ಸಾರಾಂಶ
ಹುಲಿನಾಯ್ಕರ್ ಅವರಿಗೆ ಅಮೃತ ಮಹೋತ್ಸವ, ಅಂತರಂಗದ ಅವಲೋಕನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿರಾ:ವಿಧಾನಪರಿಷತ್ ಮಾಜಿ ಸದಸ್ಯ, ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ತುಮಕೂರಿನ ಶ್ರೀದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನ. 25ರ ಶನಿವಾರ ಬೆಳಗ್ಗೆ 11 ಕ್ಕೆ ಡಾ.ಎಂ.ಆರ್.ಹುಲಿನಾಯ್ಕರ್ ಅವರಿಗೆ ಅಮೃತ ಮಹೋತ್ಸವ ಹಾಗೂ ಅಂತರಂಗದ ಅವಲೋಕನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಡಾ.ಎಂ.ಆರ್.ಹುಲಿನಾಯ್ಕರ್ ಅಮೃತ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ಟಿ.ಎನ್.ಮಧುಕರ ತಿಳಿಸಿದರು.
ಅವರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಡಾ.ಎಂ.ಆರ್.ಹುಲಿನಾಯ್ಕರ್ ಅವರು ಹಿಂದುಳಿದ ಜನಾಂಗದ ನಾಯಕರು, ಶಿಕ್ಷಣ ತಜ್ಞರು, ವೈದ್ಯರು ಆಗಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ೭೫ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಅಮೃತ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದೇ ಕಾರ್ಯಕ್ರಮದಲ್ಲಿ ಡಾ.ಎಂ.ಆರ್.ಹುಲಿನಾಯ್ಕರ್ ಅವರ ಆತ್ಮಕಥನ ’ಅಂತರಂಗದ ಅವಲೋಕನ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದ ಸಾನಿಧ್ಯವನ್ನು ನಿರಂಜನಾಂದಪುರಿ ಸ್ವಾಮೀಜಿ ವಹಿಸುವರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಂತರಂಗದ ಅವಲೋಕ ಆತ್ಮಕಥನ ಲೋಕಾರ್ಪಣೆ ಮಾಡುವರು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿನಂದನಾ ನುಡಿಗಳನ್ನಾಡುವರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಗ್ರಂಥದ ಮೊದಲ ಪ್ರತಿ ಸ್ವೀಕಾರ ಮಾಡುವರು. ಡಾ.ಎಂ.ಆರ್.ಹುಲಿನಾಯ್ಕರ್ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಎಸ್.ನಾಗಣ್ಣ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಕೊಟ್ಟ ಶಂಕರ್ ಮಾತನಾಡಿ ಡಾ.ಎಂ.ಆರ್.ಹುಲಿನಾಯ್ಕರ್ ಅಜಾತಶತ್ರುಗಳಾಗಿದ್ದು, ವೈದ್ಯರಾಗಿ ಸಾವಿರಾರು ರೋಗಿಗಳನ್ನು ಗುಣಪಡಿಸಿದ್ದಾರೆ. ಇಂತಹ ಮಹಾನ್ ನಾಯಕರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಶಿರಾ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕನ್ನಡಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎಲ್.ರಂಗನಾಥ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಮಂಜೇಶ್ ಗಾಂಧಿ, ಡಾ.ಮಂಜುನಾಥ್, ನಗರಸಭಾ ಸದಸ್ಯ ಶಿವಶಂಕರ್, ಮುಖಂಡರಾದ ರೂಪೇಶ್ ಕೃಷ್ಣಯ್ಯ, ಬೇವಿನಹಳ್ಳಿ ಸುದರ್ಶನ್, ಚಂದ್ರಶೇಖರ್, ಚಂದ್ರಪ್ಪ, ಧರ್ಮರಾಜ್, ಗಿರೀಶ್, ಕೃಷ್ಣಮೂರ್ತಿ, ಗಂಗಾಧರ್, ಕೊಟ್ಟ ರಂಗಯ್ಯ ಸೇರಿದಂತೆ ಹಲವರು ಹಾಜರಿದ್ದರು. 20ಶಿರಾ1: ಶಿರಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಡಾ.ಎಂ.ಆರ್.ಹುಲಿನಾಯ್ಕರ್ ಅಮೃತ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ಟಿ.ಎನ್.ಮಧುಕರ ಮಾತನಾಡಿದರು. ಕೊಟ್ಟ ಶಂಕರ್ ಸೇರಿದಂತೆ ಹಲವರು ಹಾಜರಿದ್ದರು.