- ಸಿಂಧು ನದಿ ನಿಯಂತ್ರಣಕ್ಕೆ ಭಾರತ ಯತ್ನ

- ನಲ್ಲಿ ನಿಯಂತ್ರಿಸುತ್ತಿರುವ ನೆರೆ ದೇಶದ ಪ್ರಧಾನಿ: ಮಲಿಕ್‌

ಇಸ್ಲಾಮಾಬಾದ್‌: ಪಹಲ್ಗಾಂ ದಾಳಿ ಬಳಿಕ ಸಿಂಧು ನದಿಯ ನೀರಿನ ಹರಿವನ್ನು ಭಾರತ ಸ್ತಬ್ಧಗೊಳಿಸಿದ್ದಕ್ಕೆ ಪುನಃ ಕಿಡಿಕಾರಿರುವ ಪಾಕ್‌ನ ಹವಾಮಾನ ಬದಲಾವಣೆ ಸಚಿವ ಮುಸಾದಿಕ್‌ ಮಲಿಕ್‌, ‘ನಮ್ಮ ಪಾಲಿನ ನೀರಿನ ತಂಟೆಗೆ ಯಾರಾದರೂ ಬಂದರೆ ನಾವು ಅವರ ಕೈ ಕತ್ತರಿಸುತ್ತೇವೆ’ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.ಪಾಕಿಸ್ತಾನದ ಮಾಹಿತಿ ತಂತ್ರಜ್ಞಾನ ಸಚಿವ ಅತ್ತಾವುಲ್ಲಾ ತರಾರ್‌ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸಾದಿಕ್‌, ‘ಭಾರತ ಸಿಂಧು ನದಿ ಹರಿವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ನೆರೆಯ ದೇಶದ ಪ್ರಧಾನಿಯೊಬ್ಬರು ನಲ್ಲಿಯನ್ನು ನಿಯಂತ್ರಿಸುತ್ತಿದ್ದಾರೆ, ಪಾಕಿಸ್ತಾನಕ್ಕೆ ಒಂದು ಹನಿ ನೀರು ಕೂಡ ಹರಿಯಲು ಬಿಡುವುದಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ನಾವು ನಮ್ಮನ್ನು ರಕ್ಷಿಸಿಕೊಳ್ಳುತ್ತೇವೆ, ಇದು ಕೇವಲ ಘೋಷಣೆಯಾಗಿ ಉಳಿದಿಲ್ಲ. ಈಗಾಗಲೇ ನಮ್ಮ ಪಾಲಿನ ನೀರಿಗೆ ಯಾರಾದರೂ ಕೈ ಹಾಕಿದರೆ ನಾವು ಆ ಕೈಯನ್ನು ಕತ್ತರಿಸುತ್ತೇವೆ ಎಂದು ಸಾಬೀತು ಪಡಿಸಿದ್ದೇವೆ.’ ಎಂದು ಬೆದರಿಸಿದರು.

ಪಾಕಿಸ್ತಾನಕ್ಕೆ ಸಿಂಧು ಹಾಗೂ ಅದರ ಉಪನದಿಗಳು ಜೀವನಾಡಿಯಾಗಿವೆ. ಆದರೆ ಪಹಲ್ಗಾಂ ದಾಳಿ ಬಳಿಕ ಭಾರತ ತನ್ನ ಅಣೆಕಟ್ಟೆಗಳಿಂದ ಪಾಕ್‌ನತ್ತ ನೀರು ಹರಿಸುತ್ತಿಲ್ಲ. ಇದು ಪಾಕ್‌ ಅನ್ನು ಸಂಕಟಕ್ಕೆ ಸಿಲುಕಿಸಿದೆ.