ಜಗತ್ತು ಕಂಡ ಅತ್ಯಂತ ದೊಡ್ಡ ಉತ್ಸವ ನಂಬಿಕೆ, ಸಂಪ್ರದಾಯ, ತಂತ್ರಜ್ಞಾನದ ಕುಂಭಕ್ಕೆ ತೆರೆ

| N/A | Published : Feb 27 2025, 12:32 AM IST / Updated: Feb 27 2025, 04:27 AM IST

ಸಾರಾಂಶ

ಜಗತ್ತು ಕಂಡ ಅತ್ಯಂತ ದೊಡ್ಡ ಉತ್ಸವ, ಭಕ್ತಿ, ಅಧ್ಯಾತ್ಮ, ನಂಬಿಕೆ, ಶ್ರದ್ಧೆ, ತಂತ್ರಜ್ಞಾನದ ಮಹಾ ಸಂಗಮವಾದ ಮಹಾಕುಂಭ ಮೇಳಕ್ಕೆ ಬುಧವಾರ ತೆರೆ ಬಿದ್ದಿದೆ. ಕಳೆದ 45 ದಿನಗಳಿಂದ ಜಗತ್ತಿನ ಆಕರ್ಷಣೆಯ ಕೇಂದ್ರವಾಗಿದ್ದ ಕುಂಭಮೇಳ ಕೋಟ್ಯಂತರ ಜನರನ್ನು ತನ್ನತ್ತ ಬರಸೆಳೆದು ಇತಿಹಾಸ ಸೃಷ್ಟಿಸಿದೆ.

ಪ್ರಯಾಗ್‌ರಾಜ್: ಜಗತ್ತು ಕಂಡ ಅತ್ಯಂತ ದೊಡ್ಡ ಉತ್ಸವ, ಭಕ್ತಿ, ಅಧ್ಯಾತ್ಮ, ನಂಬಿಕೆ, ಶ್ರದ್ಧೆ, ತಂತ್ರಜ್ಞಾನದ ಮಹಾ ಸಂಗಮವಾದ ಮಹಾಕುಂಭ ಮೇಳಕ್ಕೆ ಬುಧವಾರ ತೆರೆ ಬಿದ್ದಿದೆ. ಕಳೆದ 45 ದಿನಗಳಿಂದ ಜಗತ್ತಿನ ಆಕರ್ಷಣೆಯ ಕೇಂದ್ರವಾಗಿದ್ದ ಕುಂಭಮೇಳ ಕೋಟ್ಯಂತರ ಜನರನ್ನು ತನ್ನತ್ತ ಬರಸೆಳೆದು ಇತಿಹಾಸ ಸೃಷ್ಟಿಸಿದೆ. ಜನವರಿ 13ರಂದು ಆರಂಭವಾಗಿ ಶಿವರಾತ್ರಿಯ ಮಹಾಪರ್ವದವರೆಗೆ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಬರೋಬ್ಬರಿ 66 ಕೋಟಿ ಜನ ಪುಣ್ಯಸ್ನಾನ ಮಾಡಿದ್ದಾರೆ. ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿಯ ಪವಿತ್ರ ಸಂಗಮದಲ್ಲಿ ಮಿಂದೆದ್ದು ಸಾರ್ಥಕತೆ ಪಡೆದಿದ್ದಾರೆ. 

ಪ್ರಧಾನಿಯಿಂದ ಸಾಮಾನ್ಯನವರೆಗೆ..:

ಹಲವಾರು ಟೀಕೆ, ಅನಿರೀಕ್ಷಿತ ದುರ್ಘಟನೆ, ರಾಜಕೀಯ ಕೆಸರೆರಚಾಟ ಇವೆಲ್ಲವುಗಳ ನಡುವೆಯೂ, ಜನರ ಭಾವನೆಗಳನ್ನು ಬೆಸೆಯುವಲ್ಲಿ ಕುಂಭ ಯಶಸ್ವಿಯಾಗಿದೆ. ಪಕ್ಷಭೇದವನ್ನು ಮರೆತು ದೇಶಾದ್ಯಂತ ರಾಜಕಾರಣಿಗಳು ಮಹಾಕುಂಭದಲ್ಲಿ ಭಾಗವಹಿಸಿದ್ದಾರೆ. ಎಲ್ಲ ಜಾತಿ, ಮತ, ಧರ್ಮಗಳ ಜನ ಪವಿತ್ರ ಸ್ನಾನ ಮಾಡಿದ್ದಾರೆ.

