ಸಾರಾಂಶ
ಬರೇಲಿ (ಉ.ಪ್ರ.): ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ-2019 ಜಾರಿ ಆಗಿರುವುದನ್ನು ಅಖಿಲ ಭಾರತ ಮುಸ್ಲಿಂ ಜಮಾತ್ ಸಂಘಟನೆಯ ಅಧ್ಯಕ್ಷ ಮೌಲಾನ ಶಹಾಬುದ್ದೀನ್ ರಜ್ವಿ ಬರೇಲ್ವಿ ಸ್ವಾಗತಿಸಿದ್ದು, ಇದರಿಂದ ಭಾರತದ ಮುಸ್ಲಿಮರ ಪೌರತ್ವಕ್ಕೆ ಯಾವುದೇ ಧಕ್ಕೆಯುಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಎಎ ಬಹಳ ಹಿಂದೆಯೇ ಜಾರಿ ಆಗಬೇಕಿತ್ತು. ಅದರಿಂದ ನಮ್ಮ ನೆರೆಯ ರಾಷ್ಟ್ರಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿರುವ ಅಲ್ಪಸಂಖ್ಯಾತರಿಗೆ ಸೂಕ್ತ ನೆಲೆ ಸಿಕ್ಕಂತಾಗಿದೆ. ಇದಕ್ಕೂ ಮೊದಲು ಅವರಿಗೆ ಪೌರತ್ವ ಕಲ್ಪಿಸುವ ಕಾಯ್ದೆಯೇ ಇರಲಿಲ್ಲ. ಹಾಗೆಯೇ ಇದರಿಂದ ಭಾರತೀಯ ಮುಸ್ಲಿಮರ ಪೌರತ್ವ ಹೋಗುತ್ತದೆ ಎಂದು ಕೆಲವು ರಾಜಕಾರಣಿಗಳು ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸುತ್ತಿದ್ದು, ಅಂತಹ ಯಾವುದೇ ಅನಾಹುತ ಸಂಭವಿಸುವುದಿಲ್ಲ. ಈ ಕಾಯ್ದೆ ಪೌರತ್ವ ಕೊಡುವ ಕಾಯ್ದೆಯೇ ಹೊರತು ಕಸಿಯುವ ಕಾಯ್ದೆಯಲ್ಲ. ಹೀಗಾಗಿ ಭಾರತದ ಪ್ರತಿಯೊಬ್ಬ ಮುಸ್ಲಿಮನೂ ಈ ಕಾಯ್ದೆಯನ್ನು ಸ್ವಾಗತಿಸಬೇಕು’ ಎಂದು ಕರೆ ನೀಡಿದ್ದಾರೆ.