ಮಧ಼್ಯಪ್ರಾಚ್ಯ ಬಿಕ್ಕಟ್ಟು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ತೈಲ ಸಂಪನ್ಮೂಲ ಸದ್ಭಳಕೆ, ಅನಗತ್ಯ ಚಿನ್ನ ಖರೀದಿ ಮುಂದೂಡಿಕೆ, ವಿದೇಶ ಪ್ರವಾಸಕ್ಕೆ ಬ್ರೇಕ್‌ ಸೇರಿದಂತೆ ಹಲವು ಮನವಿ ಮಾಡಿದ್ದಾರೆ. ಅವರು ಪ್ರಸ್ತಾಪಿಸಿದ ಪ್ರತಿ ಅಂಶಗಳ ಹಿಂದೆಯೂ ವಿದೇಶಿ ವಿನಿಮಯ ಉಳಿಸುವ ಉದ್ದೇಶವಿದೆ. ಹೀಗಿರುವಾಗ ವಿದೇಶಿ ವಿನಿಮಯ ಸಂಗ್ರಹ ಎಂದರೇನು, ಅದರ ಅವಶ್ಯಕತೆ, ಮಹತ್ವ ಏನು ಎಂಬುದರ ಮಾಹಿತಿ ಇಲ್ಲಿದೆ.

ವಿದೇಶಿ ವಿನಿಮಯ ಸಂಗ್ರಹ ಎಂದರೇನು?

ದೇಶವೊಂದು, ವಿದೇಶವೊಂದರ ಹಣ ಸಂಗ್ರಹಿಸಿ ಇಟ್ಟುಕೊಳ್ಳುವುದು. ಉದಾಹರಣೆಗೆ ಭಾರತ ದೇಶವು ಅಮೆರಿಕದ ಡಾಲರ್‌, ಯುರೋಪ್‌ನ ಯೂರೋ, ಜಪಾನ್‌ನ್‌ ಯೆನ್‌ ಕರೆನ್ಸಿ ಸಂಗ್ರಹ ಮಾಡಿಟ್ಟುಕೊಳ್ಳುವುದು.

ವಿದೇಶಿ ವಿನಿಮಯ ಸಂಗ್ರಹ ಏಕೆ ಅಗತ್ಯ?

ನಾವು ವಿದೇಶಗಳಿಂದ ಯಾವುದೇ ವಸ್ತು ಆಮದು ಮಾಡಿಕೊಂಡರೂ ಅವರು ಬಯಸಿದ ರೂಪದಲ್ಲೇ ಹಣ ಪಾವತಿ ಮಾಡಬೇಕು. ಬಹುತೇಕ ದೇಶಗಳು ಡಾಲರ್‌ ರೂಪದಲ್ಲೇ ಪಾವತಿ ಕೇಳುತ್ತವೆ. ಯುರೋಪ್‌ ದೇಶಗಳು ಯೂರೋ ರೂಪದಲ್ಲೇ ಹಣ ಕೇಳುತ್ತವೆ. ಹೀಗಾಗಿ ನಮ್ಮ ಆಮದು ಹೆಚ್ಚಿದ್ದರೆ ಅದಕ್ಕೆ ಬೇಕಾದ ವಿದೇಶಿ ವಿನಿಮಯ ಸಂಗ್ರಹ ನಮ್ಮ ಬಳಿ ಸದಾ ಇರುವುದು ಅಗತ್ಯ.


ಡಾಲರ್‌ಗೆ ಏಕೆ ವಿಶ್ವದಲ್ಲಿ ಹೆಚ್ಚು ಬೇಡಿಕೆ?

