ಸಾರಾಂಶ
ಕೇರಳದ ವಯನಾಡಿನಲ್ಲಿ ಸುಮಾರು 300 ಜನರನ್ನು ಬಲಿ ಪಡೆದ ಭೀಕರ ಭೂಕುಸಿತ ಹೇಗಾಯಿತು ಎಂಬುದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪತ್ತೆ ಹಚ್ಚಿದೆ ಹಾಗೂ ಈ ಕುರಿತಾದ ಹೈ-ರೆಸಲ್ಯೂಷನ್ ಉಪಗ್ರಹ ಚಿತ್ರಗಳನ್ನು ಪ್ರಕಟಿಸಿದೆ.
ತಿರುವನಂತಪುರ: ಕೇರಳದ ವಯನಾಡಿನಲ್ಲಿ ಸುಮಾರು 300 ಜನರನ್ನು ಬಲಿ ಪಡೆದ ಭೀಕರ ಭೂಕುಸಿತ ಹೇಗಾಯಿತು ಎಂಬುದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪತ್ತೆ ಹಚ್ಚಿದೆ ಹಾಗೂ ಈ ಕುರಿತಾದ ಹೈ-ರೆಸಲ್ಯೂಷನ್ ಉಪಗ್ರಹ ಚಿತ್ರಗಳನ್ನು ಪ್ರಕಟಿಸಿದೆ.
ಸಮುದ್ರ ಮಟ್ಟದಿಂದ 1500 ಮೀಟರ್ ಎತ್ತರದಲ್ಲಿರುವ ಗುಡ್ಡದ 86,000 ಚದರ ಮೀಟರ್‌ನಷ್ಟು (21 ಎಕರೆ) ಭಾಗ ಕುಸಿದಿದ್ದು, ಅದರ ಅವಶೇಷವು ಸಮೀಪದ ಇರುವೈಪುಳ ನದಿಯಲ್ಲಿ 8 ಕಿ.ಮೀ.ನಷ್ಟು ದೂರ ತೇಲಿಕೊಂಡು ಹೋಗಿದೆ. ಇದರಿಂದಾಗಿ ನದಿ ಅಕ್ಕಪಕ್ಕದ ಇಳಿಜಾರು ಪ್ರದೇಶದ 4 ಗ್ರಾಮಗಳು ನಾಮಾವಶೇಷವಾದವು ಎಂದು ಗೊತ್ತಾಗಿದೆ.ಇಸ್ರೋ ಗುರುವಾರ 2 ಉಪಗ್ರಹ ಚಿತ್ರ ಪ್ರಕಟಿಸಿದೆ. ಮೊದಲನೆಯ ಚಿತ್ರದಲ್ಲಿ ಈ ಹಿಂದೊಮ್ಮೆ ಸಂಭವಿಸಿದ ಭೂಕುಸಿತದ ದೃಶ್ಯವಿದೆ. ಈಗ ಉಂಟಾದ ಭೂಕುಸಿತದ ಸ್ಥಳದಲ್ಲೇ ಹಿಂದೆಯೂ ಈಗಿನಷ್ಟು ಅಲ್ಲದಿದ್ದರೂ ತಕ್ಕಮಟ್ಟಿಗೆ ಭೂಕುಸಿತ ಆಗಿತ್ತು. ಅರ್ಥಾತ್ ಈ ಸ್ಥಳವು ಭೂಕುಸಿತದ ಅಪಾಯವನ್ನು ತನ್ನೊಡಲಿನಲ್ಲೇ ಇರಿಸಿಕೊಂಡಿತ್ತು ಮತ್ತು ಈ ಭಾಗದ ಜನರು ಅದನ್ನು ನಿರ್ಲಕ್ಷಿಸಿ ಇಲ್ಲೇ ವಾಸವಾಗಿದ್ದರು ಎಂಬುದನ್ನು ತೋರಿಸುತ್ತದೆ.ಈಗಿನ ಭೂಕುಸಿತವು ಹಳೆಯ ಸ್ಥಳದಲ್ಲೇ ಕುಸಿತ ಆಗಿದ್ದನ್ನು ಉಪಗ್ರಹ ಚಿತ್ರ ತೋರಿಸಿದ್ದು ಅದರಲ್ಲಿ ಕುಸಿತದ ಭಯಾನಕ ಚಿತ್ರಣ ಸ್ಪಷ್ಟವಾಗಿ ಕಾಣಿಸುತ್ತದೆ. ಜು.29 ಹಾಗೂ 30ರಂದು 57 ಸೆಂ.ಮೀ.ನಷ್ಟು ಭಾರಿ ಮಳೆ ಬಿದ್ದಿತ್ತು. ಇದರ ಪರಿಣಾಮ, ಸಮುದ್ರ ಮಟ್ಟಕ್ಕಿತ 1500 ಮೀ. (1.5 ಕಿ.ಮೀ.) ಎತ್ತರದಲ್ಲಿರುವ ಬೆಟ್ಟದ ಮೇಲಿನ 86,000 ಚದರ ಮೀಟರ್ ಭೂಭಾಗ (ಸುಮಾರು 21 ಎಕರೆ) ಹಠಾತ್ ಕುಸಿದಿದೆ. ಅದರ ಅವಶೇಷವು ಇರುವೈಪುಳ ನದಿಯಲ್ಲಿ 8 ಕಿ.ಮೀ.ನಷ್ಟು ದೂರ ತೇಲಿಕೊಂಡು ಇಳಿಜಾರು ಪ್ರದೇಶದತ್ತ ನುಗ್ಗಿದೆ. ಇದು ಮುಂದುವರಿದು ವಯನಾಡ್ ಸನಿಹದ 4 ಹಳ್ಳಿಗಳನ್ನು ಆಪೋಶನ ತೆಗೆದುಕೊಂಡಿದೆ.