ಸಾರಾಂಶ
ಶ್ರೀನಗರ: ‘ನಾವು ಪಾಕಿಸ್ತಾನದ ಭಾಗವಾಗಲು ಹೋಗುವುದಿಲ್ಲ. ಅವರು ಏಕೆ ಇದನ್ನು ಮಾಡುತ್ತಿದ್ದಾರೆ? ನಮ್ಮ ಭವಿಷ್ಯವನ್ನು ಹಾಳು ಮಾಡಲೆಂದೇ? ನಮ್ಮನ್ನು ಬಡವರನ್ನಾಗಿ ಮಾಡಲೆಂದೇ?’ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಅವರು ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದ್ದಾರೆ.
ಗುಲ್ಮರ್ಗ್‌ನಲ್ಲಿ ಸೇನಾ ವಾಹನದ ಮೇಲೆ ನಡೆದ ಗುಂಡಿನ ದಾಳಿ ಬಗ್ಗೆ ಶುಕ್ರವಾರ ಮಾತನಾಡಿದ ಫಾರೂಖ್, ‘ಇಂತಹ ದಾಳಿಗಳು ನಡೆಯುತ್ತಲೇ ಇರುತ್ತವೆ. ಇದು ಎಲ್ಲಿಂದ ಆಗುತ್ತಿದೆ ಎಂಬುದು ತಿಳಿದಿದೆ. 30 ವರ್ಷಗಳಿಂದ ಇದಕ್ಕೆ ನಾನು ಸಾಕ್ಷಿ. ಅಮಾಯಕರು ಕೊಲ್ಲಲ್ಪಡುತ್ತಿದ್ದಾರೆ. ಪಾಕಿಸ್ತಾನ ಮತ್ತು ಭಾರತ ಸ್ನೇಹಿತರಾಗುವ ತನಕ, ಕಾಶ್ಮೀರದ ಸಮಸ್ಯೆ ಬಗೆ ಹರಿಯುವವರೆಗೂ ಇಂತಹ ದಾಳಿಗಳು ನಡೆಯುತ್ತಲೇ ಇರುತ್ತವೆ’ ಎಂದರು.
ಇದೇ ವೇಳೆ ನಾವು ಪಾಕಿಸ್ತಾನದ ಭಾಗವಾಗಲು ಹೋಗಲ್ಲ ಎಂದು ಖಡಕ್ಕಾಗಿ ಹೇಳಿದ ಅವರು, ‘ಹಿಂಸೆ ನಿಲ್ಲಿಸಿ, ಭಾರತದೊಂದಿಗೆ ಸ್ನೇಹ ಕಂಡುಕೊಳ್ಳಿ, ಬೇರೆ ಹಾದಿ ಕಂಡುಕೊಳ್ಳದಿದ್ದರೆ ಭವಿಷ್ಯ ಮತ್ತಷ್ಟು ಕಷ್ಟವಾಗಿರಲಿದೆ’ ಎಂದು ಪಾಕಿಸ್ತಾಕ್ಕೆ ಎಚ್ಚರಿಸಿದರು.