ಅಮೆರಿಕದ ಆರ್ಥಿಕತೆ ಅತ್ಯಂತ ಸ್ಥಿರ. ಅದರ ಬಳಿ ಜಾಗತಿಕ ಹೊಡೆತ ತಡೆಯಲು ಭಾರೀ ಪ್ರಮಾಣದ ಚಿನ್ನದ ಸಂಗ್ರಹವಿದೆ. ಹೀಗಾಗಿ ಡಾಲರ್‌ ಮೌಲ್ಯ ಸ್ಥಿರವಾಗಿರುತ್ತದೆ. ಹೀಗಾಗಿ ಬಹುತೇಕ ದೇಶಗಳು ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಾಗಲೇ ಡಾಲರ್‌ ಮೂಲಕ ಪಾವತಿಗೆ ಸೂಚಿಸುತ್ತವೆ. ಇದರಿಂದ ಕರೆನ್ಸಿ ಮೌಲ್ಯ ಕುಸಿತದಿಂದ ಆಗುವ ನಷ್ಟವನ್ನು ತಡೆಯುವ ಯತ್ನವನ್ನು ಅವು ಮಾಡುತ್ತವೆ.

ಇದೊಂದು ವಿಚಿತ್ರ ವ್ಯವಹಾರ ಪದ್ಧತಿ

ನೀವು ಅಂಗಡಿಗೆ ಹೋದರೆ ಹಣ ಕೊಟ್ಟು ಬಾಳೆಹಣ್ಣು ಖರೀದಿ ಮಾಡುತ್ತೀರೇ ಹೊರತೂ ಬಾಳೆ ಹಣ್ಣು ಕೊಟ್ಟು ಮತ್ತೊಂದು ಬಾಳೆ ಹಣ್ಣನ್ನು ಖರೀದಿ ಮಾಡುವುದಿಲ್ಲ. ಆದರೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹಾಗಲ್ಲ. ಇಲ್ಲಿ ನೀವು ಒಂದು ದೇಶದ ಕರೆನ್ಸಿ ಖರೀದಿಗೆ ನಿಮ್ಮ ಕರೆನ್ಸಿಯನ್ನೇ ಕೊಡಬೇಕು. ನೀವು ಯಾವ ದೇಶದ ಕರೆನ್ಸಿಯನ್ನು ಹೆಚ್ಚು ಖರೀದಿ ಮಾಡುತ್ತೀರೋ ಅದರ ಮೌಲ್ಯ ಹೆಚ್ಚುತ್ತಾ ಹೋಗುತ್ತದೆ. ಖರೀದಿ ಮಾಡುವ ದೇಶದ ಕರೆನ್ಸಿ ಮೌಲ್ಯ ಕುಸಿಯುತ್ತಾ ಹೋಗುತ್ತದೆ. ಇಂಥ ವಹಿವಾಟು ವಿಶ್ವದ ಪ್ರತಿಯೊಂದು ದೇಶಗಳ ನಡುವೆಯೂ ದಿನದ 24 ಗಂಟೆಯೂ ನಡೆಯುತ್ತಿರುತ್ತದೆ.

ಕರೆನ್ಸಿ ಮೌಲ್ಯ ಕುಸಿದರೆ ಏನಾಗುತ್ತದೆ?

- ಸದ್ಯ 1 ಡಾಲರ್‌ ಎದುರು ಭಾರತದ ರುಪಾಯಿ ಮೌಲ್ಯ 95 ರು. ಆಸುಪಾಸಿನಲ್ಲಿದೆ. ರುಪಾಯಿ ಮೌಲ್ಯ ಕುಸಿಯುತ್ತಾ ಹೋದರೆ ಭಾರತ ಸರ್ಕಾರ ಅಥವಾ ಭಾರತದ ಕಂಪನಿಗಳು ವಿದೇಶದಿಂದ ಆಮದು ಮಾಡಿಕೊಂಡ ಯಾವುದೇ ವಸ್ತುವಿಗೆ ಪಾವತಿಸಬೇಕಾದ ಮೊತ್ತ ಹೆಚ್ಚುತ್ತದೆ. ಅದರರ್ಥ ಆಮದು ಮಾಡಿಕೊಂಡ ವಸ್ತು ದುಬಾರಿಯಾಗುತ್ತದೆ.

