ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೇ 29, 30 ರಂದು ಸುಂಟಿಕೊಪ್ಪ ಜಿ. ಎಂ.ಪಿ. ಶಾಲಾ ಮೈದಾನದಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೇ 29, 30 ರಂದು ಸುಂಟಿಕೊಪ್ಪ ಜಿ. ಎಂ.ಪಿ. ಶಾಲಾ ಮೈದಾನದಲ್ಲಿ ನಡೆಯಲಿದೆ.ಗುರುವಾರ ಸುಂಟಿಕೊಪ್ಪ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಸಭೆಯಲ್ಲಿ ಮಾತನಾಡಿದ ಶಾಸಕರು, ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಕುರಿತು ಯಾವುದೇ ಆತಂಕ ಬೇಡ ಸಮ್ಮೇಳನವನ್ನು ಐತಿಹಾಸಿಕವಾಗಿ ಸದಾಕಾಲ ನೆನಪಿಸಿಕೊಳ್ಳುವಂತಹ ಮುಂದಿನ ಎಲ್ಲಾ ಸಮ್ಮೇಳನಗಳಿಗೆ ಮಾದರಿಯಾಗುವಂತಹ ರೀತಿಯಲ್ಲಿ ಆಯೋಜಿಸಬೇಕು ಎಂದು ಅವರು ಕರೆ ನೀಡಿದರು. ವಿಶೇಷವಾಗಿ ಯುವಕರು ಮತ್ತು ಮಹಿಳೆಯರನ್ನು ಸಂರ್ಪಕಿಸಿ ಸಾಹಿತ್ಯದ ಕಡೆಗೆ ಅವರನ್ನು ಸೆಳೆಯಬೇಕೆಂದು ಕಿವಿಮಾತು ಹೇಳಿದರು. ಜಿಲ್ಲಾಮಟ್ಟದ ಕಾರ್ಯಕ್ರಮ ವಾಗಿರುವ ಹಿನ್ನಲೆಯಲ್ಲಿ ಸುಂಟಿಕೊಪ್ಪ ಅಥವಾ ಮಡಿಕೇರಿ ಕ್ಷೇತ್ರಕ್ಕೆ ಸೀಮಿತವಾಗಿಸದೆ ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳನ್ನು ತಲುಪಿ ಜಿಲ್ಲೆಯ ಎಲ್ಲೇಡೆಗಳಿಂದ ಸಾಹಿತ್ಯ ಅಭಿಮಾನಿಗಳು ಆಸಕ್ತರು ಕನ್ನಡಿಗರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬರುವಂತಾಗಬೇಕು ಎಂದು ಅವರು ಹೇಳಿದರು. ಏ.23ರವರೆಗೆ ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ತಾವು ತೊಡಗಿಕೊಂಡಿದ್ದು ಆನಂತರದ ದಿನಗಳಲ್ಲಿ ಮುಖ್ಯ ಮಂತ್ರಿಗಳನ್ನು ಭೇಟಿಯಾಗುವುದರಿಂದ ಹಿಡಿದು ಜಿಲ್ಲಾ ಉಸ್ತುವಾರಿ ಸಚಿವ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರಾಜ್ಯದ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಅವರನ್ನು ಜಿಲ್ಲೆ ಆಹ್ವಾನಿಸುವ ಕಾರ್ಯಕ್ರಮಗಳಲ್ಲಿ ತಾನು ನೇತೃತ್ವ ವಹಿಸುತ್ತೇನೆ ಎಂದು ದೃಢವಾಗಿ ನುಡಿದರು. ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ವಿ.ಪಿ.ಶಶಿಧರ್ ಅವರು ಮಾತನಾಡಿ, ಸುಂಟಿಕೊಪ್ಪ ಹೋಬಳಿಯು ಒಂದು ವಿಶಿಷ್ಟ ಭೂ ಪ್ರದೇಶವಾಗಿದ್ದು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಐಗೂರಿನಲ್ಲಿ ನಡೆದ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿ ಆಯೋಜನೆಯನ್ನು ಮಾದರಿಯಾಗಿ ಇಟ್ಟುಕೊಂಡು ಸುಂಟಿಕೊಪ್ಪದಲ್ಲಿ ಅತ್ಯಂತ ವಿಜೃಂಭಣೆಯಿಂದ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿ ಎಂದು ಕರೆ ನೀಡಿದರು. ಈ ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ತನ್ನದೆಯಾದ ವೈಶಿಷ್ಟ್ಯತೆ ಪರಂಪರೆಯನ್ನು ಹೊಂದಿರುವ ಸುಂಟಿಕೊಪ್ಪ ಹೋಬಳಿಯಲ್ಲಿ ಈ ಸಾಲಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿದೆ. ಸಮ್ಮೇಳನವು 2 ದಿನ ಕಾಲ ನಡೆಯಲಿದ್ದು, 29 ರ ಸಂಜೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮತ್ತು 30 ರಂದು ಸಮ್ಮೇಳನದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸಮ್ಮೇಳನದ ಯಶಸ್ವಿಗಾಗಿ ಅಂದಾಜು 18 ರಿಂದ19 ಲಕ್ಷ ರು. ವೆಚ್ಚ ತಗುಲಿದ್ದು ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಲು 11 ಉಪ ಸಮಿತಿಗಳ ರಚನೆಯಾಗಿದೆ. ಈ ಹಿನ್ನಲೆಯಲ್ಲಿ ನಾವೆಲ್ಲಾರೂ ಕನ್ನಡ ಭಾಷೆ ಮತ್ತು ಸಾಹಿತ್ಯದ ಒಂದೇ ದೃಷ್ಟಿಕೋನದ ಹಿನ್ನಲೆಯಲ್ಲಿ ನಾವೆಲ್ಲಾರೂ ಒಂದಾಗಿ ದುಡಿಯೋಣ ಎಂದು ಕರೆ ನೀಡಿದರು. 5 ಲಕ್ಷ ರು. ಅನುದಾನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನೀಡುತ್ತದೆ.ಹಣಕಾಸು ಸಮಿತಿಯ ಅಧ್ಯಕ್ಷರಾದ ಎ.ಲೋಕೇಶ್ ಕುಮಾರ್ ಮಾತನಾಡಿ, ಈಗಾಗಲೇ ತಮ್ಮ ನೇತೃತ್ವದ ಹಣಕಾಸು ಸಮಿತಿಯು ಸೇರಿದಂತೆ ಎಲ್ಲಾ ಉಪಸಮಿತಿಗಳು ಕಾರ್ಯಪ್ರವೃತವಾಗಿದೆ. ಎಲ್ಲಾರ ಸಹಕಾರದೊಂದಿಗೆ ಸಮ್ಮೇಳನವನ್ನು ಅದ್ಧೂರಿಯಾಗಿ ಅರ್ಥಪೂರ್ಣವಾಗಿ ನಡೆಸೋಣ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಮ್ಮೇಳನದ ಯಶಸ್ವಿಯಾಗಿ ರಚಿಸಲಾದ ವಿವಿಧ ಉಪಸಮಿತಿಗಳ ಸಂಚಾಲಕರು ತಮ್ಮ ತಮ್ಮ ಸಮಿತಿಗಳ ಕಾರ್ಯ ಪ್ರಗತಿಯ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಸುಂಟಿಕೊಪ್ಪ ಹೋಬಳಿ ಕ.ಸಾ.ಪ. ಅಧ್ಯಕ್ಷರಾದ ಪಿ.ಎಫ್. ಸಬಾಸ್ಟೀನ್, ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ರೇವತಿ ರಮೇಶ್, ಸುಂಟಿಕೊಪ್ಪ ಹೋಬಳಿ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಅನಿಲ್‌ಕುಮಾರ್, ಮಹಿಳಾ ಕಾರ್ಯದರ್ಶಿ ಲೀಲಾ ಮೇದಪ್ಪ, ಸುಂಟಿಕೊಪ್ಪ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಕನ್ನಡ ಸಂಸ್ಕೃತಿಯ ಇಲಾಖೆಯ ಸಹಾಯ ನಿರ್ದೇಶಕ ಕುಮಾರ್, ಸುಂಟಿಕೊಪ್ಪ ಉಪತಹಸೀಲ್ದಾರ್ ಕೆ.ಎಂ.ದೀಪಿಕಾ, ಚೆಸ್ಕಾಂ ಕಿರಿಯ ಅಭಿಯಂತರ ಲವಕುಮಾರ್, ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಜಿಲ್ಲಾ ಮತ್ತು ತಾಲೂಕು ಹಾಗೂ ಹೋಬಳಿ ಕಸಾಪ ವಿವಿಧ ಪದಾಧಿಕಾರಿಗಳು ಕಸಾಪ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.