ದೇಶದ ರಾಷ್ಟ್ರಪತಿ, ಪ್ರಧಾನಿಯಿಂದ ಸಾಮಾನ್ಯ ರೈತನೊಬ್ಬನವರೆಗೂ ದೇಶದ ಮೂಲೆಮೂಲೆಗಳಿಂದ ಆಗಮಿಸಿದ ಜನತೆ ಕುಂಭಮೇಳ ಯಶಸ್ವಿಗೊಳಿಸಿದ್ದಾರೆ. ದೇಶದ ಉದ್ದಗಲದ ಆಗಮಿಸಿದ ಸಾಮಾನ್ಯ ವ್ಯಕ್ತಿಗೂ ಮಹಾಕುಂಭ ಅನ್ಯಾದೃಶ ಅನುಭವವನ್ನು ಕಟ್ಟಿಕೊಟ್ಟಿದೆ.

ಪರಂಪರೆ, ಆಧುನಿಕತೆಯ ಮೇಳೈಕೆ:

ಸಾವಿರಾರು ವರ್ಷಗಳಿಂದ ಬಂದ ಪರಂಪರೆ ಒಂದೆಡೆಯಾದರೆ, ಆಧುನಿಕತೆಯ ಪ್ರತಿಬಿಂಬವಾಗಿಯೂ ಮಹಾಕುಂಭ ಮೇಳೈಸಿತು. ದಿನದ 24 ಗಂಟೆ ಕಾರ್ಯನಿರ್ವಹಿಸುವ ಡ್ರೋನ್ ವಿರೋಧಿ ವ್ಯವಸ್ಥೆಗಳು, ಕೃತಕ ಬುದ್ಧಿಮತ್ತೆ (ಎಐ) ಆಧರಿತ ಕ್ಯಾಮೆರಾಗಳು ಸೇರಿದಂತೆ ಅಭೂತಪೂರ್ವ ಭದ್ರತಾ ಕ್ರಮಗಳಿಗೆ ಕುಂಭ ಸಾಕ್ಷಿಯಾಯಿತು. 37,000 ಪೊಲೀಸರು, 14,000 ಗೃಹರಕ್ಷಕರು, 2,750 AI ಆಧರಿತ ಸಿಸಿಟಿವಿಗಳು, 50 ಅಗ್ನಿಶಾಮಕ ಠಾಣೆಗಳು, 3 ಜಲ ಪೊಲೀಸ್ ಠಾಣೆಗಳು, 18 ಜಲ ಪೊಲೀಸ್ ನಿಯಂತ್ರಣ ಕೊಠಡಿಗಳು ಹಾಗೂ 50 ಕಾವಲು ಗೋಪುರಗಳನ್ನು ಮಹಾಕುಂಭದ ಅಷ್ಟೂ ದಿನಗಳ ಕಾಲ ನಿಯೋಜಿಸಲಾಗಿತ್ತು. ಇವುಗಳಲ್ಲದೆ, ಮಹಾಕುಂಭ ಮೇಳಕ್ಕೆ ಸಂಬಂಧಿಸಿದಂತೆ ಯಾವುದೇ ತಪ್ಪು ಮಾಹಿತಿ ಹರಡುವುದನ್ನು ಪರಿಶೀಲಿಸಲು ಸಾಮಾಜಿಕ ಮಾಧ್ಯಮಗಳ 24x7 ನಿಯಮಿತ ಮೇಲ್ವಿಚಾರಣೆಯನ್ನು ನಡೆಸಲಾಗುತ್ತಿತ್ತು.

ಶತಮಾನದ ಸಂಭ್ರಮ:

144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳದ ಸಂಭ್ರಮ ಮುಗಿದಿದೆ. ನಾಗಾಸಾಧುಗಳು, ಸನ್ಯಾಸಿ-ಸಾಧ್ವಿಯರು, ವ್ಯಾಪಾರಸ್ಥರು, ಪತ್ರಕರ್ತರು, ನೃತ್ಯ-ನಾಟಕ-ಪ್ರದರ್ಶನಕಾರರು ಹೀಗೆ ದೇಶದ ಮೂಲೆಮೂಲೆಗಳಿಂದ ಕುಂಭಕ್ಕೆ ಆಗಮಿಸಿದ್ದ ಜನ ತಮ್ಮ ತಮ್ಮ ಸ್ಥಾನಗಳಿಗೆ ಮರಳಿದ್ದಾರೆ. ಆದರೆ ಮಹಾಕುಂಭ ಕಟ್ಟಿಕೊಟ್ಟ ನೆನಪು, ಅನುಭವಗಳು ಮಾತ್ರ ಜನರನ್ನು ಶತಮಾನಕಾಲ ಕಾಡಲಿವೆ. ಮುಂದಿನ ಕುಂಭಮೇಳ 2027ಕ್ಕೆ ಮಹಾರಾಷ್ಟ್ರದ ನಾಸಿಕ್‌ನ ತ್ರಿವೇಣಿ ಸಂಗಮದಲ್ಲಿ ನಡೆಯಲಿದೆ.