- ರುಪಾಯಿ ಮೌಲ್ಯ ಕುಸಿದರೆ ನಾವು ಡಾಲರ್‌ ರೂಪದಲ್ಲಿ ನೀಡಬೇಕಾದ ಪ್ರಮಾಣವೂ ಹೆಚ್ಚಾಗುತ್ತದೆ. ಅಂದರೆ ಭಾರತದ ಬಳಿ ಇರುವ ವಿದೇಶಿ ವಿನಿಮಯ ಸಂಗ್ರಹ ಕುಸಿಯುತ್ತದೆ.- ವಿದೇಶಿ ವಿನಿಮಯ ಸಂಗ್ರಹ ಕುಸಿತ ಎಂದರೆ ಆತಂಕ. ರುಪಾಯಿ ಮೌಲ್ಯ ಮತ್ತಷ್ಟು ಕುಸಿಯುತ್ತದೆ. ದೇಶದ ಮಾರುಕಟ್ಟೆಯಲ್ಲಿ ವಸ್ತುಗಳ ದರ ಹೆಚ್ಚಾಗಿ, ಹಣ ದುಬ್ಬರ ಹೆಚ್ಚಾಗುತ್ತದೆ. ವಿದೇಶಿ ಹೂಡಿಕೆದಾರರ ವಿಶ್ವಾಸ ಕುಸಿಯುತ್ತದೆ. ಅವರು ಷೇರುಪೇಟೆಯಿಂದ ಹಣ ಹಿಂಪಡೆಯುತ್ತಾರೆ. ಪರಿಣಾಮ ದೇಶದ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಹೀಗೆ ಕರೆನ್ಸಿ ಮೌಲ್ಯ ಕುಸಿತ ಅಥವಾ ವಿದೇಶಿ ವಿನಿಮಯ ಸಂಗ್ರಹ ನಾನಾ ಅಡ್ಡ ಪರಿಣಾಮಗಳನ್ನು ಒಳಗೊಂಡಿದೆ.

ವಿದೇಶಿ ವಿನಿಮಯ ಸಂಗ್ರಹ ಯಾವುದಕ್ಕೆ ಬಳಕೆ?

ಕರೆನ್ಸಿ ದರ ಸ್ಥಿರ: ಕೇಂದ್ರೀಯ ಬ್ಯಾಂಕ್‌ಗಳು ವಿದೇಶಿ ವಿನಿಮಯ ಸಂಗ್ರಹವನ್ನು ವಿದೇಶಿ ಕರೆನ್ಸಿಗಳಾದ ಡಾಲರ್‌, ಯೂರೋ, ಯೆನ್‌ ಮೊದಲಾದ ಕರೆನ್ಸಿಗಳ ಎದುರು ರುಪಾಯಿ ಮೌಲ್ಯ ಕುಸಿತ ಹೆಚ್ಚಾದಾಗ ಅದನ್ನು ತಡೆಯಲು ಬಳಸುತ್ತವೆ.

ಹಣಕಾಸಿನ ಭದ್ರತೆ: ಯುದ್ಧ ಅಥವಾ ಇನ್ಯಾವುದೇ ಬಿಕ್ಕಟ್ಟಿನ ವೇಳೆ ತೈಲ, ಆಹಾರ ಮೊದಲಾದ ವಸ್ತುಗಳನ್ನು ವಿದೇಶಗಳಿಂದ ಖರೀದಿಸಬೇಕಾದ ಅದಕ್ಕೆ ಬೇಕಾದ ಅಗತ್ಯ ಹಣಕಾಸಿನ ಭದ್ರತೆ ಒದಗಿಸುತ್ತದೆ.

