ವಾಷಿಂಗ್ಟನ್: ’ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕ ವಶಕ್ಕೆ ಪಡೆದುಕೊಂಡಿರುವ ಇರಾನ್‌ನ ಹಡಗಿನಲ್ಲಿ ಕ್ಷಿಪಣಿಗಳಿಗೆ ಬಳಸುವ ರಾಸಾಯನಿಕಗಳಿದ್ದವು. ಈ ರಾಸಾಯನಿಕಗಳು ಚೀನಾದಿಂದ ಪೂರೈಕೆಯಾಗುತ್ತಿದ್ದವು’ ಎಂದು ಅಮೆರಿಕದ ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲೆ ಆರೋಪಿಸಿದ್ದಾರೆ. ಆದರೆ ಇದನ್ನು ಚೀನಾ ಸ್ಪಷ್ಟವಾಗಿ ತಳ್ಳಿ ಹಾಕಿದೆ.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿಕ್ಕಿ
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿಕ್ಕಿ ಹ್ಯಾಲೆ ಅವರು, ‘ಏ.18ರಂದು ಅಮೆರಿಕ ವಶಕ್ಕೆ ಪಡೆದಿರುವ ಇರಾನ್ ಹಡಗಿನಲ್ಲಿ ರಾಸಾಯನಿಕ ವಸ್ತುಗಳಿದ್ದವು. ಇವು ಕ್ಷಿಪಣಿಗೆ ಬಳಸುವ ರಾಸಾಯನಿಕಗಳಾಗಿದ್ದವು. ಈ ಹಡಗು ಚೀನಾದಿಂದ ಆಗಮಿಸಿತ್ತು’ ಎಂದಿದ್ದಾರೆ.
‘ಇರಾನ್‌ಗೆ ಚೀನಾ ಸೇನಾ ಬೆಂಬಲ ನೀಡುತ್ತಿರುವುದು ಗಂಭೀರ ಕಳವಳದ ವಿಚಾರವಾಗಿದೆ. ಚೀನಾವು ಇರಾನ್ ಆಡಳಿತವನ್ನು ಬೆಂಬಲಿಸುವ ಕೆಲಸ ಮಾಡುತ್ತಿದೆ. ಈ ಸತ್ಯವನ್ನು ನಿರ್ಲಕ್ಷಿಸುವಂತಿಲ್ಲ’ ಎಂದು ಹೇಳಿದ್ದಾರೆ.
ಇದು ಸುಳ್ಳು- ಚೀನಾ:
‘ಜಪ್ತಾದ ಇರಾನ್ ಹಡಗಿಗೂ ನಮಗೂ ಸಂಬಂಧವಿಲ್ಲ. ಸುಳ್ಳು ಆರೋಪ ಸಲ್ಲದು. ಯಾವುದೇ ದುರುದ್ದೇಶಪೂರಿತ ಸಂಪರ್ಕ ಮತ್ತು ಪ್ರಚಾರವನ್ನು ಚೀನಾ ವಿರೋಧಿಸುತ್ತದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಸ್ಪಷ್ಟಪಡಿಸಿದ್ದಾರೆ.