ಅಮೆರಿಕ- ಇರಾನ್‌ ನಡುವಿನ 15 ದಿನದ ಕದನವಿರಾಮ ಭಾರತೀಯ ಕಾಲಮಾನ ಬುಧವಾರ ನಸುಕಿನ 5.30ಕ್ಕೆ ಅಂತ್ಯವಾಗಿದೆ. ಆದರೆ ಇದಕ್ಕೂ ಮುನ್ನ ಮಂಗಳವಾರ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಏರ್ಪಾಡಾಗಿದ್ದ ಸಂಧಾನ ಸಭೆ ನಡೆಯದೇ ಹೋಗಿದೆ.

ವಾಷಿಂಗ್ಟನ್‌/ಟೆಹ್ರಾನ್‌/ಇಸ್ಲಾಮಾಬಾದ್‌: ಅಮೆರಿಕ- ಇರಾನ್‌ ನಡುವಿನ 15 ದಿನದ ಕದನವಿರಾಮ ಭಾರತೀಯ ಕಾಲಮಾನ ಬುಧವಾರ ನಸುಕಿನ 5.30ಕ್ಕೆ ಅಂತ್ಯವಾಗಿದೆ. ಆದರೆ ಇದಕ್ಕೂ ಮುನ್ನ ಮಂಗಳವಾರ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಏರ್ಪಾಡಾಗಿದ್ದ ಸಂಧಾನ ಸಭೆ ನಡೆಯದೇ ಹೋಗಿದೆ. ಹೀಗಾಗಿ ಮುಂದೇನು ಎಂಬ ಅನಿಶ್ಚಿತತೆ ಉಂಟಾಗಿದೆ. ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಂಗಳವಾರ ರಾತ್ರಿ ಮಾತನಾಡಿ, ‘ಕದನವಿರಾಮವನ್ನು ನಾವು ವಿಸ್ತರಿಸುವುದಿಲ್ಲ. ಡೀಲ್‌ ಆಗುವ ವಿಶ್ವಾಸವಿದೆ. ಒಂದು ವೇಳೆ ಆಗದೇ ಹೋದರೆ ಹಾಗೂ ಅಗತ್ಯವಿದ್ದರೆ ಇರಾನ್ ವಿರುದ್ಧ ಹೋರಾಡಲು ವಾಷಿಂಗ್ಟನ್ ಮಿಲಿಟರಿ ಸಿದ್ಧವಾಗಿದೆ. ಟೆಹ್ರಾನ್‌ ಮೇಲೆ ಬಾಂಬ್ ಮಳೆಗರೆಯುತ್ತೇವೆ’ ಎಂದಿದ್ದಾರೆ.

ನಡೆಯದ ಸಂಧಾನ ಸಭೆ:

ಇಸ್ಲಾಮಾಬಾದ್‌ನಲ್ಲಿ ಮಂಗಳವಾರ 2ನೇ ಸುತ್ತಿನ ಸಂಧಾನ ಸಭೆ ನಿಗದಿ ಆಗಿತ್ತು. ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ‘ನಮ್ಮ ಪರ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ 2ನೇ ಬಾರಿ ಮಾತುಕತೆಗೆ ತೆರಳಲಿದ್ದಾರೆ’ ಎಂದಿದ್ದರು. ಆದರೆ ವ್ಯಾನ್ಸ್‌ ನಿಯೋಗ ಮಂಗಳವಾರ ಪಾಕ್‌ಗೆ ಬರಲಿಲ್ಲ. ಇನ್ನು ಈ ಮೊದಲೇ ಹೇಳಿದಂತೆ, ಅಮೆರಿಕದ ಶಾಂತಿ ಸೂತ್ರಗಳ ಮೇಲೆ ಸಂದೇಹ ವ್ಯಕ್ತಪಡಿಸಿದ್ದ ಇರಾನ್‌, ತನ್ನ ನಿಯೋಗವನ್ನು ಕಳಿಸಲಿಲ್ಲ. ಹೀಗಾಗಿ ಸಂಧಾನಕ್ಕೆ ಗ್ರಹಣ ಬಡಿದಂತಾಯಿತು.ಟ್ರಂಪ್‌ ಗುಡುಗು:

