ಗುರುವಾಯೂರು ದೇಗುಲದಲ್ಲಿ ರೀಲ್ಸ್‌: ಚಿತ್ರ ಕಲಾವಿದೆ ಜಸ್ನಾ ವಿರುದ್ಧ ಕೇಸ್

| Published : Nov 09 2025, 02:15 AM IST

ಗುರುವಾಯೂರು ದೇಗುಲದಲ್ಲಿ ರೀಲ್ಸ್‌: ಚಿತ್ರ ಕಲಾವಿದೆ ಜಸ್ನಾ ವಿರುದ್ಧ ಕೇಸ್
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಕೃಷ್ಣನ ವರ್ಣ ಚಿತ್ರಗಳನ್ನು ಬಿಡಿಸುವ ಮೂಲಕ ಪ್ರಸಿದ್ಧಿ ಪಡೆದಿರುವ ಕಲಾವಿದೆ ಜಸ್ನಾ ಸಲೀಂ ಕೇರಳದ ಪ್ರಸಿದ್ಧ ಗುರುವಾಯೂರು ಕೃಷ್ಣ ದೇಗುಲದಲ್ಲಿ ನಿಷೇಧವಿದ್ದರೂ ರೀಲ್ಸ್‌ ಮಾಡಿದ್ದಾರೆ. ಈ ಸಂಬಂಧ ಅವರ ವಿರುದ್ಧ ಪ್ರರಣ ದಾಖಲಾಗಿದೆ.

ಪಿಟಿಐ ತ್ರಿಶೂರ್‌

ಶ್ರೀಕೃಷ್ಣನ ವರ್ಣ ಚಿತ್ರಗಳನ್ನು ಬಿಡಿಸುವ ಮೂಲಕ ಪ್ರಸಿದ್ಧಿ ಪಡೆದಿರುವ ಕಲಾವಿದೆ ಜಸ್ನಾ ಸಲೀಂ ಕೇರಳದ ಪ್ರಸಿದ್ಧ ಗುರುವಾಯೂರು ಕೃಷ್ಣ ದೇಗುಲದಲ್ಲಿ ನಿಷೇಧವಿದ್ದರೂ ರೀಲ್ಸ್‌ ಮಾಡಿದ್ದಾರೆ. ಈ ಸಂಬಂಧ ಅವರ ವಿರುದ್ಧ ಪ್ರರಣ ದಾಖಲಾಗಿದೆ,

ದೇವಸ್ಥಾನದ ಆಡಳಿತ ಮಂಡಳಿಯವರು ನೀಡಿದ ದೂರಿನನ್ವಯ ಗುರುವಾಯೂರು ಪೊಲೀಸರು ಜಸ್ನಾ ಹಾಗೂ ಅವರ ಇನ್ಸ್ಟಾಗ್ರಾಮ್‌ ಖಾತೆ ನಿರ್ವಹಣೆ ಮಾಡುವ ವ್ಯಕ್ತಿ ವಿರುದ್ಧ ಬಿಎನ್‌ಎಸ್‌ ಕಾನೂನಿನಡಿ ಪ್ರಕರಣ ದಾಖಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ತ್ರಿಶೂರ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶ್ರೀಕೃಷ್ಣ ಚಿತ್ರವನ್ನು ಬಿಡಿಸಿ ಉಡುಗೊರೆ ನೀಡುವ ಮೂಲಕ ಜಸ್ನಾ ಸುದ್ದಿಯಾಗಿದ್ದರು. ಇದೇ ವರ್ಷ ಅವರು ಗುರುವಾಯೂರು ದೇಗುಲದಲ್ಲಿ ಅಲಂಕೃತ ಕೃಷ್ಣನ ವಿಡಿಯೋ ಮಾಡಿದ ಪ್ರಕರಣದಲ್ಲಿ ದೂರು ದಾಖಲಾಗಿತ್ತು.

