ಹೆತ್ತವರ ಕಾಲಿಗೆರಗಿ ‘ಜೈ ಶ್ರೀಕೃಷ್ಣ’ ಎಂದ ಟ್ರಂಪ್ ಸರ್ಕಾರದ ಎಫ್‌ಬಿಐ ಮುಖ್ಯಸ್ಥ ಕಾಶ್‌ ಪಟೇಲ್‌

| N/A | Published : Feb 01 2025, 12:00 AM IST / Updated: Feb 01 2025, 05:25 AM IST

ಹೆತ್ತವರ ಕಾಲಿಗೆರಗಿ ‘ಜೈ ಶ್ರೀಕೃಷ್ಣ’ ಎಂದ ಟ್ರಂಪ್ ಸರ್ಕಾರದ ಎಫ್‌ಬಿಐ ಮುಖ್ಯಸ್ಥ ಕಾಶ್‌ ಪಟೇಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಡೊನಾಲ್ಡ್‌ ಟ್ರಂಪ್ ಸರ್ಕಾರದಲ್ಲಿ ಎಫ್‌ಬಿಐನ ಅಧ್ಯಕ್ಷರಾಗಿರುವ ಆಯ್ಕೆಯಾಗಿರುವ ಭಾರತ ಮೂಲದ ಕಾಶ್ ಪಟೇಲ್ ಪ್ರಮಾಣವಚನ ಸ್ವೀಕಾರದ ವೇಳೆ ಸೆನೆಟ್‌ನಲ್ಲಿ ತಂದೆ ತಾಯಿ ಕಾಲಿಗೆ ನಮಸ್ಕರಿಸಿ ‘ಜೈ ಶ್ರೀ ಕೃಷ್ಣ’ ಎಂದು ಹೇಳಿದ್ದು, ಮೆಚ್ಚುಗೆಗೆ ಕಾರಣವಾಗಿದೆ.

ವಾಷಿಂಗ್ಟನ್‌: ಡೊನಾಲ್ಡ್‌ ಟ್ರಂಪ್ ಸರ್ಕಾರದಲ್ಲಿ ಎಫ್‌ಬಿಐನ ಅಧ್ಯಕ್ಷರಾಗಿರುವ ಆಯ್ಕೆಯಾಗಿರುವ ಭಾರತ ಮೂಲದ ಕಾಶ್ ಪಟೇಲ್ ಪ್ರಮಾಣವಚನ ಸ್ವೀಕಾರದ ವೇಳೆ ಸೆನೆಟ್‌ನಲ್ಲಿ ತಂದೆ ತಾಯಿ ಕಾಲಿಗೆ ನಮಸ್ಕರಿಸಿ ‘ಜೈ ಶ್ರೀ ಕೃಷ್ಣ’ ಎಂದು ಹೇಳಿದ್ದು, ಮೆಚ್ಚುಗೆಗೆ ಕಾರಣವಾಗಿದೆ. ಗುರುವಾರ ಸೆನೆಟ್‌ನಲ್ಲಿ ಕಾಶ್‌ ಪಟೇಲ್ ನೇಮಕವನ್ನು ಖಚಿತ ಪಡಿಸಲು ಸಭೆ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಕಾಶ್‌ ಪಟೇಲ್ ಪೋಷಕರು ಭಾರತದಿಂದ ಆಗಮಿಸಿದ್ದರು. ಸಭೆ ಆರಂಭಕ್ಕೂ ಮುನ್ನ ಅವರು ತಮ್ಮ ಪೋಷಕರನ್ನು ಪರಿಚಯಿಸುತ್ತಾ ‘ಈ ಕಾರ್ಯಕ್ರಮಕ್ಕಾಗಿ ತಂದೆ, ತಾಯಿ ಅಂಜನಾ, ಸಹೋದರಿ ಭಾರತದಿಂದ ಇಲ್ಲಿಗೆ ಪ್ರಯಾಣಿಸಿದ್ದಾರೆ. ಜೈ ಶ್ರೀಕೃಷ್ಣ’ ಎಂದು ಹೆತ್ತವರ ಕಾಲಿಗೆ ನಮಸ್ಕರಿಸಿದ್ದಾರೆ. ಈ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ.

ರಾಷ್ಟ್ರಪತಿ ರಬ್ಬರ್‌ ಸ್ಟ್ಯಾಂಪ್‌, ಲವ್‌ ಲೆಟರ್‌ ಓದಿದ್ರು: ಪಪ್ಪು

ನವದೆಹಲಿ: ‘ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸರ್ಕಾರದ ರಬ್ಬರ್‌ ಸ್ಟ್ಯಾಂಪ್‌, ಅವರು ಸದನದಲ್ಲಿ ಲವ್‌ ಲೆಟರ್‌ ಓದಿದರು’ ಎಂದು ಕಾಂಗ್ರೆಸ್‌ ಬೆಂಬಲಿತ ಸ್ವತಂತ್ರ ಸಂಸದ ಪಪ್ಪು ಯಾದವ್‌ ವಿವಾದಿತ ಹೇಳಿಕೆ ನೀಡಿದ್ದಾರೆ .ಬಜೆಟ್‌ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣ ಬಳಿಕ ಮಾತನಾಡಿದ ಪಪ್ಪು, ಸರ್ಕಾರ ಬರೆದಿದ್ದ ಪ್ರೇಮ ಪತ್ರವನ್ನು ರಾಷ್ಟ್ರಪತಿ ಓದಿದರು. ಅವರು ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಹೇಳಿದರು. ಜೊತೆಗೆ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಪಪ್ಪು, ಬಿಜೆಪಿ ಕೆಲಸ ಮಾಡದೆ ಕೇವಲ ಬೊಗಳೆ ಹೇಳಿಕೊಂಡು ತಿರುಗಾಡುತ್ತಿದೆ ಎಂದು ಕಿಡಿಕಾರಿದರು.

ದೇಶದ್ರೋಹಿ ಎಂದು ಹೇಳಿ ಕಿನ್ನರ ಅಖಾಡಾದಿಂದ ಮಾಜಿ ನಟಿ ಮಮತಾ ಔಟ್‌

ಪ್ರಯಾಗರಾಜ್‌: ಕಳೆದ ವಾರವಷ್ಟೇ ಸಾಂಸಾರಿಕ ಜೀವನ ತೊರೆದು ಕುಂಭಮೇಳದಲ್ಲಿ ಕಿನ್ನರ ಅಖಾಡಕ್ಕೆ ಸೇರಿದ್ದ ಮಾಜಿ ನಟಿ ಮಮತಾ ಕುಲಕರ್ಣಿ ಅವರ ಸನ್ಯಾಸವು ವಿವಾದಕ್ಕೆ ಕಾರಣವಾಗಿದೆ. ಮಮತಾ ಮತ್ತು ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮೀ ನಾರಾಯಣ ತ್ರಿಪಾಠಿ ಅವರನ್ನು ಅಖಾಡದ ಸ್ವಘೋಷಿತ ಸ್ಥಾಪಕ ರಿಷಿ ಅಜಯ್‌ ದಾಸ್‌ ಅವರು ಹೊರಹಾಕಿದ್ದಾರೆ. ಮಮತಾ ದೇಶದ್ರೋಹ ಎದುರಿಸುತ್ತಿದ್ದು, ಅವರ ಸೇರ್ಪಡೆ ಅಖಾಡಕ್ಕೆ ವಿರೋಧ ಎಂದು ಹೇಳಿದ್ದಾರೆ. ಆದರೆ ಅಜಯ್ ದಾಸ್‌ ಡೋಂಘಿ ರಿಷಿ, ಅವರು ನಿಜವಾದ ಸ್ಥಾಪಕರಲ್ಲ. ಇವರು ಅಖಾಡಕ್ಕೆ ವಿರೋಧವಾಗಿ ಮದುವೆಯಾಗಿ ಮಗುವನ್ನು ಹೊಂದಿದ್ದಾರೆ. ನಮ್ಮ ಮುಖ್ಯಸ್ಥರು ಸಹ ಬೇರೆಯವರು. ಹೀಗಾಗಿ ಇವರ ನಿರ್ಣಯವನ್ನು ನಾವು ತಿರಸ್ಕರಿಸುತ್ತೇವೆ ಎಂದು ತ್ರಿಪಾಠಿ ಹೇಳಿದ್ದಾರೆ.