ಸಾಲ ಪಾವತಿಗೆ: ಅಗತ್ಯ ಪ್ರಮಾಣ ವಿದೇಶಿ ಕರೆನ್ಸಿಯು ವಿದೇಶಿ ಸಾಲ ಪಾವತಿಗೆ ಅವಕಾಶ ಮಾಡಿಕೊಡುತ್ತದೆ. ಅದು ಸುಸ್ತಿದಾರನಾಗುವುದನ್ನು ತಪ್ಪಿಸುತ್ತದೆ.

ಹೂಡಿಕೆ ವಿಶ್ವಾಸ: ಅತಿ ಹೆಚ್ಚು ವಿದೇಶಿ ವಿನಿಮಯ ಸಂಗ್ರಹ ವಿದೇಶಿ ಹೂಡಿಕೆದಾರರ ವಿಶ್ವಾಸ ಹೆಚ್ಚಳಕ್ಕೆ ಕಾರಣವಾಗುತ್ತದೆ. ಬಾಹ್ಯ ಒತ್ತಡ ತಡೆಯಲು ಅವಕಾಶ ಮಾಡಿಕೊಡುತ್ತದೆ.

ಎಷ್ಟು ವಿದೇಶಿ ವಿನಿಮಯ ಸಂಗ್ರಹ ಅಗತ್ಯ?

ಇದು ದೇಶವೊಂದು ಎಷ್ಟು ಸ್ವಾವಲಂಬಿ ಎನ್ನುವುದರ ಮೇಲೆ ಅವಲಂಬಿತ. ತನ್ನ ಬಹುತೇಕ ಅಗತ್ಯಕ್ಕೆ ವಿದೇಶಗಳನ್ನೇ ಅವಲಂಬಿಸಿದ ದೇಶಗಳಿಗೆ ಎಷ್ಟು ಸಂಗ್ರಹ ಇದ್ದರೂ ಸಾಲದು. ಆದರೆ ಅರ್ಥ ಶಾಸ್ತ್ರಜ್ಞರ ಪ್ರಕಾರ ಯಾವುದೇ ದೇಶವೊಂದು ಕನಿಷ್ಠ 3-4 ಬೇಡಿಕೆ ಈಡೇರಿಸುವಷ್ಟು ವಿದೇಶಿ ವಿನಿಮಯ ಸಂಗ್ರಹ ಹೊಂದಿರುವುದು ಅವಶ್ಯಕ.

ಭಾರತದ ಬಳಿ ಎಷ್ಟಿದೆ ವಿದೇಶಿ ವಿನಿಮಯ ಸಂಗ್ರಹ

ಇದು ನಿತ್ಯವೂ ಬದಲಾಗುತ್ತಲೇ ಹೋಗುತ್ತದೆ. ಕೊಲ್ಲಿ ಯುದ್ಧ ಆರಂಭವಾಗುವ ಹೊತ್ತಿಗೆ ಭಾರತದ ವಿದೇಶಿ ವಿನಿಮಯ ಸಂಗ್ರಹ 728 ಶತಕೋಟಿ ಡಾಲರ್‌ ಅಂದರೆ 70 ಲಕ್ಷ ಕೋಟಿ ರು. ಇತ್ತು. ಪ್ರಸಕ್ತ ಅದು 690 ಶತಕೋಟಿ ಡಾಲರ್‌ಗೆ ಇಳಿದಿದೆ. ಇದು ಕನಿಷ್ಠ 10-12 ತಿಂಗಳ ಆಮದು ನಿರ್ವಹಣೆಗೆ ಸಾಕು. ಇದನ್ನು ಸದೃಢ ಪ್ರಮಾಣ ಎಂದೇ ಪರಿಗಣಿಸಲಾಗುತ್ತೆ.

ಈಗ ಮೋದಿ ಕರೆ ಕೊಡಲು ಕಾರಣವೇನು?

- ಕೊಲ್ಲಿ ಯುದ್ಧ ಆರಂಭದ ಬಳಿಕ ಕಚ್ಚಾತೈಲ ಬೆಲೆ ಬ್ಯಾರೆಲ್‌ಗೆ 70 ಡಾಲರ್‌ನಿಂದ 120 ಡಾಲರ್‌ ತಲುಪಿದೆ. ಪರಿಣಾಮ ಭಾರತ ಡಾಲರ್‌ ರೂಪದಲ್ಲಿ ಪಾವತಿಸಬೇಕಾದ ಹಣದ ಪ್ರಮಾಣ ಬಹುತೇಕ ದ್ವಿಗುಣವಾಗಿದೆ.

- ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿದಿದೆ. ಹೀಗಾಗಿ ಪಾವತಿಗೆ ಹೆಚ್ಚಿನ ಡಾಲರ್‌ ಬೇಕು. ಇದರಿಂದ ವಿದೇಶಿ ವಿನಿಮಯ ಸಂಗ್ರಹ ಕುಸಿತ. ಮತ್ತೊಂದೆಡೆ ಕಚ್ಚಾತೈಲ ಸೇರಿದಂತೆ ವಿವಿಧ ವಸ್ತುಗಳ ಆಮದು ದರ ಏರಿಕೆ. ದೇಶೀಯ ಮಾರುಕಟ್ಟೆಯಲ್ಲಿ ಹಣದುಬ್ಬರದ ಹೊರೆ.

- ಕಳೆದ ಒಂದೂವರೆ ವರ್ಷದಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ತಡೆಗೆ ಆರ್‌ಬಿಐ ಅಂದಾಜು 6.50 ಲಕ್ಷ ಕೋಟಿ ರು. ಮೌಲ್ಯದ ಡಾಲರ್‌ ಮಾರಾಟ ಮತ್ತೊಂದೆಡೆ ಭಾರೀ ಪ್ರಮಾಣದಲ್ಲಿ ರುಪಾಯಿ ಖರೀದಿ ಮಾಡಿದೆ. ಇದು ವಿದೇಶಿ ವಿನಿಮಯ ಸಂಗ್ರಹಕ್ಕೆ ದೊಡ್ಡ ಪೆಟ್ಟು ನೀಡಿದೆ.

- ಕಚ್ಚಾತೈಲ ಬೆಲೆ ಏರಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ದರ ಏರಿಸದ ಕಾರಣ ಪ್ರತಿ ತಿಂಗಳೂ 30000 ಕೋಟಿ ರು.ನಷ್ಟವಾಗುತ್ತಿದೆ. ಅಂದರೆ 3 ತಿಂಗಳಲ್ಲಿ ಹೆಚ್ಚು ಕಡಿಮೆ 1 ಲಕ್ಷ ಕೋಟಿ ರು. ಹೊರೆ. ಇದನ್ನು ಇನ್ನೂ 3 ತಿಂಗಳು ಬಿಟ್ಟರೆ ಮತ್ತೆ 1 ಲಕ್ಷ ದಾಟಿದರೂ ಅಚ್ಚರಿ ಇಲ್ಲ.

ತೈಲ ಬಳಕೆ ಕಡಿಮೆ ಮಾಡಿದರೆ ಏನಾಗುತ್ತೆ?

- ಭಾರತ ಪ್ರತಿ ವರ್ಷ ತನ್ನ ಕಚ್ಚಾತೈಲ ಆಮದಿಗೆ 12ರಿಂದ 18 ಲಕ್ಷ ಕೋಟಿ ರು. ಹಣ ವೆಚ್ಚ ಮಾಡುತ್ತದೆ. ಅಂದರೆ ನಮ್ಮ ವಿದೇಶಿ ವಿನಿಮಯದ ಸಾಕಷ್ಟು ಪಾಲು ಹಣವನ್ನು ಕಚ್ಚಾತೈಲ ನುಂಗಿ ಹಾಕುತ್ತಿದೆ.