ಇದಾದ ಬಳಿಕ ಮಂಗಳವಾರ ರಾತ್ರಿ ಸಿಎನ್‌ಬಿಸಿ ಟೀವಿ ಚಾನೆಲ್‌ ಜತೆ ಮಾತನಾಡಿದ ಟ್ರಂಪ್‌, ‘ಬುಧವಾರ ಎರಡು ವಾರಗಳ ಕದನ ವಿರಾಮ ಮುಗಿಯುವ ಮೊದಲು ಅಮೆರಿಕದೊಂದಿಗೆ ಒಪ್ಪಂದಕ್ಕೆ ಇರಾನ್ ಒಪ್ಪದಿದ್ದರೆ, ನಾವು ಅದರ ಮೇಲೆ ಬಾಂಬ್ ದಾಳಿಯನ್ನು ಪ್ರಾರಂಭಿಸುತ್ತೇವೆ’ ಎಂದರು.

ಆದರೂ, ‘ ನಾನು ಹಾಗೆ ಮಾಡಲು ಬಯಸುವುದಿಲ್ಲ. ಏಕೆಂದರೆ ಬಿಕ್ಕಟ್ಟು ಬಿಕ್ಕಟ್ಟು ಇನ್ನೂ ‘ಮಹಾ ಒಪ್ಪಂದ’ ದೊಂದಿಗೆ ಕೊನೆಗೊಳ್ಳಬಹುದು’ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.

‘ಅವರು ನಮ್ಮ ಮಾತುಕತೆ ನಡೆಸಬೇಕು. ಡೀಲ್ ಏರ್ಪಟ್ಟರೆ ಇರಾನ್ ತಮ್ಮನ್ನು ತಾವು ಉತ್ತಮ ಸ್ಥಾನಮಾನದಲ್ಲಿ ಇಟ್ಟುಕೊಳ್ಳಬಹುದು. ಮತ್ತೆ ತಮ್ಮನ್ನು ತಾವು ಬಲಿಷ್ಠ ರಾಷ್ಟ್ರವಾಗಿ, ಅದ್ಭುತ ರಾಷ್ಟ್ರವಾಗಿ ಮಾಡಿಕೊಳ್ಳಬಹುದು. ಬುಧವಾರದೊಳಗೆ ಒಪ್ಪಂದ ಆಗದೇ ಕದನ ವಿರಾಮ ಕೊನೆಗೊಂಡರೆ, ಇರಾನ್ ಮೇಲೆ ದಾಳಿ ಮಾಡಲು ನಮ್ಮ ಸೇನೆ ಸಿದ್ಧವಿದೆ’ ಎಂದರು.

ಗೊಂದಲದ ನುಡಿ:

ಮೊದಲಿನ ಒಪ್ಪಂದದಂತೆ ಅಮೆರಿಕ ಕಾಲಮಾನ ಮಂಗಳವಾರ ರಾತ್ರಿ (ಭಾರತ ಕಾಲಮಾನ ಬುಧವಾರ ನಸುಕಿನ 5.30ಕ್ಕೆ) ಕದನವಿರಾಮ ಅಂತ್ಯವಾಗಲಿದೆ.

ಆದರೆ ಟ್ರಂಪ್‌ ಬ್ಲೂಂಬರ್ಗ್‌ ಜತೆ ಮಾತನಾಡುತ್ತ, ‘ಬುಧವಾರ ರಾತ್ರಿ (ಅಮೆರಿಕ ಕಾಲಮಾನ) ಕದನವಿರಾಮ ಅಂತ್ಯವಾಗಲಿದೆ’ ಎಂದು ಹೇಳಿದ್ದಾರೆ. ಅರ್ಥಾತ್‌ ಇದು ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ 5.30. ಅವರೇನು ಬಾಯಿತಪ್ಪಿ ಹೇಳಿದರೋ ಅಥವಾ ನಿಜವಾಗಿಯೂ ಕದನವಿರಾಮವನ್ನು 1 ದಿನ ವಿಸ್ತರಿಸಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.

ಕದನ ವಿರಾಮ ಮುಗಿದರೆ ಬಹಳಷ್ಟು ಬಾಂಬ್‌ಗಳು ಸಿಡಿಯಲು ಪ್ರಾರಂಭಿಸುತ್ತವೆ ಎಂದು ಸೋಮವಾರವಷ್ಟೆ ಟ್ರಂಪ್‌ ಹೇಳಿದ್ದರು.