ವಾಷಿಂಗ್ಟನ್‌: ಅಮೆರಿಕದ 250 ವರ್ಷಾಚರಣೆ ಹಿನ್ನೆಲೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಭಾವಚಿತ್ರವುಳ್ಳ ನಾಣ್ಯ ಬಿಡುಗಡೆಯಾದ ಬೆನ್ನಲ್ಲೇ ಇದೀಗ ಅವರ ಫೋಟೋ ಇರುವ ವಿಶೇಷ ಪಾಸ್ಪೋರ್ಟ್‌ ಕೂಡ ಸಿದ್ಧವಾಗಲಿದೆ. ಶ್ವೇತಭವನವು ತನ್ನ ಎಕ್ಸ್‌ ಖಾತೆಯಲ್ಲಿ ಹೊಸ ಪಾಸ್ಪೋರ್ಟ್‌ನ ಮೊದಲ ಫೋಟೋವನ್ನು ಹಂಚಿಕೊಂಡಿದ್ದು, ‘ಪೇಟ್ರಿಯೆಟ್‌ ಪಾಸ್‌ಪೋರ್ಟ್‌ ಅನಾವರಣಗೊಂಡಿದೆ. ಸೀಮಿತ ಸಂಖ್ಯೆಯಲ್ಲಿ ಲಭ್ಯ’ ಎಂದಿದೆ.ಇದರ ಒಂದು ಬದಿ ಟ್ರಂಪ್‌ರ ಫೋಟೋ ಹಾಗೂ ಸ್ವರ್ಣವರ್ಣದಲ್ಲಿ ಅವರ ಸಹಿ ಇದೆ. ಜತೆಗೆ ಸ್ವಾತಂತ್ರ್ಯದ ಘೋಷಣೆಗಳನ್ನೂ ಬರೆಯಲಾಗಿದೆ. ಇದನ್ನು ಡೆಮಾಕ್ರೆಟಿಕ್‌ ಸಂಸದ, ಭಾರತ ಮೂಲದ ರಾಜಾ ಕೃಷ್ಣಮೂರ್ತಿ ಟೀಕಿಸಿದ್ದು, ‘ಅಮೆರಿಕದ ಪಾಸ್ಪೋರ್ಟ್‌ಗಳಲ್ಲಿ ಟ್ರಂಪ್‌ ಫೋಟೋ ಹಾಕುವುದು ಅಸಂಬದ್ಧ. ಪಾಸ್ಪೋರ್ಟ್‌ ಅಮೆರಿಕದ ಜನರನ್ನು ಪ್ರತಿನಿಧಿಸುತ್ತದೆ. ಒಬ್ಬ ವ್ಯಕ್ತಿಯನ್ನಲ್ಲ’ ಎಂದು ಕಿಡಿ ಕಾರಿದ್ದಾರೆ.

==

ದೆಹಲಿ ಹೈಕೋರ್ಟ್‌ ವಿಚಾರಣೆ ವೇಳೆ ಅಶ್ಲೀಲ ವಿಡಿಯೋ ಪ್ರತ್ಯಕ್ಷ

ನ್ಯಾಯಮೂರ್ತಿಗಳು, ಕಕ್ಷಿದಾರರು ಕಕ್ಕಾಬಿಕ್ಕಿ


ನವದೆಹಲಿ: ದೆಹಲಿ ಹೈಕೋರ್ಟ್‌ನ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆ ನಡೆಯುತ್ತಿದ್ದ ಹೊತ್ತಿನಲ್ಲಿ ಅಶ್ಲೀಲ ವಿಡಿಯೋ ಕಾಣಿಸಿಕೊಂಡು ಕೆಲಕಾಲ ಮುಜುಗರ ಸೃಷ್ಟಿಸಿದ ಘಟನೆ ನಡೆದಿದೆ. ಇದು ನ್ಯಾಯಾಲಯದ ಕಲಾಪಗಳ ಸೈಬರ್‌ ಭದ್ರತೆ ಕುರಿತು ಹಲವು ಪ್ರಶ್ನೆ ಹುಟ್ಟುಹಾಕಿದೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಕರಣವೊಂದರ ವಿಚಾರಣೆ ವೇಳೆ ಹಲವು ಬಾರಿ ಈ ರೀತಿಯ ಘಟನೆ ನಡೆದು ಆತಂಕ ಸೃಷ್ಟಿಸಿತ್ತು. ಈ ಕಾರಣದಿಂದ ಎರಡು ಬಾರಿ ವಿಡಿಯೋ ಕಾನ್ಫರೆನ್ಸ್‌ ವ್ಯವಸ್ಥೆಯನ್ನು ಬಂದ್‌ ಮಾಡಬೇಕಾಯಿತು. ಆ ಬಳಿಕ ಮತ್ತೆ ವಿಚಾರಣೆ ಆರಂಭವಾದಾಗ ‘ಸ್ಕ್ರೀನ್‌ನಲ್ಲಿ ನೀವು ಹ್ಯಾಕ್‌ಗೊಳಗಾಗಿದ್ದೀರಿ’ ಎಂಬ ದ್ವನಿ ಸಹಿತ ಸಂದೇಶ ಪ್ರತ್ಯಕ್ಷವಾಗಿ ಗೊಂದಲ ಸೃಷ್ಟಿಸಿತು.ಪ್ರಾಥಮಿಕ ತನಿಖೆ ಪ್ರಕಾರ ಶ್ರೀಧರ್‌ ಸರ್ನೋಬಾತ್‌ ಮತ್ತು ಶಿತ್‌ಜೀತ್‌ ಸಿಂಗ್‌ ಎಂಬ ಇಬ್ಬರ ಖಾತೆಯ ಮೂಲಕ ವಿಡಿಯೋ ಪ್ರದರ್ಶನಗೊಂಡಿದೆ. ಅವರು ತಮ್ಮ ಖಾತೆ ಹ್ಯಾಕ್‌ ಆಗಿದೆ ಎಂದು ಹೇಳಿಕೊಂಡಿದ್ದಾರೆ.