==

‘ಚಂದ್ರಯಾನ’ದಿಂದ ದಕ್ಷಿಣ ಧ್ರುವದ ಮಹತ್ವದ ಅಂಕಿಅಂಶ ಸಂಗ್ರಹ

ಬೆಂಗಳೂರು: ಚಂದ್ರನ ಮೇಲ್ಮೈ ಅಧ್ಯಯನಕ್ಕಾಗಿ 2019ರಲ್ಲಿ ಉಡಾವಣೆಯಾದ ಚಂದ್ರಯಾನ-2 ಆರ್ಬಿಟರ್‌ನಿಂದ ಚಂದಿರನ ಭೌತಿಕ, ವಿದ್ಯುತ್ ಗುಣಲಕ್ಷಣಗಳು ಮತ್ತು ಅದರ ಧ್ರುವಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಗಳು ಲಭಿಸಿವೆ ಎಂದು ಇಸ್ರೋ ತಿಳಿಸಿದೆ. ಜತೆಗೆ, ಇದು ಭವಿಷ್ಯದಲ್ಲಿನ ಚಂದ್ರನ ಅನ್ವೇಷಣೆಗೆ ಭಾರತದ ಪ್ರಮುಖ ಕೊಡುಗೆಯಾಗಿದೆ ಎಂದು ಹರ್ಷಿಸಿದೆ.ಸರ್ವ ದಿಕ್ಕುಗಳಿಂದ ಸಿಗ್ನಲ್‌ಗಳನ್ನು ಪಡೆಯುವ ಡಿಎಫ್‌ಎಸ್‌ಎಆರ್‌ ರಡಾರ್‌ ತನ್ನ ಎಲ್‌-ಬ್ಯಾಂಡ್‌ ಬಳಸಿ ಚಂದ್ರನ ಮೇಲಿನ ಮೈನ ಉತ್ತಮ ಗುಣಮಟ್ಟದ ಮ್ಯಾಪಿಂಗ್‌ ಮಾಡಿದೆ. ‘ಅದು ಕಳಿಸಿದ ದತ್ತಾಂಶಗಳನ್ನು ಬಳಸಿಕೊಂಡು, ಅಹಮದಾಬಾದ್‌ನ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳು ನೀರು ಮಂಜುಗಡ್ಡೆಯ ಸಂಭಾವ್ಯ ಉಪಸ್ಥಿತಿ, ಮೇಲ್ಮೈ ಒರಟುತನ ಮತ್ತು ಸಾಂದ್ರತೆಯ ದತ್ತಾಂಶವನ್ನು ತಯಾರಿಸಿದ್ದಾರೆ. ಇವುಗಳನ್ನು ಬಳಸಿಕೊಂಡು ಚಂದ್ರನ ಧ್ರುವ ಪ್ರದೇಶಗಳ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆಯಲು ಸಹಕಾರಿ’ ಎಂದು ಇಸ್ರೋ ಹೇಳಿದೆ.

==

ದಿಲ್ಲಿ ಹವೆ ವಿಷಮ: ಶೇ.50ರಷ್ಟು ನೌಕರರಿಗೆ ವರ್ಕ್‌ ಫ್ರಂ ಹೋಮ್‌

ದೆಹಲಿಯ ವಾಯುಗುಣಮಟ್ಟ ಸೂಚ್ಯಂಕವು 400 ಅಂಕ ದಾಟಿದ್ದು, ಇದು ‘ಅತ್ಯಂತ ಅಪಾಯಕಾರಿ’ ಎಂದು ಪರಿಗಣಿಸಲಾಗಿದೆ. ಇದರ ಬೆನ್ನಲ್ಲೇ ಸರ್ಕಾರದ ಶೇ.50ರಷ್ಟು ನೌಕರರಿಗೆ ವರ್ಕ್‌ ಫ್ರಂ ಹೋಮ್‌ ಘೋಷಿಸಲಾಗಿದೆ.ಇದೇ ವೇಳೆ, ಟ್ರಾಫಿಕ್ ದಟ್ಟಣೆ ಹಾಗೂ ಮಾಲಿನ್ಯ ನಿಗ್ರಹಕ್ಕೆ ನ.15ರಿಂದ ಫೆ.15ರವರೆಗೆ ದಿಲ್ಲಿ ಸರ್ಕಾರಿ ನೌಕರರ ಕೆಲಸದ ಸಮಯ ಬದಲಿಸಲಾಗಿದೆ. ಸರ್ಕಾರಿ ಕಚೇರಿಗಳು ಈಗ ಬೆಳಿಗ್ಗೆ 10 ರಿಂದ ಸಂಜೆ 6.30 ರವರೆಗೆ ಮತ್ತು ದೆಹಲಿ ಮಹಾನಗರ ಪಾಲಿಕೆ ಕಚೇರಿಗಳು ಬೆಳಿಗ್ಗೆ 8.30 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲಿವೆ. ಪ್ರಸ್ತುತ, ದೆಹಲಿ ಸರ್ಕಾರಿ ಕಚೇರಿಗಳು ಬೆಳಿಗ್ಗೆ 9.30 ರಿಂದ ಸಂಜೆ 6 ರವರೆಗೆ ಮತ್ತು ಎಂಸಿಡಿ ಕಚೇರಿಗಳು ಬೆಳಿಗ್ಗೆ 9 ರಿಂದ ಸಂಜೆ 5.30 ರವರೆಗೆ ಕಾರ್ಯನಿರ್ವಹಿಸುತ್ತವೆ.

