- ಭಾರೀ ಅಣ್ವಸ್ತ್ರ ಹೊತ್ತು ವಿಶ್ವದ ಯಾವುದೇ ಮೂಲೆಗೆ ತಲುಪಬಲ್ಲ ಶಕ್ತಿ

- 24000 ಕಿ.ಮೀ. ವೇಗದಲ್ಲಿ 9600 ಕಿ.ಮೀ ದೂರ ಸಾಗಬಲ್ಲ ಸಾಮರ್ಥ್ಯ==

ನವದೆಹಲಿ: ಇರಾನ್ ಜತೆಗಿನ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ ವಿಶ್ವದ ಯಾವುದೇ ಮೂಲೆ ತಲುಪಬಲ್ಲ ಸಾಮರ್ಥ್ಯದ ಡೂಮ್ಸ್‌ಡೇ ಮಿಸೈಲ್‌ (ವಿನಾಶದ ಕ್ಷಿಪಣಿ)ನ ಪರೀಕ್ಷೆಯನ್ನು ಅಮೆರಿಕ ನಡೆಸಿದೆ. ಮಿಂಟೆಮನ್‌-3 ಹೆಸರಿನ ಈ ಖಂಡಾಂತರ ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ, ಅಣ್ವಸ್ತ್ರ ಹೊಂದಲು ಬಯಸುತ್ತಿರುವ ಇರಾನ್‌ಗೆ ನೀಡಿದ ನೇರ ಸಂದೇಶ ಎಂದು ವಿಶ್ಲೇಷಿಸಲಾಗಿದೆ.

ಕ್ಯಾಲಿಫೋರ್ನಿಯಾದ ವಂಡೆನ್‌ಬರ್ಗ್‌ ಸ್ಪೇಸ್‌ ಫೋರ್ಸ್‌ ಬೇಸ್‌ನಲ್ಲಿ ಈ ಕ್ಷಿಪಣಿ ಪರೀಕ್ಷೆ ನಡೆಸಲಾಗಿದ್ದು, ಮಾರ್ಷಲ್‌ ದ್ವೀಪದಲ್ಲಿರುವ ಕ್ವಾಜಲಿನ್‌ ಅಟೋಲ್‌ನ ಪೂರ್ವ ನಿರ್ಧರಿತ ಗುರಿಯನ್ನು ಭೇದಿಸುವ ಮೊದಲು ಈ ಕ್ಷಿಪಣಿ 6,700 ಕಿ.ಮೀ.ಗಿಂತಲೂ ಹೆಚ್ಚು ದೂರ ಕ್ರಮಿಸಿದೆ.

ಹಲವು ವರ್ಷಗಳ ಹಿಂದೆಯೇ ಈ ಪ್ರಯೋಗ ನಡೆಯಬೇಕಿತ್ತು. ಆದರೆ, ಸಮಯ-ಸಂದರ್ಭ ಕೂಡಿಬಂದಿರಲಿಲ್ಲ. ಇರಾನ್‌ ಯುದ್ಧಕ್ಕೂ ಈ ಕ್ಷಿಪಣಿ ಪರೀಕ್ಷೆಗೂ ಯಾವುದೇ ಸಂಬಂಧ ಇಲ್ಲ ಎಂದು ಅಮೆರಿಕ ಹೇಳಿಕೊಂಡಿದೆ.


ಮಿಂಟೆಮನ್‌-3 ಕ್ಷಿಪಣಿ

ಎಲ್‌ಜಿಎಂ-30ಜಿ ಮಿಂಟೆಮನ್‌-3 ಅಣ್ವಸ್ತ್ರ ಹೊತ್ತೊಯ್ಯಬಲ್ಲ ಖಂಡಾಂತರ ಬ್ಯಾಲಿಸ್ಟಿಕ್‌ ಕ್ಷಿಪಣಿಯಾಗಿದೆ. ಹಿರೋಶಿಮಾಗೆ ಹಾಕಲಾದ ಅಣುಬಾಂಬ್‌ಗಿಂತ 20 ಪಟ್ಟು ಹೆಚ್ಚು ಶಕ್ತಿಶಾಲಿ ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಈ ಕ್ಷಿಪಣಿಗಿದೆ. ಇದು ನೆಲದಿಂದ ಹಾರಿಸಬಹುದಾದ ಕ್ಷಿಪಣಿ. ಇದನ್ನು ಬೋಯಿಂಗ್‌ ಕಂಪನಿ 1950ರಲ್ಲಿ ಮೊದಲ ಬಾರಿಗೆ ಅಭಿವೃದ್ಧಿಪಡಿಸಿತ್ತು. ಮ್ಯಾಕ್‌ 23 ಅಂದರೆ ಗಂಟೆಗೆ 28,400 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿ 9,600 ಕಿ.ಮೀ.ಗೂ ದೂರ ಕ್ರಮಿಸಬಲ್ಲದು. ಶೇಷವೆಂದರೆ ಈ ಕ್ಷಿಪಣಿ ಈವರೆಗೆ ನೈಜ ಯುದ್ಧದ ಸನ್ನಿವೇಶದಲ್ಲಿ ಬಳಕೆಯೇ ಆಗಿಲ್ಲ.

==

ಡೂಮ್ಸ್‌ಡೇ ಕ್ಷಿಪಣಿ ಅನ್ನೋದ್ಯಾಕೆ?

ಇದು ಅಮೆರಿಕದ ಅಸ್ತಿತ್ವಕ್ಕೆ ಧಕ್ಕೆ ಬಂದಾಗ, ಅಂದರೆ ಅಣ್ವಸ್ತ್ರ ಸಮರದಂಥ ವಿನಾಶಕಾಲದ ವೇಳೆಗೆ ಬಳಸುವ ಕ್ಷಿಪಣಿಯಾಗಿದೆ. ಇದೇ ಕಾರಣಕ್ಕೆ ಇದಕ್ಕೆ ಡೂಮ್ಸ್‌ಡೇ ಕ್ಷಿಪಣಿ ಎಂಬ ಹೆಸರು ಬಂದಿದೆ. ಈ ಹಿಂದಿನ ಕ್ಷಿಪಣಿಗಳು ಲಿಕ್ವಿಡ್‌ ಇಂಧನ(ಲಿಕ್ವಿಡ್‌ ಫ್ಯುಯೆಲ್‌)ದ ರಾಕೆಟ್‌ ಎಂಜಿನ್‌ ಹೊಂದಿದ್ದರೆ, ಇದು ಸಾಲಿಡ್‌ ಫ್ಯುಯೆಲ್‌ ಎಂಜಿನ್‌ನ ಕ್ಷಿಪಣಿಯಾಗಿದೆ. ಹೀಗಾಗಿ ಈ ಕ್ಷಿಪಣಿ ಹಾರಿಸಲು ಹೆಚ್ಚು ಸಮಯ ಬೇಕಿಲ್ಲ. ಭಾರೀ ಪ್ರಮಾಣದ ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಕಾರಣ ಶತ್ರುದೇಶಗಳ ಮೇಲೆ ಕಂಡು ಕೇಳರಿಯದ ಹಾನಿ ಮಾಡುವ ಸಾಮರ್ಥ್ಯ ಈ ಕ್ಷಿಪಣಿಗಿದೆ.

==

ಹೇಗೆ ಕೆಲಸ ಮಾಡುತ್ತೆ?

ರಾಕೆಟ್‌ ಮಾದರಿಯ ಈ ಕ್ಷಿಪಣಿ ಹಾರಿಬಿಟ್ಟ ಕೆಲವೇ ಕ್ಷಣಗಳಲ್ಲಿ ಭೂಮಿ ಮೇಲ್ಮೈ ವಾತಾವರಣ ದಾಟಿ ಸಾಗುತ್ತದೆ. ಆ ಬಳಿಕ ವಿವಿಧ ಹಂತಗಳಲ್ಲಿ ಇಂಧನ ದಹಿಸಿಕೊಂಡು ಮುಂದೆ ಸಾಗುತ್ತದೆ. ರಾಕೆಟ್‌ ಹೇಗೆ ತನ್ನ ಇಂಧನ ಖಾಲಿಯಾದ ಬಳಿಕ ಒಂದೊಂದೇ ಟ್ಯಾಂಕ್‌ ಅನ್ನು ಕಳಚಿ ಮುಂದೆ ಸಾಗುತ್ತದೆಯೋ ಅದೇ ರೀತಿ ಈ ಕ್ಷಿಪಣಿಯೂ ಸಾಗುತ್ತದೆ. ಆ ಬಳಿಕ ಭೂ ವಾತಾವರಣವನ್ನು ಮರುಪ್ರವೇಶಿಸಿ ಮ್ಯಾಕ್‌ 23 ವೇಗದಲ್ಲಿ ಗುರಿಯತ್ತ ಮುನ್ನುಗ್ಗುತ್ತದೆ. ಈ ಕ್ಷಿಪಣಿಗೆ ಗುರಿ ತಲುಪಲು ಕೇವಲ ಅರ್ಧಗಂಟೆ ಸಾಕು. ಹೀಗಾಗಿ ಈ ಕ್ಷಿಪಣಿ ಹೊಡೆದುರುಳಿಸುವುದು ಕಷ್ಟ.