ಅಮೆರಿಕ ವಿಮಾನ ದುರಂತ: ಎಲ್ಲ 67 ಪ್ರಯಾಣಿಕರು ಬಲಿ

ಅರ್ಲಿಂಗ್ಟನ್‌: ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್‌ ಮತ್ತು ಪ್ರಯಾಣಿಕ ಜೆಟ್‌ ವಿಮಾನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಲ್ಲ 67 ಮಂದಿ ಪ್ರಯಾಣಿಕರು ಬಲಿಯಾಗಿದ್ದಾರೆ. ಬುಧವಾರ ತಡರಾತ್ರಿ ಅಮೆರಿಕನ್ ಏರ್‌ಲೈನ್ಸ್‌ ಪ್ರಾದೇಶಿಕ ಜೆಟ್‌ ವಿಮಾನವು ವಾಷಿಂಗ್ಟನ್‌ನಿಂದ ನದಿಗೆ ಅಡ್ಡಲಾಗಿ ರೊನಾಲ್ಡ್‌ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ಪೊಟೊಮ್ಯಾಕ್ ಹಿಮಾವೃತ ನದಿಯಲ್ಲಿ ಅಪಘಾತಕ್ಕೀಡಾಗಿತ್ತು.

ಸಕಾರಾತ್ಮಕ ಬಜೆಟ್‌ ನಿರೀಕ್ಷೆ ಸೆನ್ಸೆಕ್ಸ್‌ 741 ಅಂಕ ಏರಿಕೆ: ರು. ಮೌಲ್ಯ 3 ಪೈಸೆ ಏರಿಕೆ

ಮುಂಬೈ: ಶನಿವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್‌, ಉದ್ಯಮ ಸ್ನೇಹಿ, ಅಭಿವೃದ್ಧಿ ಪೂರಕವಾಗಿರಬಹುದು ಎಂಬ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಶುಕ್ರವಾರ 741 ಅಂಕಗಳ ಉತ್ತಮ ಏರಿಕೆ ಕಂಡು 77500ರಲ್ಲಿ ಅಂತ್ಯಗೊಂಡಿತು. ಇನ್ನೊಂದೆಡೆ ನಿಫ್ಟಿ ಕೂಡಾ 258 ಅಂಕ ಏರಿ 23508 ಅಂಕಗಳ ಏರಿಕೆ ದಾಖಲಿಸಿತು. ಸೆನ್ಸೆಕ್ಸ್‌ ಮತ್ತು ನಿಫ್ಟಿ ಸತತವಾಗಿ 4 ದಿನಗಳಿಂದ ಏರಿಕೆ ಹಾದಿಯಲ್ಲಿದೆ. ಇದೇ ವೇಳೆ ಡಾಲರ್‌ ಎದುರು ರುಪಾಯಿ ಮೌಲ್ಯ ಶುಕ್ರವಾರ 3 ಪೈಸೆ ಏರಿಕೆ ಕಂಡು 86.59 ರು.ನಲ್ಲಿ ಮುಕ್ತಾಯಗೊಂಡಿತು.

ಸೈಫ್ ದಾಳಿಕೋರನ ಗುರುತು ಫೇಷಿಯಲ್ ರೆಕಗ್ನೀಷನ್‌ನಲ್ಲಿ ದೃಢ

ಮುಂಬೈ: ನಟ ಸೈಫ್‌ ಅಲಿಖಾನ್ ಮೇಲಿನ ಚಾಕು ಇರಿತ ಪ್ರಕರಣದ ಆರೋಪಿ ಬಾಂಗ್ಲಾ ಪ್ರಜೆ ಶೆಹಜಾದ್‌ ಗುರುತು ಪೊಲೀಸರು ನಡೆಸಿದ ಫೇಷಿಯಲ್ ರೆಕಗ್ನೀಷನ್‌ನಲ್ಲಿ ದೃಢಪಟ್ಟಿದೆ. ಸಿಸಿಟೀವಿಯಲ್ಲಿ ಸೆರೆಯಾಗಿರುವ ದೃಶ್ಯ ಮತ್ತು ಆರೋಪಿಗೆ ಹೋಲಿಕೆಯಾಗಿದೆ. ಪೊಲೀಸ್‌ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ‘ಜ.16ರಂದು ನಟ ಸೈಫ್ ಅವರ ಸದ್ಗುರು ಶರಣ್‌ ಅಪಾರ್ಟ್‌ಮೆಂಟ್‌ನ ಸಿಸಿಟೀವಿಯಲ್ಲಿ ಕಂಡುಬಂದ ಅದೇ ವ್ಯಕ್ತಿ , ಸದ್ಯ ಬಂಧಿತನಾಗಿರುವ ಶೆಹಜಾದ್‌ ಎನ್ನುವುದು ಖಚಿತವಾಗಿದೆ. ಪ್ರಕರಣವನ್ನು ಬೇಧಿಸಲು ಫೇಷಿಯಲ್ ರೆಕಗ್ನೀಷನ್‌ ಪ್ರಮುಖ ಪಾತ್ರ ವಹಿಸಿದೆ’ ಎಂದಿದ್ದಾರೆ.