ಸಾರಾಂಶ
ವಯನಾಡು: ಭೂಕುಸಿತದಿಂದ ಪಾರಾಗಿ ಪರದಾಡುತ್ತಿರುವ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಕೆಲವರು ಮನೆ ಕಳೆದುಕೊಂಡು ಆಶ್ರಯಕ್ಕಾಗಿ ಅಲೆದಾಡುತ್ತಿದ್ದರೆ, ಇನ್ನೂ ಕೆಲವರು ತಮ್ಮವರನ್ನು ಕಳೆದುಕೊಂಡು ಶೋಕಿಸುತ್ತಿದ್ದಾರೆ.
ಮುಂಡಕ್ಕೈ ನಿವಾಸಿ ಪ್ರಾಂಜೀಶ್ ಮಾತನಾಡಿ, ‘ಮಧ್ಯರಾತ್ರಿ 12:40ರ ಸುಮಾರಿಗೆ ಭೂಕುಸಿತದ ಸದ್ದು ಕೇಳಿಸಿದ್ದು, ಮನೆಯ ಮುಂದೆಯೇ ಸಂಭವಿಸಿದ ದುರ್ಘಟನೆಯಲ್ಲಿ ಕುಟುಂಬದ ಮೂವರು ಬಲಿಯಾದರು. ಉಳಿದ ಎಂಟು ಮಂದಿ ಶಿಬಿರದಲ್ಲಿ ಸುರಕ್ಷಿತರಾಗಿದ್ದೇವೆ’ ಎಂದರು.
ಚೂರಲ್‌ಮಲೆಯ ಪ್ರಸನ್ನಾ ಎಂಬಾಕೆ ಮಾತನಾಡಿ, ‘ನಾನು ನನ್ನ ತಂದೆಯನ್ನು ಹೊತ್ತು ಕಾಡಿನೆಡೆ ಓಡಿ ಬಚಾವಾದೆ. ಆದರೆ ನನ್ನ ಸಹೋದರಿ ಮತ್ತು ಆಕೆಯ 2 ಮಕ್ಕಳನ್ನು ರಕ್ಷಿಸುವಲ್ಲಿ ಸೋತೆ. ಅವರ ಆಕ್ರಂದನ ನನಗೆ ಕೇಳಿದ್ದು, ವಾಸವಿದ್ದ ಮನೆಯೂ ಕೊಚ್ಚಿಕೊಂಡು ಹೋಯಿತು. ಭೂಕುಸಿತವನ್ನು ಕಣ್ಣಾರೆ ಕಂಡ ಮಕ್ಕಳು ಆ ಆಘಾತಕಾರಿ ದೃಶ್ಯದಿಂದ ಭಯಭೀತರಾಗಿದ್ದಾರೆ’ ಎಂದರು.
ಪದ್ಮಾವತಿ ಎಂಬ 80ರ ವೃದ್ಧೆ ತನ್ನ ಸೊಸೆಯನ್ನು ಕಳೆದುಕೊಂಡಿದ್ದು, ಮುಂದೆ ತನಗೆ ಯಾರು ದಿಕ್ಕು ಎಂದು ತೋಚದೆ ಪರಿತಪಿಸುತ್ತಿದ್ದಾರು.
ಅಟ್ಟಮಾಲಾ, ಮುಂಡಕ್ಕೈ ಮತ್ತು ಚೂರಣಮಾಲಾಗಳಲ್ಲಿ ಜನ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇತ್ತ ವಯನಾಡಿನ ಕೆಲ ಶಾಲೆ, ಚರ್ಚ್, ಅಂಗನವಾಡಿಗಳನ್ನು ಪರಿಹಾರ ಶಿಬಿರಗಳನ್ನಾಗಿ ಪರಿವರ್ತಿಸಲಾಗಿದೆ.