==

ಪ್ಲಾಸ್ಟಿಕ್‌ ಪೊಟ್ಟಣದಲ್ಲಿ ಪಾನ್‌ ಮಸಾಲಾ ಪ್ಯಾಕಿಂಗ್‌ ಶೀಘ್ರ ನಿಷಿದ್ಧ: ಎಫ್‌ಎಸ್‌ಎಸ್‌ಎಐ

ನವದೆಹಲಿ: ಮಾಲಿನ್ಯ ತಡೆಗಾಗಿ ಪಾನ್‌ ಮಸಾಲಾ ಸೇರಿದಂತೆ ಇತರೆ ತಂಬಾಕು ಉತ್ಪನ್ನಗಳನ್ನು ಪ್ಲಾಸ್ಟಿಕ್‌ ಪೊಟ್ಟಣಗಳಲ್ಲಿ ಮಾರುವುದನ್ನು ನಿಷೇಧಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆ ಹೊರಡಿಸಿದೆ. ಇದರನ್ವಯ 2018ರ ಆಹಾರ ಸುರಕ್ಷತೆ ಮತ್ತು ಮಾನದಂಡ(ಪ್ಯಾಕೇಜಿಂಗ್) ನಿಯಮಗಳಿಗೆ ತಿದ್ದುಪಡಿಯ ಮೂಲಕ, ಪಾನ್ ಮಸಾಲಾವನ್ನು ಪ್ಲಾಸ್ಟಿಕ್‌ ಅಥವಾ ಅಲ್ಯುಮಿನಿಯಂ ಹಾಳೆಯನ್ನು ಹೊರತುಪಡಿಸಿ ಕಾಗದ, ಗಾಜು, ಸೆಲ್ಯುಲೋಸ್ ಆಧರಿತ ವಸ್ತುವಿನಂತಹ ನೈಸರ್ಗಿಕ ಉತ್ಪನ್ನಗಳಿಂದಷ್ಟೇ ಪ್ಯಾಕ್ ಮಾಡಬೇಕು ಎಂಬ ನಿಯಮ ತರಲು ಸಿದ್ಧತೆ ನಡೆಸಿದೆ. ಸದ್ಯ ಕಡಿಮೆ ವೆಚ್ಚ, ತೇವಾಂಶ ನಿರೋಧಕತೆ ಮತ್ತು ಸುಲಭ ಸಾಗಣೆಯಂತಹ ಸಾಧ್ಯವಿರುವ ಕಾರಣಕ್ಕಾಗಿ ಪ್ಲಾಸ್ಟಿಕ್‌ ಬಳಸಿ ಪಾನ್‌ ಮಸಾಲಾ ಪ್ಯಾಕ್‌ ಮಾಡಲಾಗುತ್ತಿದೆ.

==

ಅಸ್ಥಿಪಂಜರ ತಂದವನ ಮನೆಗೆ ತೆರಳಿ ಹಣ ಕೊಟ್ಟ ಬ್ಯಾಂಕ್‌ ಸಿಬ್ಬಂದಿ

ಭುವನೇಶ್ವರ: ಖಾತೆಯಲ್ಲಿದ್ದ 19300 ರು.ಹಣ ಹಿಂಪಡೆಯಲು, ಮೃತ ಸೋದರಿಯ ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ತಂದು ಸಾಕ್ಷ್ಯ ನೀಡಿದ್ದ ಜೀತು ಮುಂಡಾ ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಬ್ಯಾಂಕ್‌ ಸಿಬ್ಬಂದಿ ಸ್ವತಃ ಜೀತು ಮನೆಗೆ ತೆರಳಿ ಹಣ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಬ್ಯಾಂಕ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು '''''''' ಸರ್ಕಾರಿ ಅಧಿಕಾರಿಗಳು ಮರಣ ಪ್ರಮಾಣಪತ್ರ ಮತ್ತು ಕಾನೂನುಬದ್ಧ ಉತ್ತರಾಧಿಕಾರಿ ಪ್ರಮಾಣಪತ್ರವನ್ನು ನೀಡಿದ್ದಾರೆ . ಈ ದಾಖಲೆಗಳನ್ನು ಸ್ವೀಕರಿಸಿದ ತಕ್ಷಣ, ಬ್ಯಾಂಕ್ ಮೂರು ಕಾನೂನುಬದ್ಧ ಉತ್ತರಾಧಿಕಾರಿಗಳ ಹೆಸರಿನಲ್ಲಿ 19,402 ರೂ.ಗಳ ಕ್ಲೇಮ್ ಮೊತ್ತವನ್ನು ಹಸ್ತಾಂತರಿಸಿದೆ'''''''' ಎಂದಿದೆ.