ಕನ್ನಡಪ್ರಭ ವಾರ್ತೆ ಮಡಿಕೇರಿಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗು ಜಿಲ್ಲೆಯ ಕೇರಳ ಗಡಿಭಾಗ ಕುಟ್ಟ ವ್ಯಾಪ್ತಿಯಲ್ಲಿ ಅಮೆರಿಕ ಮೂಲದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಾಷಿಂಗ್ಟನ್‌ ಮೂಲದ ಮಹಿಳೆ ಮೇಲೆ ಜಾರ್ಖಂಡ್‌ ಮೂಲದ ವ್ಯಕ್ತಿ ಅತ್ಯಾಚಾರ ಎಸಗಿದ್ದು, ಘಟನೆಗೆ ಸಂಬಂಧಿಸಿದಂತೆ ಅತ್ಯಾಚಾರ ಆರೋಪಿ ಹಾಗೂ, ಹೋಂಸ್ಟೇ ಮಾಲೀಕ ಇಬ್ಬರನ್ನು ಪೊಲೀಸರು ಬಂಧಿಸಿದದ್ದಾರೆ.ಘಟನೆ ವಿವರ: ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆ ಕುಟ್ಟ ಗ್ರಾಮದ ಹೋಂ ಸ್ಟೇವೊಂದರಲ್ಲಿ ತಂಗಿದ್ದರು. ಈ ವೇಳೆ ಅಲ್ಲಿದ್ದ ಜಾರ್ಖಂಡ್‌ ಮೂಲದ ವ್ಯಕ್ತಿಯೊಬ್ಬ ಸಿಹಿ ಪಾನಕಕ್ಕೆ ಮತ್ತು ಬರುವ ಔಷಧಿ ಬೆರಸಿ ಮಹಿಳೆಗೆ ನೀಡಿದ್ದಾನೆ. ಆಕೆ ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ. ವಿದೇಶಿ ಮಹಿಳೆ ಅಮೆರಿಕದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ಮಾಹಿತಿ ನೀಡಿದ್ದಾರೆ. ಬಳಿಕ ಇ-ಮೇಲ್‌ ಮೂಲಕ ಮೈಸೂರಿನ ಅಧಿಕಾರಿಗಳನ್ನು ಸಂಪರ್ಕಿಸಿದ ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳು ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ಅಧಿಕಾರಿಗಳ ಸೂಚನೆ ಮೇರೆಗೆ ಮೈಸೂರಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬೆಳಕಿಗೆ ಬಂದ ನಂತರ ಡೆಲ್ಲಿ ಹಾಗೂ ಚೆನ್ನೈ ಕಚೇರಿಗಳ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮಂಗಳವಾರ ಕೊಡಗಿಗೆ ಭೇಟಿ ನೀಡಿದ್ದಾರೆ. ಪ್ರಕರಣ ಸಂಬಂಧ ಅತ್ಯಾಚಾರ ಆರೋಪಿ ಹಾಗೂ ಹೋಂ ಸ್ಟೇ ಮಾಲಿಕ ಇಬ್ಬರನ್ನೂ ಬಂಧಿಸಿದ್ದಾರೆ. ಕೋರ್ಟ್‌ ಮೇ 3ರ ವರೆಗೆ ನ್ಯಾಯಾಂಗ ಬಂಧನದಲ್ಲಿಡಲು ಆದೇಶ ನೀಡಿದೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ, ಈಗಲೇ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.ತನಿಖೆಗೆ ಸಚಿವ ಭೋಸರಾಜು ಸೂಚನೆಅಮೆರಿಕಾ ಮೂಲದ ಮಹಿಳೆಯೊಬ್ಬರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌ ಎಸ್‌ ಭೋಸರಾಜು ಅವರು, ಈ ಕುರಿತು ಶೀಘ್ರವೇ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ದೂರವಾಣಿ ಮಾತನಾಡಿದ ಸಚಿವರು, ಪ್ರಕರಣದ ವಿವರ ಪಡೆದುಕೊಂಡಿದ್ದಾರೆ.ಕೊಡಗು ಜಿಲ್ಲೆಯು ಪ್ರವಾಸೋದ್ಯಮಕ್ಕೆ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇಂತಹ ಅಹಿತಕರ ಘಟನೆಗಳಿಂದ ಜಿಲ್ಲೆಯ ಘನತೆ ಹಾಗೂ ಪ್ರವಾಸೋದ್ಯಮದ ಮೇಲೆ ಗಂಭೀರವಾದ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.