ಹೈದರಾಬಾದ್‌ನಲ್ಲಿರುವ ಎನ್‌ಆರ್‌ಎಸ್‌ಸಿ ಕೇಂದ್ರ ಹಾರಿಬಿಟ್ಟಿರುವ ಕಾರ್ಟೋಸ್ಯಾಟ್-3 ಉಪಗ್ರಹ ಮತ್ತು ರಿಸ್ಯಾಟ್ ಉಪಗ್ರಹಗಳು ಈ ಚಿತ್ರಗಳನ್ನು ಸೆರೆಹಿಡಿದಿವೆ. ಇವು ಮೋಡದ ಮರೆಯನ್ನೂ ಭೇದಿಸಿ ಭೂಮಿಯ ಮೇಲ್ಭಾಗದ ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿವೆ.==
ವಯನಾಡ್‌ನಲ್ಲಿ ಸಾವಿನ ಸಂಖ್ಯೆ 300ರ ಗಡಿಯತ್ತವಯನಾಡ್: ದೇವರನಾಡು ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತ ದಿನಗಳೆದಂತೆ ಘನಘೋರ ಭೀಕರತೆಗೆ ಸಾಕ್ಷಿಯಾಗುತ್ತಿದೆ. ಊರಿಗೆ ಊರೇ ನಾಮಾವಶೇಷವಾಗಿರುವ 4 ಗ್ರಾಮಗಳಲ್ಲಿ ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದ್ದು, ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ ಗುರುವಾರ 296ಕ್ಕೆ ತಲುಪಿದ್ದು, 300ರ ಗಡಿಗೆ ಸಮೀಪಿಸಿದೆ.ಅವಶೇಷಗಳ ಅಡಿಯಿಂದ ಬದುಕಿ ಬರುತ್ತಿರುವವರಿಗೆ ಚಿಕಿತ್ಸೆ ನೀಡಿ ಹಾಗೂ ಮೃತ ದೇಹಗಳ ಮರಣೋತ್ತರ ಪರೀಕ್ಷೆ ಮಾಡಿ ಮಾಡಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಸುಸ್ತಾಗಿ ಹೋಗಿದ್ದಾರೆ. ಬುಧವಾರ ಒಂದೇ ರಾತ್ರಿ 100 ಶವಗಳ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ.ಈ ನಡುವೆ, ವಯನಾಡು ದುರಂತದಲ್ಲಿ ಸಿಲುಕಿರುವವರ ರಕ್ಷಣೆಗೆ 1600 ರಕ್ಷಣಾ ಸಿಬ್ಬಂದಿಗಳು, ಘಟನೆ ನಡೆದ ದಿನದಿಂದಲೂ ಅವಿರತ ಶ್ರಮ ವಹಿಸುತ್ತಿದ್ದಾರೆ. ಈಗಾಗಲೇ 2000ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸುಮಾರು 200 ಮಂದಿ ನಾಪತ್ತೆಯಾಗಿದ್ದಾರೆ.ರಕ್ಷಣಾ ಸಿಬ್ಬಂದಿಗಳಿಗೆ ಸಾಲು ಸಾಲು ಸವಾಲುಗಳೇ ಎದುರಾಗಿವೆ. ಒಂದೆಡೆ ಮಳೆಯಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದ್ದರೆ, ಮತ್ತೊಂದೆಡೆ ದೊಡ್ಡ ಗಾತ್ರದ ಬಂಡೆ ಕಲ್ಲುಗಳು, ಮಣ್ಣಿನ ಅವಶೇಷ ಕೂಡ ಸವಾಲಾಗಿ ಪರಿಣಮಿಸಿವೆ. ಹೀಗಾಗಿ ಅವಶೇಷದಲ್ಲಿ ಸಿಲುಕಿರುವವರ ರಕ್ಷಣೆ ಆಗದೇ ಸಾವು- ನೋವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ.