ಪ್ರಧಾನಿ ನರೇಂದ್ರ ಮೋದಿ ಮಾತಿಗೆ ಒಬಾಮಾ ಚಕಿತ : ಅಮೆರಿಕದಲ್ಲಿ ಭಾರತೀಯ ರಾಯಭಾರಿ ಬಹಿರಂಗ

| Published : Sep 22 2024, 01:51 AM IST / Updated: Sep 22 2024, 04:54 AM IST

ಸಾರಾಂಶ

2014ರಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ನಡೆಸಿದ ಸಂಭಾಷಣೆಯ ಬಗ್ಗೆ ಅವರ ಭಾಷಾಂತರಕಾರರಾಗಿದ್ದ ವಿನಯ್ ಕ್ವಾಟ್ರಾ ಬೆಳಕು ಚೆಲ್ಲಿದ್ದಾರೆ. ಮೋದಿ ಅವರ ತಾಯಿಯ ಬಗ್ಗೆ ಒಬಾಮಾ ಕೇಳಿದಾಗ ಮೋದಿ ನೀಡಿದ ಉತ್ತರ ಒಬಾಮಾ ಅವರನ್ನು ಚಕಿತಗೊಳಿಸಿತು.

  ನವದೆಹಲಿ : 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಪ್ರಯಾಣಿಸಿದಾಗ ಆಗ ಅಲ್ಲಿ ಅಧ್ಯಕ್ಷರಾಗಿದ್ದಾಗ ಬರಾಕ್‌ ಒಬಾಮಾ ಅವರ ಜತೆ ತುಂಬಾ ಆತ್ಮೀಯವಾಗಿ ಮಾತನಾಡಿದ್ದರು. ಮೋದಿ ಆಡಿದ ಮಾತೊಂದು ಒಬಾಮಾರನ್ನು ಚಕಿತಗೊಳಿಸಿತು ಹಾಗೂ ಅದೇ ಮಾತು ಇಬ್ಬರನ್ನೂ ಹತ್ತಿರವಾಗಿಸಿತು ಎಂದು ಅಂದು ಮೋದಿ ಅವರ ಭಾಷಾಂತರಕಾರ ಆಗಿದ್ದ ಅಮೆರಿಕದಲ್ಲಿನ ಈಗಿನ ಭಾರತೀಯ ರಾಯಭಾರಿ ವಿನಯ್‌ ಕ್ವಾಟ್ರಾ ಹೇಳಿದ್ದಾರೆ.

ಮೋದಿ ಅಮೆರಿಕ ಭೇಟಿ ಹಿನ್ನೆಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕ್ವಾಟ್ರಾ, ‘ಅಮೆರಿಕಕ್ಕೆ 2014ರಲ್ಲಿ ಭೇಟಿ ನೀಡಿದಾಗ ಒಬಾಮಾ ಜತೆ ಇಬ್ಬರೂ ಒಟ್ಟಿಗೇ 12 ನಿಮಿಷ ಕಾರಿನಲ್ಲಿ ಪ್ರಯಾಣಿಸಿದ್ದರು. ಆಗ ಮೋದಿ ತಾಯಿಯ ಬಗ್ಗೆ ಒಬಾಮಾ ವಿಚಾರಿಸಿದರು. ಅದಕ್ಕೆ ಉತ್ತರಿಸಿದ ಮೋದಿ ‘ಗುಜರಾತ್‌ನಲ್ಲಿ ನಮ್ಮ ತಾಯಿಯ ಮನೆ ಇರುವಷ್ಟೇ ನಿಮ್ಮ ಕಾರು ದೊಡ್ಡದಿದೆ’ ಎಂದರು. ಈ ಮಾತು ಒಬಾಮಾರನ್ನು ಚಕಿತಗೊಳಿಸಿತು ಹಾಗೂ ಮೋದಿ ಅವರ ಸರಳತೆಯು ಇಬ್ಬರನ್ನೂ ಹತ್ತಿರ ಮಾಡಿತು’ ಎಂದು ಹೇಳಿದ್ದಾರೆ.

ಮೋದಿ ಅವರು ಹಿಂದಿಯಲ್ಲಿ ಹೇಳಿದ್ದನ್ನು ಆಗ ಭಾಷಾಂತರಕಾರ ಆಗಿದ್ದ ಕ್ವಾಟ್ರಾ ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದರು.