ಸಾರಾಂಶ
ನವದೆಹಲಿ: ‘ನಾನು ಮಾಡಿದ ಸಾಲಕ್ಕಿಂತ ಭಾರತ ಸರ್ಕಾರ ದುಪ್ಪಟ್ಟು (8 ಸಾವಿರ ಕೋಟಿ ರು.) ಹಣವನ್ನು ಜಪ್ತಿ ಮಾಡಿದೆ. ಇದರ ವಿರುದ್ಧ ಹೋರಾಟ ಮಾಡುವೆ’ ಎಂದು ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯ ಹೇಳಿದ್ದಾರೆ.
ದೇಶಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಆಸ್ತಿ ಮಾರಿ 14, 131.60 ಕೋಟಿ ರು. ಅನ್ನು ಸಾರ್ವಜನಿಕ ಬ್ಯಾಂಕ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದರು.
ಇದಕ್ಕೆ ಟ್ವೀಟರಲ್ಲಿ ಪ್ರತಿಕ್ರಿಯಿಸಿದ ಮಲ್ಯ, ‘ಕಿಂಗ್ ಫಿಶರ್ ಏರ್‌ಲೈನ್ಸ್‌ನ ಸಾಲ 6203 ಕೋಟಿ ರುಪಾಯಿ (1,200 ಕೋಟಿ ರು. ಬಡ್ಡಿ ಸೇರಿ). ಆದರೆ ಇದೀಗ ಜಾರಿ ನಿರ್ದೇಶನಾಲಯ (ಇ.ಡಿ.) ಮೂಲಕ ಬ್ಯಾಂಕ್‌ಗಳು ನನ್ನ ಆಸ್ತಿ ಮಾರಾಟ ಮಾಡಿ 14,131.60 ಕೋಟಿ ವಸೂಲಿ ಮಾಡಿವೆ ಎಂದು ಸಂಸತ್ತಿಗೆ ಭಾರತ ಸರ್ಕಾರ ಹೇಳಿದೆ . ಹೀಗಾಗಿ ನಾನು ಮಾಡಿದ ಸಾಲಕ್ಕಿಂತ ದುಪ್ಪಟ್ಟು ಹಣವನ್ನು ಬ್ಯಾಂಕ್‌ಗಳು ವಸೂಲಿ ಮಾಡಿವೆ. ಇಷ್ಟಾದರೂ ನಾನು ಈಗಲೂ ಆರ್ಥಿಕ ಅಪರಾಧಿಯೇ?’ ಎಂದು ಪ್ರಶ್ನಿಸಿದ್ದಾರೆ.
‘ಹೀಗಾಗಿ ಇದರ ವಿರುದ್ಧ ನಾನು ಹೋರಾಟ ಮುಂದುವರಿಸುತ್ತೇನೆ, ಇಲ್ಲದಿದ್ದರೆ ನಾನು ಪರಿಹಾರಕ್ಕೆ ಅರ್ಹನಾಗಿದ್ದೇನೆ’ ಎಂದಿದ್ದಾರೆ.
ಲಲಿತ್ ಮೋದಿ ಸಹಾನುಭೂತಿ:
ಈ ನಡುವೆ, ಮಲ್ಯಗೆ ಸಹಾನುಭೂತಿ ವ್ಯಕ್ತಪಡಿಸಿರುವ ಇನ್ನೊಬ್ಬ ದೇಶಭ್ರಷ್ಟ ಲಲಿತ್ ಮೋದಿ, ‘ಜೀವನದಲ್ಲಿ ಏರುಪೇರು ಇರುತ್ತವೆ. ನಾವು ಇದನ್ನು ಮೀರಿ ಮುನ್ನುಗ್ಗುವ ವಿಶ್ವಾಸವಿದೆ’ ಎಂದಿದ್ದಾರೆ. ಇದಕ್ಕೆ ಮಲ್ಯ ಪ್ರತಿಕ್ರಿಯಿಸಿ, ‘ನಾವು ಕೊಡುಗೆ ನೀಡಬೇಕಿದ್ದ ದೇಶ ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ’ ಎಂದಿದ್ದಾರೆ.