==

ಸಂಧಾನ ವಿಫಲ: ಮತ್ತೆ ಪಾಕಿಸ್ತಾನ-ಆಫ್ಘನ್‌ ಸಮರ ಭೀತಿ

ಪಿಟಿಐ ಇಸ್ಲಾಮಾಬಾದ್‌ಇತ್ತೀಚೆಗೆ ಪರಸ್ಪರ ದಾಳಿ ನಡೆಸಿಕೊಂಡು ತಾತ್ಕಾಲಿಕ ಕದನವಿರಾಮ ಘೋಷಿಸಿಕೊಂಡಿದ್ದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವೆ ನಡೆದ 3ನೇ ಸುತ್ತಿನ ಸಂಧಾನ ಮಾತುಕತೆ ಶನಿವಾರ ವಿಫಲವಾಗಿದೆ. ಇದರ ಬೆನ್ನಲ್ಲೇ ಎರಡೂ ದೇಶಗಳು ಮತ್ತೆ ಸಮರದ ಮಾತು ಆಡಿವೆ.

‘ಅಫ್ಘಾನಿಸ್ತಾನದ ನೆಲವನ್ನು ಪಾಕ್‌ ವಿರೋಧಿ ಚಟುವಟಿಕೆಗೆ ಬಳಸಬಾರದು ಎಂಬುದು ನಮ್ಮ ಆಗ್ರಹ. ಈ ಬಗ್ಗೆ ಲಿಖಿತ ಒಪ್ಪಂದಕ್ಕೆ ಸಹಿ ಹಾಕಲು ಅಲ್ಲಿನ ತಾಲಿಬಾನ್‌ ಸರ್ಕಾರ ನಿರಾಕರಿಸಿ ಕೇವಲ ಮೌಖಿಕ ಒಪ್ಪಂದಕ್ಕೆ ಸಮ್ಮತಿಸಿತು. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಹೀಗಾಗಿ ಆಫ್ಘನ್‌ ದಾಳಿ ಮಾಡಿದರೆ ಅದಕ್ಕೆ ಎದಿರೇಟು ನೀಡಲು ಸಿದ್ಧ’ ಎಂದು ಪಾಕ್‌ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಹೇಳಿದ್ದಾರೆ.ಏತನ್ಮಧ್ಯೆ, ಅಫ್ಘಾನಿಸ್ತಾನದ ಸಚಿವ ನೂರುಲ್ಲಾ ನೂರಿ ಮಾತನಾಡಿ, ‘ಪಾಕ್‌ ನಮ್ಮ ತಾಳ್ಮೆ ಪರೀಕ್ಷಿಸಬಾರದು. ಯುದ್ಧ ಭುಗಿಲೆದ್ದರೆ,ಅಫ್ಘಾನಿಸ್ತಾನದ ಹಿರಿಯರು ಮತ್ತು ಯುವಕರು ಇಬ್ಬರೂ ಹೋರಾಡಲು ಎದ್ದೇಳುತ್ತಾರೆ’ ಎಂದಿದ್ದಾರೆ.

==

ಜಮ್ಮು-ಕಾಶ್ಮೀರದಲ್ಲಿ ಒಳನುಸುಳಲು ಯತ್ನ: 2 ಭಯೋತ್ಪಾದಕರ ಹತ್ಯೆ

ಶ್ರೀನಗರ: ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಬಿ) ಬಳಿ ಭಯೋತ್ಪಾದಕರ ಒಳನುಸುಳುವಿಕೆ ಯತ್ನವನ್ನು ಸೇನೆ ವಿಫಲಗೊಳಿಸಿದ್ದು, ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ.ಕುಪ್ವಾರದ ಕೇರನ್‌ ವಲಯದಲ್ಲಿ ಉಗ್ರರ ಒಳನುಸುಳುವಿಕೆ ಕುರಿತ ಗುಪ್ತಚರದ ಖಚಿತ ಮಾಹಿತಿ ಮೇರೆಗೆ ಶ್ರೀನಗರದ ಸೇನೆಯ ವಿಶೇಷ ತಂಡ ಶುಕ್ರವಾರ ಕಾರ್ಯಾಚರಣೆ ಕೈಗೊಂಡಿದೆ.

‘ಜಾಗೃತ ದಳಗಳು ಉಗ್ರರ ಶಂಕಾಸ್ಪದ ಚಟುವಟಿಕೆಗಳನ್ನು ಪತ್ತೆ ಹಚ್ಚಿದವು. ಈ ವೇಳೆ ಸೇನೆ, ಉಗ್ರರೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ’ ಎಂದು ಸೇನೆ ಹೇಳಿದೆ.