ಕುಟುಂಬ ನಿಯಂತ್ರಣ ಜಾರಿಗೆ ಅತ್ತೆ, ಮಗ, ಸೊಸೆ ಸಮ್ಮೇಳನ

| Published : Jun 14 2024, 01:03 AM IST / Updated: Jun 14 2024, 04:47 AM IST

ಸಾರಾಂಶ

ಕುಟುಂಬ ನಿಯಂತ್ರಣಾ ಯೋಜನೆಯಲ್ಲಿ ಮಹಿಳೆಯಷ್ಟೇ ಆತನ ಪತಿ ಮತ್ತು ಅತ್ತೆಯ ಪಾತ್ರವೂ ಅತ್ಯಂತ ಮಹತ್ವದ್ದು ಎಂಬುದನ್ನು ಮನಗಂಡಿರುವ ಉತ್ತರಪ್ರದೇಶ ಸರ್ಕಾರ, ರಾಜ್ಯದಲ್ಲಿ ಒಂದು ವಾರಗಳ ಕಾಲ ಅತ್ತೆ-ಮಗ-ಸೊಸೆ ಸಮ್ಮೇಳನ ಹಮ್ಮಿಕೊಂಡಿದೆ.

ಲಖನೌ: ಕುಟುಂಬ ನಿಯಂತ್ರಣಾ ಯೋಜನೆಯಲ್ಲಿ ಮಹಿಳೆಯಷ್ಟೇ ಆತನ ಪತಿ ಮತ್ತು ಅತ್ತೆಯ ಪಾತ್ರವೂ ಅತ್ಯಂತ ಮಹತ್ವದ್ದು ಎಂಬುದನ್ನು ಮನಗಂಡಿರುವ ಉತ್ತರಪ್ರದೇಶ ಸರ್ಕಾರ, ರಾಜ್ಯದಲ್ಲಿ ಒಂದು ವಾರಗಳ ಕಾಲ ಅತ್ತೆ-ಮಗ-ಸೊಸೆ ಸಮ್ಮೇಳನ ಹಮ್ಮಿಕೊಂಡಿದೆ.

ರಾಜ್ಯದಲ್ಲಿ ಕುಟುಂಬ ನಿಯಂತ್ರಣಾ ಕ್ರಮಗಳನ್ನು 3 ಹಂತದಲ್ಲಿ ಪ್ರಚಾರ ಮಾಡಲಾಗುತ್ತಿದ್ದು, ಅದರ ಎರಡನೇ ಭಾಗದಲ್ಲಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಉಪ ಆರೋಗ್ಯ ಕೇಂದ್ರಗಳಲ್ಲಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದ್ದು ಅದಕ್ಕೆ ಗಂಡ- ಹೆಂಡತಿ ಮತ್ತು ಪುರುಷನ ತಾಯಿಯನ್ನು ಆಹ್ವಾನಿಸಲಾಗುತ್ತಿದೆ.

ಸಮ್ಮೇಳನ ಏಕೆ?:

ಬಹುತೇಕ  , ಎಷ್ಟು ಮಕ್ಕಳನ್ನು ಹೊಂದಬೇಕು ಎನ್ನುವುದು ಕೇವಲ ಪತ್ನಿಯ ಆಯ್ಕೆಯಾಗಿ ಉಳಿದಿಲ್ಲ. ಅದರಲ್ಲಿ ಗಂಡ ಮತ್ತು ಆತನ ಕುಟುಂಬದ ಒತ್ತಡವೇ ಹೆಚ್ಚಾಗಿರುತ್ತದೆ. ಹೀಗಾಗಿ ಎಲ್ಲರನ್ನೂ ಒಂದೇ ಕಡೆ ಕೂರಿಸಿ ಕುಟುಂಬ ನಿಯಂತ್ರಣಾ ಕ್ರಮಗಳು, ಅದರ ಲಾಭ, ಪಾಲಿಸದೇ ಇದ್ದರೆ ಆಗುವ ಹಾನಿಯ ಕುರಿತು ಮಾಹಿತಿ ನೀಡಲಾಗುವುದು.

ಯಾರಿಗೆ ಆಹ್ವಾನ?:

ಮದುವೆಯಾಗಿ ಒಂದು ವರ್ಷ ಪೂರ್ಣ ಆಗದವರು, ಗರ್ಭಿಣಿಯರು, ಯಾವುದೇ ಗರ್ಭ ನಿರೋಧಕ ಸಾಧನ ಬಳಸದ ದಂಪತಿ, 3 ಮತ್ತು ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವವರು, ಮದುವೆಯಾಗಿ 2 ವರ್ಷದ ಬಳಿಕ ಮಕ್ಕಳು ಮಾಡಿಕೊಂಡ ಆದರ್ಶ ದಂಪತಿ, ಎರಡು ಮಕ್ಕಳ ನಡುವೆ ಅಗತ್ಯ ಅಂತರ ಹೊಂದಿರುವ ಆದರ್ಶ ದಂಪತಿ, 2 ಮಕ್ಕಳಾದ ಬಳಿಕ ಗರ್ಭ ನಿರೋಧಕ ಬಳಸುತ್ತಿರುವ ದಂಪತಿ ಮತ್ತು ಅವರ ಪೋಷಕರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗುವುದು.