ಗೌಪ್ಯ ಮಾಹಿತಿ ಕಳವು : ಬೆಂಗಳೂರು ಮೂಲದ ಟೆಕ್‌ ದೈತ್ಯ ಇನ್ಫೋಸಿಸ್ ವಿರುದ್ಧ ಕಾಗ್ನಿಜೆಂಟ್‌ ದಾವೆ

| Published : Aug 25 2024, 01:56 AM IST / Updated: Aug 25 2024, 04:37 AM IST

ಸಾರಾಂಶ

ಅಮೆರಿಕ ಮೂಲದ ಸಾಫ್ಟ್‌ವೇರ್ ಕಂಪನಿ ‘ಕಾಗ್ನಿಜೆಂಟ್’, ಬೆಂಗಳೂರು ಮೂಲದ ಟೆಕ್‌ ದೈತ್ಯ ಇನ್ಫೋಸಿಸ್ ವಿರುದ್ಧ ಅಮೆರಿಕದ ಟೆಕ್ಸಾಸ್ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ. 

ನವದೆಹಲಿ: ಅಮೆರಿಕ ಮೂಲದ ಸಾಫ್ಟ್‌ವೇರ್ ಕಂಪನಿ ‘ಕಾಗ್ನಿಜೆಂಟ್’, ಬೆಂಗಳೂರು ಮೂಲದ ಟೆಕ್‌ ದೈತ್ಯ ಇನ್ಫೋಸಿಸ್ ವಿರುದ್ಧ ಅಮೆರಿಕದ ಟೆಕ್ಸಾಸ್ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ. ಇನ್ಫೋಸಿಸ್ ತನ್ನ ಆರೋಗ್ಯ ವಿಮಾ ಸಾಫ್ಟ್‌ವೇರ್‌ಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಕದಿಯುತ್ತಿದೆ ಎಂದು ಅದು ಆರೋಪಿಸಿ, ಈ ದಾವೆ ದಾಖಲಿಸಿದೆ.

ಆದರೆ ಇದರ ಬೆನ್ನಲ್ಲೇ ಇನ್ಫೋಸಿಸ್‌ ಪತ್ರಿಕಾ ಪ್ರಕಟಣೆ ನೀಡಿ ಈ ಎಲ್ಲ ಆರೋಪಗಳನ್ನು ನಿರಾಕರಿಸಿದೆ. ಕೋರ್ಟ್‌ನಲ್ಲಿ ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದೆ.

ಕಾಗ್ನುಜೆಂಟ್‌ ಕಂಪನಿಯು ‘ಟ್ರೈಜೆಟ್ಟೊ’ ಎಂಬ ಸೋದರ ಕಂಪನಿಯನ್ನು ಹೊಂದಿದೆ. ಅದು ಫೇಸೆಟ್ಸ್‌ ಹಾಗೂ ಕ್ಯುಎನ್‌ಎಕ್ಸ್‌ಟಿ ಎಂಬ 2 ಸಾಫ್ಟ್‌ವೇರ್‌ಗಳನ್ನು ಆರೋಗ್ಯ ವಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿದೆ. ಆದರೆ ಇವುಗಳ ದತ್ತಾಂಶಗಳನ್ನು ಇನ್ಫೋಸಿಸ್‌ ಕದ್ದು, ಪ್ರತಿಸ್ಪರ್ಧಿ ಸಾಫ್ಟ್‌ವೇರ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಆರೋಪಿಸಿದೆ.

ಗಮನಾರ್ಹವೆಂದರೆ ಇನ್ಫೋಸಿಸ್‌ಗೆ ರಾಜೀನಾಮೆ ನೀಡಿದ್ದ ಅದರ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್‌ ವಾರಿಯರ್‌ ಅವರನ್ನು ಕಾಗ್ನಿಜೆಂಟ್‌ ಇತ್ತೀಚೆಗೆ ಕಾರ್ಯಾಚರಣೆ ವಿಭಾಗದ ಜಾಗತಿಕ ಮುಖ್ಯಸ್ಥ ಎಂದು ನೇಮಿಸಿತ್ತು. ಇನ್ನು ಕಾಗ್ನಿಜೆಂಟ್ ಸಿಇಒ ಎಸ್‌. ರವಿಕುಮಾರ್‌ ಕೂಡ 20 ವರ್ಷ ಇನ್ಫಿಯಲ್ಲಿ ವಿವಿಧ ಉನ್ನತ ಹುದ್ದೆ ಅಲಂಕರಿಸಿದ್ದರು.