ಸಾರಾಂಶ
ಹುಬ್ಬಳ್ಳಿ:
ಕೆಳವರ್ಗದ, ಅಲ್ಪಸಂಖ್ಯಾತ ಬಡವರ ಮಕ್ಕಳ ಎದೆಯಲ್ಲಿ ಜ್ಞಾನಜ್ಯೋತಿ ಬೆಳಗಿಸುತ್ತ, ಅವರು ಸಮಾಜದ ಮುಖ್ಯವಾಹಿನಿಗೆ ಬರುವುದರಲ್ಲಿ ಬಹು ದೊಡ್ಡ ಪಾತ್ರ ವಹಿಸುತ್ತ ಇಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಳೇಹುಬ್ಬಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ನಂ. 19)ಯ ನೂತನ ಕಟ್ಟಡಕ್ಕೆ ಸರ್ಕಾರದಿಂದ ₹ 3 ಕೋಟಿ ಅನುದಾನ ಕೊಡಿಸುವುದಾಗಿ ಶಾಸಕ, ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ವಾಗ್ದಾನ ಮಾಡಿದರು.ಭಾನುವಾರ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ಬಡವರು, ಶೋಷಿತರ ಬದುಕು ಹಸನಾಗಲು ಸಾಧ್ಯ. ಇಂಥ ಮಕ್ಕಳೇ ಹೆಚ್ಚಾಗಿ ಓದುವ ಸರ್ಕಾರಿ ಶಾಲೆಗಳು ಸದೃಢವಾದಷ್ಟು ಇಡೀ ಸಮಾಜ ಬಲಿಷ್ಠವಾಗುತ್ತದೆ. ಈ ದಿಸೆಯಲ್ಲಿ ಹುಬ್ಬಳ್ಳಿ ಪೂರ್ವ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಲವಾರು ಶಾಲೆಗಳಿಗೆ ಕೋಟಿ ಕೋಟಿ ಅನುದಾನ ಕೊಡಿಸಿ, ಅವುಗಳನ್ನೆಲ್ಲ ಅಭಿವೃದ್ಧಿಪಡಿಸಿದ್ದೇನೆ. ಈ ಹಳೇಹುಬ್ಬಳ್ಳಿ ಶಾಲೆಯ ನೂತನ ಕಟ್ಟಡಕ್ಕೆ ಕನಿಷ್ಠ ₹3 ಕೋಟಿ ಅನುದಾನ ಕೊಡಿಸುತ್ತೇನೆ. ಅಗತ್ಯಬಿದ್ದರೆ ಇನ್ನಷ್ಟು ಅನುದಾನವನ್ನು ಸರ್ಕಾರದಿಂದ ತಂದು ಉತ್ತಮ ಕಟ್ಟಡ ನಿರ್ಮಿಸುವುದಾಗಿ ಅವರು ಭರವಸೆ ನೀಡಿದರು.
ಶಿಕ್ಷಣದಿಂದ ದೇಶದ ಪ್ರಗತಿ ಸಾಧ್ಯ ಎಂಬುದನ್ನು ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿಯೇ ಮನಗಾಣಲಾಗಿತ್ತು. ಅದರಂತೆ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದ ಇಂದು ಅನಕ್ಷರತೆ ಪ್ರಮಾಣ ಕಡಿಮೆಯಾಗಿದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ರಾಷ್ಟ್ರೀಕರಣಗೊಳಿಸಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿತರು ಉನ್ನತ ಸ್ಥಾನವನ್ನು ಹೊಂದಲು ಸಾಧ್ಯವಾಗಿದೆ ಎಂದು ಹೇಳಿದರು.ಎಸ್‌ಡಿಎಂಸಿ ಸದಸ್ಯರು ಶಾಲೆಗಳಲ್ಲಿ ಶಿಕ್ಷಕರಿಂದ ಖುರ್ಚಿ-ಟೇಬಲ್ ಹಾಕಿಸಿಕೊಂಡು ಕುಳಿತುಕೊಳ್ಳುತ್ತಾರೆ. ಇವರು ಶಾಲೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕೇ ಹೊರತು ರಾಜಕೀಯ ತಂದು ಶಾಲಾ ವಾತಾವರಣ ಕೆಡಿಸುವ ಕೆಲಸ ಮಾಡಬಾರದು. ಅವರು ರಾಜಕೀಯ ಮಾಡುವುದನ್ನು ನಿಯಂತ್ರಿಸುವಂತೆ ವೇದಿಕೆಯಲ್ಲಿದ್ದ ಡಿಡಿಪಿಐ ಎಸ್.ಎಸ್.ಕೆಲದಿಮಠ ಅವರಿಗೆ ಶಾಸಕ ಪ್ರಸಾದ ಅಬ್ಬಯ್ಯ ನಿರ್ದೇಶನ ನೀಡಿದರು.