- ಯುದ್ಧ ಆರಂಭದ ವೇಳೆ ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ 70 ಡಾಲರ್‌ ಇದ್ದಿದ್ದು ಇದೀಗ 100 ಡಾಲರ್‌ ದಾಟಿದೆ. ಆದರೂ ಸರ್ಕಾರ ಗ್ರಾಹಕರಿಗೆ ಪೆಟ್ರೋಲ್‌, ಡೀಸೆಲ್‌ ದರ ಏರಿಸಿಲ್ಲ. ಎಲ್ಪಿಜಿ ದರವನ್ನು ಸೀಮಿತ ಪ್ರಮಾಣದಲ್ಲಿ ಏರಿಸಿದೆ. ಇದರಿಂದ ಮಾಸಿಕ ಸರ್ಕಾರಕ್ಕೆ 30000 ಕೋಟಿ ರು.ನಷ್ಟವಾಗುತ್ತಿದೆ.

- ಹೀಗಾಗಿ ತೈಲ ಬಳಕೆ ಕಡಿಮೆ ಮಾಡಿದರೆ ವಿದೇಶಿ ವಿನಿಮಯ ಸಂಗ್ರಹ ಉಳಿಯುತ್ತದೆ. ಸರ್ಕಾರದ ಮೇಲಿನ ಹೊರೆಯೂ ಇಳಿಯುತ್ತದೆ

ಚಿನ್ನ ಖರೀದಿ ಕಡಿಮೆ ಮಾಡಿದರೆ ಏನಾಗುತ್ತೆ?

- ಭಾರತ ವಿಶ್ವದ 2ನೇ ಅತಿದೊಡ್ಡ ಚಿನ್ನ ಆಮದು ದೇಶ. ಕಳೆದ ವರ್ಷ ಭಾರತದ ಚಿನ್ನ ಆಮದು 721 ಟನ್‌ನಷ್ಟಿತ್ತು. ಇದಕ್ಕಾಗಿ ಭಾರತ ಪಾವತಿಸಿದ್ದು ಅಂದಾಜು 7 ಲಕ್ಷ ಕೋಟಿ ರು. ಅಂದರೆ ಇಷ್ಟು ವಿದೇಶಿ ವಿನಿಮಯ ಖಾಲಿ.

- ದುಬಾರಿ ಮೊತ್ತದ ವಸ್ತುಗಳ ಆಮದಿಂದ, ಆಮದು ಮತ್ತು ರಫ್ತಿನ ಮೊತ್ತದ ಅಂತರ ಹೆಚ್ಚಾಗಿ ಟ್ರೇಡ್‌ ಡಿಫಿಸಿಟ್‌ ಅಂದರೆ ವ್ಯಾಪಾರ ಕೊರತೆ ಕಾಣಿಸುತ್ತದೆ.

- ಇದು ರುಪಾಯಿ ಮೌಲ್ಯದ ಮೇಲೆ ಒತ್ತಡ ಬೀರಿ ಅದರ ಮೌಲ್ಯ ಕುಸಿತಕ್ಕೆ ಕಾರಣವಾಗುತ್ತದೆ. ರುಪಾಯಿ ಮೌಲ್ಯ ಕುಸಿದರೆ ತೈಲ ಆಮದಿನ ವೆಚ್ಚ ಸೇರಿದಂತೆ ದೇಶಕ್ಕೆ ಆಮದಾಗುವ ಎಲ್ಲಾ ವಸ್ತುಗಳ ದರವೂ ಹೆಚ್ಚಳ. ಮತ್ತೆ ಹಣದುಬ್ಬರ ಸಮಸ್ಯೆ.

