿಗೆ ಅಗಮಿಸಿ ಪರಿಶೀಲನೆ ನಡೆಸಿರುವುದು ಮೋದಿ ಭೇಟಿ ಕುರಿತು ವರದಿಗಳಿಗೆ ಕಾರಣವಾಗಿದೆ. ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿರುವ ಮೋದಿ ಹೆಲಿಕಾಪ್ಟರ್ ಮೂಲಕ ಮುಂಡಕ್ಕೈನ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿ ಸಂತ್ರಸ್ತರ ನೋವನ್ನು ಆಲಿಸಲಿದ್ದಾರೆ ಎನ್ನಲಾಗಿದೆ.
ವಯನಾಡು ವಿಪತ್ತು ರಾಷ್ಟ್ರೀಯ ದುರಂತವೆಂದು ಘೋಷಿಸಿ: ರಾಹುಲ್
ನವದೆಹಲಿ: ವಯನಾಡಿಗೆ ಬಂದೊದಗಿರುವ ವಿಪತ್ತನ್ನು ರಾಷ್ಟ್ರೀಯ ದುರಂತವೆಂದು ಘೋಷಿಸುವಂತೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಬಗ್ಗೆ ಬುಧವಾರ ಲೋಕಸಭೆ ಕಲಾಪದ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಅವರು, ಸಂತ್ರಸ್ತರಿಗೆ ಹೆಚ್ಚಿನ ನೆರವು ನೀಡುವಂತೆಯೂ ಆಗ್ರಹಿಸಿದ್ದಾರೆ.
‘ಭೂಕುಸಿತ ಸಂಭವಿಸಿದ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ. ಕೆಲ ಕಡೆ ಇಡೀ ಕುಟುಂಬವೇ ನಾಶವಾಗಿದ್ದು, ಯುವಕರು ಅಥವಾ ಮಕ್ಕಳು ಮಾತ್ರ ಉಳಿದುಕೊಂಡಿದ್ದಾರೆ. ಈಗಾಗಲೇ 200ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡು ಅನೇಕರು ಕಾಣೆಯಾಗಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ’ ಎಂದು ಅವರು ಹೇಳಿದ್ದಾರೆ. ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ನಿಂತ ಕರ್ನಾಟಕ, ತಮಿಳುನಾಡು, ತೆಲಂಗಾಣ ಸರ್ಕಾರಗಳನ್ನು ಗಾಂಧಿ ಶ್ಲಾಘಿಸಿದ್ದು, ಜನರ ಒಗ್ಗಟ್ಟನ್ನು ಮೆಚ್ಚಿದ್ದಾರೆ.