₹4.5 ಲಕ್ಷ ದೇಣಿಗೆ:ಸ್ವರ್ಣ ಗ್ರುಪ್ ಆಫ್ ಕಂಪನೀಸ್ ಎಂಡಿ ಡಾ. ವಿ.ಎಸ್. ವಿ ಪ್ರಸಾದ ಮಾತನಾಡಿ, ಶಿಕ್ಷಣ ಕ್ಷೇತ್ರವು ವ್ಯಾಪಕವಾಗಿ ವಾಣಿಜ್ಯೀಕರಣ ಆಗುತ್ತಿರುವುದರಿಂದ ಸರ್ಕಾರಿ ಶಾಲೆಗಳ ಬಗ್ಗೆ ಎಲ್ಲರೂ ಹೆಚ್ಚು ಕಾಳಜಿ ವಹಿಸಬೇಕಿದೆ. ಇಂದು ಉನ್ನತ ಸ್ಥಾನದಲ್ಲಿರುವವರ ಭವಿಷ್ಯ ಸರ್ಕಾರಿ ಶಾಲೆಗಳಿಂದ ನಿರ್ಮಾಣವಾಗಿದೆ. ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಉಳ್ಳವರು ಸಹಾಯ ಮಾಡಬೇಕು ಎಂದು ಕರೆನೀಡಿದರು.
ಇದೇ ಸಂದರ್ಭದಲ್ಲಿ ಡಾ.ಪ್ರಸಾದ ಅವರು ಶಾಲೆಗೆ ದೇಣಿಗೆಯಾಗಿ ನೀಡಿದ ಒಟ್ಟು ₹4.5 ಲಕ್ಷ ಮೌಲ್ಯದ ಕಂಪ್ಯೂಟರ್, ಸಿಸಿ ಕ್ಯಾಮೆರಾ, ನೀರು ಶುದ್ಧೀಕರಣ ಘಟಕ, ವೈಟ್ ಬೋರ್ಡ್‌ಗಳನ್ನು ಉದ್ಘಾಟಿಸಲಾಯಿತು.ಸಮುದಾಯ ಅಭಿವೃದ್ಧಿ:
ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಈ ಶಾಲೆಯ ಸುತ್ತ-ಮುತ್ತಲೂ ಬಡವರು, ಶೋಷಿತರು, ಕೂಲಿಕಾರರು, ಸಮಾಜದ ಅಂಚಿಗೆ ತಳ್ಳಲ್ಪಟ್ಟವರ ಕಾಲನಿಗಳಿವೆ. ಆ ಕಾಲನಿಗಳಿಗೆ ಮೂಲಭೂತ ಸೌಕರ್ಯಗಳಿಲ್ಲ. ಆ ಜನರ ಕೈಗಳಿಗೆ ಸರಿಯಾದ ಉದ್ಯೋಗವಿಲ್ಲ, ಗೌರವಯುತ ಸೂರುಗಳಿಲ್ಲ. ಪರಿಸ್ಥಿತಿ ಹೀಗಿರುವಾಗ ಅವರ ಮಕ್ಕಳು ಈ ಶಾಲೆಯಲ್ಲಿ ಕಲಿತರಷ್ಟೇ ಸಾಲದು, ಅವರ ಬದುಕು ಎತ್ತರವಾಗಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿದಾಗ ಮಾತ್ರ ಶಿಕ್ಷಕರ ಶ್ರಮ ಸಾರ್ಥಕವಾಗುತ್ತದೆ. ಮಕ್ಕಳ ಓದಿಗೆ ಶಾಲೆಯಷ್ಟೇ ಅಲ್ಲ ಮನೆಯಲ್ಲೂ ಉತ್ತಮ ವಾತಾವರಣ ಅಗತ್ಯವಿದೆ. ಮಹಾನಗರ ಪಾಲಿಕೆ ಮತ್ತು ಸರ್ಕಾರ ಜಂಟಿಯಾಗಿ ಈ ಕಾಲನಿಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.ಮೇಯರ್ ರಾಮಪ್ಪ ಬಡಿಗೇರ, ಪೊಲೀಸ್ ಕಮೀಶ್ನರ್ ಎನ್. ಶಶಿಕುಮಾರ, ಡಿಸಿಪಿ ರವೀಶ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಪಾಲಿಕೆ ಸದಸ್ಯ ಅರ್ಜುನ ಪಾಟೀಲ, ಮಂಜುನಾಥ ಕಾಟಕರ, ಶಿವಾಜಿ ಗಾಂವ್ಕರ, ಪ್ರಭು ಪ್ರಭಾಕರ, ದಶರಥ ವಾಲಿ, ಸಿಆರ್‌ಪಿ ಮುತ್ತಪ್ಪ ವಡ್ಡರ, ಮುಖ್ಯಾಧ್ಯಾಪಕ ಎಚ್.ಎಂ. ಕುಂದರಗಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಹು -ಧಾ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಪ್ರಾಸ್ತಾವಿಕ ಮಾತನಾಡಿದರು.