- ಜನರ ಉಳಿತಾಯದ ಹಣ ಕೇವಲ ಚಿನ್ನಕ್ಕೆ ಮೀಸಲಾದರೆ ಮಾರುಕಟ್ಟೆಗೆ ಹಣ ಹರಿಯದೇ ಹೋದರೆ ಸರ್ಕಾರದ ಬಳಿ ಮೂಲಸೌಕರ್ಯ ಅಭಿವೃದ್ಧಿ ಸೇರಿ ವಿವಿಧ ಕೆಲಸಗಳಿಗೆ ಹಣಕಾಸಿನ ಕೊರತೆ ಎದುರಾಗಬಹುದು

ವಿದೇಶಿ ಮದುವೆ, ಟೂರ್‌ ಬಿಟ್ಟರೆ ಏನಾಗುತ್ತದೆ?

- ವಿದೇಶದಲ್ಲಿರುವ ಭಾರತೀಯರು ತವರಿಗೆ ರುಪಾಯಿ ರೂಪದಲ್ಲಿ ಹಣ ಕಳುಹಿಸಿದರೆ ನಮ್ಮ ಆರ್ಥಿಕತೆ ಹೇಗೆ ಬಲಗೊಳ್ಳುತ್ತೋ ಹಾಗೆ ನಾವು ವಿದೇಶಿ ಮದುವೆ, ವಿದೇಶಿ ಪ್ರವಾಸ ಕೈಗೊಂಡರೆ ಅದು ವಿದೇಶಿ ವಿನಿಮಯ ಸಂಗ್ರಹ ಕುಸಿಯುವಂತೆ ಮಾಡುತ್ತದೆ.

- ಕಳೆದ ವರ್ಷ ಭಾರತೀಯರು ವಿದೇಶದಲ್ಲಿನ ಶಿಕ್ಷಣ, ಪ್ರವಾಸ, ಹೂಡಿಕೆಗೆಂದು 2.5 ಲಕ್ಷ ಕೋಟಿ ರು.ಮೊತ್ತವನ್ನು ಬಳಸಿದ್ದಾರೆ. ಇದರಲ್ಲಿ ಶೇ.50ಕ್ಕಿಂತ ಹೆಚ್ಚು ಪಾಲು ಪ್ರವಾಸದ್ದು. ಅಂದರೆ ಭಾರತೀಯರು ಪ್ರವಾಸಕ್ಕೆ 1.5 ಲಕ್ಷ ಕೋಟಿ ರು. ವ್ಯಯಿಸಿದ್ದಾರೆ.

- ಇಷ್ಟು ಹಣವನ್ನು ಅವರು ವಿದೇಶಿ ಕರೆನ್ಸಿ ರೂಪದಲ್ಲಿ ಪಾವತಿರುತ್ತಾರೆ. ಇದು ಮತ್ತೆ ಭಾರತದ ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗುವ ಒಂದು ಅಂಶ.

ಅಡುಗೆ ಎಣ್ಣೆ ಕಡಿಮೆ ಬಳಸಿದರೆ ಏನಾಗುತ್ತೆ

- ಭಾರತದಲ್ಲಿ ವಾರ್ಷಿಕ 2.5 ಕೋಟಿ ಟನ್‌ ಅಡುಗೆ ಎಣ್ಣೆ ಬಳಕೆಯಾಗುತ್ತದೆ. ಇದರಲ್ಲಿ ಶೇ.60ರಷ್ಟು ವಿದೇಶಗಳಿಂದ ಆಮದಾಗುತ್ತದೆ. ಇದರ ವೆಚ್ಚ 1.50 ಲಕ್ಷ ಕೋಟಿ ರು. ದಾಟುತ್ತದೆ.

- ವಿದೇಶದಿಂದ ಖರೀದಿ ಎಂದರೆ ಮತ್ತೆ ಡಾಲರ್‌ ರೂಪದಲ್ಲಿ ಪಾವತಿ. ಇದರಿಂದ ವಿದೇಶಿ ವಿನಿಮಯ ಸಂಗ್ರಹ ಕರಗುತ್ತದೆ. ಹೀಗಾಗಿ ಬಳಕೆ ಕಡಿಮೆ ಮಾಡಿದರೆ ದೇಶದ ಬೊಕ್ಕಸಕ್ಕೆ ಲಾಭ