ರಾಜ್ಯಪಾಲಗೆ ‘ತನಿಖೆ ವಿನಾಯ್ತಿ’ ಸರಿಯೇ: ಸಂವಿಧಾನದ 361ನೇ ವಿಧಿ ಪರಿಶೀಲನೆಗೆ ಸುಪ್ರೀಂ ಸಮ್ಮತಿ

| Published : Jul 20 2024, 12:46 AM IST / Updated: Jul 20 2024, 05:31 AM IST

cv anand bose

ಸಾರಾಂಶ

ಅಧಿಕಾರದಲ್ಲಿರುವ ವೇಳೆ ಯಾವುದೇ ಕ್ರಿಮಿನಲ್‌ ಪ್ರಕರಣದ ವಿಚಾರಣೆಯಿಂದ ರಾಜ್ಯಪಾಲರಿಗೆ ವಿನಾಯ್ತಿ ನೀಡುವ ಸಂವಿಧಾನದ 361ನೇ ವಿಧಿಯನ್ನು ಪರಿಶೀಲಿಸಲು ಸುಪ್ರೀಂಕೋರ್ಟ್‌ ಸಮ್ಮತಿ ನೀಡಿದೆ.

ನವದೆಹಲಿ: ಅಧಿಕಾರದಲ್ಲಿರುವ ವೇಳೆ ಯಾವುದೇ ಕ್ರಿಮಿನಲ್‌ ಪ್ರಕರಣದ ವಿಚಾರಣೆಯಿಂದ ರಾಜ್ಯಪಾಲರಿಗೆ ವಿನಾಯ್ತಿ ನೀಡುವ ಸಂವಿಧಾನದ 361ನೇ ವಿಧಿಯನ್ನು ಪರಿಶೀಲಿಸಲು ಸುಪ್ರೀಂಕೋರ್ಟ್‌ ಸಮ್ಮತಿ ನೀಡಿದೆ.

ಪಶ್ಚಿಮ ಬಂಗಾಳದ ರಾಜ್ಯಪಾಲ ಆನಂದ್‌ ಬೋಸ್‌ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಮಹಿಳೆ, ಈ ಕಾಯ್ದೆ ಮರುಪರಿಶೀಲನೆಗೆ ಕೋರಿದ್ದರು. ಇದರ ವಿಚಾರಣೆ ವೇಳೆ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ್‌ ಅವರನ್ನೊಳಗೊಂಡ, 361ನೇ ವಿಧಿ ಪರಿಶೀಲನೆಗೆ ನಿರ್ಧರಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಶ್ಯಾಮ್‌ ದಿವಾನ್‌ ವಾದ ಮಂಡಿಸಿ, ‘ಇಂಥ ಪ್ರಕರಣದಲ್ಲಿ ಯಾವುದೇ ತನಿಖೆ ನಡೆಯಲೇಬಾರದು ಎಂದೇನಿಲ್ಲ. ಮೇಲಾಗಿ ತಕ್ಷಣವೇ ಸಾಕ್ಷ್ಯ ಸಂಗ್ರಹಿಸಬೇಕಿರುತ್ತದೆ. ರಾಜ್ಯಪಾಲರು ಕಚೇರಿ ತೊರೆಯುವವರೆಗೂ ಅದಕ್ಕಾಗಿ ಕಾದು ಕುಳಿತಿರಲಾಗದು. ಇಂಥ ಪ್ರಕರಣಗಳಲ್ಲಿ ಸಮಯ ಅತ್ಯಂತ ಮಹತ್ವದ್ದಾಗಿರುತ್ತದೆ. ಹೀಗಾಗಿ ಈ ಪ್ರಕರಣದ ಅರ್ಜಿದಾರರಂತೆ ಸಂತ್ರಸ್ತರಿಗೆ ಪರಿಹಾರವನ್ನು ಮುಂದೂಡಬಹುದೇ ಎಂಬುದರ ಕುರಿತು ನ್ಯಾಯಾಲಯ ಪರಿಶೀಲನೆ ನಡೆಸಬೇಕು’ ಎಂದು ಮನವಿ ಮಾಡಿದರು.ಈ ಅರ್ಜಿ ವಿಚಾರಣೆಗೆ ಸಮ್ಮತಿಸಿದ ನ್ಯಾಯಾಲಯ, ಪ.ಬಂಗಾಳ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತು. ಅಲ್ಲದೆ ಕೇಂದ್ರ ಸರ್ಕಾರವನ್ನೂ ಪಕ್ಷಗಾರರನ್ನಾಗಿ ಮಾಡಲು ಒಪ್ಪಿತು. ಜೊತೆಗೆ ಈ ಸಾಂವಿಧಾನಿಕ ಪ್ರಕರಣದಲ್ಲಿ ನೆರವು ನೀಡಲು ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರ ನೆರವನ್ನೂ ನ್ಯಾಯಪೀಠ ಕೋರಿತು.

ಯೋಗಿ ಸರ್ಕಾರದಲ್ಲಿ ವಿಪ್ಲವ : ಸಚಿವೆ ಸೋನಂ ಕಿನ್ನರ್‌ ರಾಜೀನಾಮೆ

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಬಂಡಾಯದ ಬಿರಗಾಳಿ ಏಳುತ್ತಿದೆ ಎಂಬ ಸುದ್ದಿಗಳ ನಡುವೆಯೇ ಶುಕ್ರವಾರ, ರಾಜ್ಯ ಸಚಿವೆ ಸ್ಥಾನಮಾನ ಹೊಂದಿದ್ದ ಉತ್ತರ ಪ್ರದೇಶ ಕಿನ್ನರ ಕಲ್ಯಾಣ ಮಂಡಳಿ ಅಧ್ಯಕ್ಷೆ ಸೋನಮ್ ಕಿನ್ನರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರ ರಾಜೀನಾಮೆಯನ್ನು ಸರ್ಕಾರ ಇನ್ನೂ ಅಂಗೀಕರಿಸಿಲ್ಲ. ಲೋಕಸಭಾ ಚುನಾವಣೆಯ ಸೋಲಿನ ಹೊಣೆಯನ್ನು ಯಾರೂ ತೆಗೆದುಕೊಳ್ಳದ ಕಾರಣ ಅದನ್ನು ನಾನೇ ವಹಿಸಿಕೊಳ್ಳುತ್ತೇನೆ. ಈಗ ಸರ್ಕಾರಕ್ಕಿಂತ ಸಂಘಟನೆಯೊಳಗೆ ಕೆಲಸ ಮಾಡುವತ್ತ ಗಮನ ಹರಿಸುವೆ. ಸರ್ಕಾರಕ್ಕಿಂತ ಪಕ್ಷ ಮುಖ್ಯ ಎಂದಿರುವ ಅವರು, ಅಧಿಕಾರಿಗಳು ಪಕ್ಷದ ಕಾರ್ಯಕರ್ತರ ಕಾಳಜಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.