ಸಾರಾಂಶ
ಕಾಸರಗೋಡು(ಕೇರಳ): ಗೂಗಲ್ ಮ್ಯಾಪ್ ಅವಾಂತರ ಸರಣಿ ಮುಂದುವರೆದಿದೆ. ಕೇರಳದ ಕಾಸರಗೋಡಿನಲ್ಲಿ ಗೂಗಲ್ ಮ್ಯಾಪ್ ಯವಕರಿಬ್ಬರ ದಾರಿ ತಪ್ಪಿಸಿದ್ದು, ಆಸ್ಪತ್ರೆಗೆ ಹೋಗುತ್ತಿದ್ದವರಿಗೆ ಉಕ್ಕಿ ಹರಿಯುತ್ತಿರುವ ನದಿ ದಾರಿ ತೋರಿಸಿ ಎಡವಟ್ಟು ಮಾಡಿದೆ.
ಕೇರಳದ ಯುವಕರಿಬ್ಬರು ಕರ್ನಾಟಕ ಮೂಲದ ಆಸ್ಪತ್ರೆಗೆ ತೆರಳುವುದಕ್ಕಾಗಿ ಗೂಗಲ್ ಮ್ಯಾಪ್ ಬಳಸಿದ್ದಾರೆ. ಆದರೆ ಆಸ್ಪತ್ರೆ ಬದಲು, ನದಿಯೊಂದರ ದಾರಿ ತಪ್ಪಿಸಿದೆ. ಪರಿಣಾಮ ಯುವಕರಿದ್ದ ಕಾರು ನದಿಯಲ್ಲಿ ತೇಲಿದೆ. ಅದೃಷ್ಟವಶಾತ್ ಕಾರು ಅಲ್ಲೇ ಇದ್ದ ಮರಕ್ಕೆ ಸಿಲುಕಿಕೊಂಡಿದ್ದರಿಂದ ದುರಂತವೊಂದು ತಪ್ಪಿದಂತಾಗಿದೆ.
‘ಗೂಗಲ್ ಮ್ಯಾಪ್ ನಮಗೆ ಕಿರಿದಾದ ರಸ್ತೆಗಳಿರುವ ನಕ್ಷೆಯನ್ನು ತೋರಿಸಿತ್ತು. ಆ ಹಾದಿಯಲ್ಲಿ ಹೋಗುತ್ತಿರುವಾಗ ಕಾರಿನ ಹೆಡ್‌ಲೈಟ್ ಬಳಸಿದಾಗ ಮುಂದೆ ನೀರು ಇರುವುದು ಕಾಣಿಸಿತು. ಎರಡೂ ಬದಿಯಲ್ಲಿಯೂ ನೀರು ತುಂಬಿತ್ತು. ಆದರೆ ಮಧ್ಯ ಸೇತುವೆ ಇರಲಿಲ್ಲ. ಏಕಾಏಕಿ ಕಾರು ನದಿಯಲ್ಲಿ ತೇಲಿತು. ಬಳಿಕ ದಡದ ಸಮೀಪದಲ್ಲಿರುವ ಮರಕ್ಕೆ ಸಿಲುಕಿಕೊಂಡಿತು. ನಂತರ ಕಾರಿನ ಬಾಗಿಲು ತೆರೆದ ಅಗ್ನಿಶಾಮಕ ಸಿಬ್ಬಂದಿಯನ್ನು ಸಂಪರ್ಕಿಸಿದೆವು’ ಎಂದು ಕಾರಿನಲ್ಲಿದ್ದ ಯುವಕ ಅಬ್ದುಲ್ ರಶೀದ್ ಹೇಳಿದ್ದಾರೆ.ಪಲ್ಲಂಚಿಯಲ್ಲಿ ನದಿಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ತಿಂಗಳು ಕೇರಳದಲ್ಲಿ ಗೂಗಲ್ ಮ್ಯಾಪ್‌ನಿಂದ ಇಂತಹದ್ದೇ ಅವಾಂತರ ಸೃಷ್ಟಿಯಾಗಿತ್ತು. ಮುನ್ನಾರ್ ಪ್ರವಾಸಕ್ಕೆ ಬಂದಿದ್ದ ಹೈದರಾಬಾದ್ ಪ್ರವಾಸಿಗರ ಗುಂಪು ಗೂಗಲ್ ಮ್ಯಾಪ್ ನಂಬಿದ ಪರಿಣಾಮ ಕಾರು ತೊರೆಗೆ ಬಿದ್ದಿತ್ತು.