ಚರ್ಚ್‌ ನಿರ್ಮಾಣಕ್ಕೆ ₹3 ಕೋಟಿ ಅನುದಾನ

| Published : Feb 09 2024, 01:48 AM IST

ಸಾರಾಂಶ

ಸಾಮಾಜಿಕ ಕಳಕಳಿಯುಳ್ಳ ಮರೆಪ್ಪ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಕುಟುಂಬ ಸದಸ್ಯರನ್ನು ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ಮೂಡಲಗಿಯಂತಹ ಪಟ್ಟಣ ಪ್ರದೇಶದಲ್ಲಿ ದುಡ್ಡು ನೀಡಿದರೂ ನಿವೇಶನಗಳು ಸಿಗದ ಇಂದಿನ ದಿನಗಳಲ್ಲಿ, ಚರ್ಚ್‌ ನಿರ್ಮಾಣಕ್ಕೆ 17 ಗುಂಟೆ ನಿವೇಶನ ದಾನ ಮಾಡಿ ಸಮಾಜಕ್ಕೆ ಮಾದರಿಯಾದ ಮರೆಪ್ಪ ಮರೆಪ್ಪಗೋಳ ಅವರ ಸಾಮಾಜಿಕ ಕಾರ್ಯ ಪ್ರಶಂಸನೀಯ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಪಟ್ಟಣದ ರಾಜೀವ ಗಾಂಧಿ ನಗರದಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಚರ್ಚ್ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿಯುಳ್ಳ ಮರೆಪ್ಪ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಕುಟುಂಬ ಸದಸ್ಯರನ್ನು ಅಭಿನಂದಿಸಿದರು.

ಮೂಡಲಗಿಯಲ್ಲಿ ಕ್ರೈಸ್ತ ಬಾಂಧವರು ಚರ್ಚ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಿರುವ ಚರ್ಚ್ ಕಟ್ಟಡವನ್ನು ಮರು ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇದಕ್ಕಾಗಿ ಸುಮಾರು ₹5 ಕೋಟಿಗಳ ಕ್ರಿಯಾ ಯೋಜನೆ ರೂಪಿಸಿದ್ದಾರೆ. ಇದರ ಜೊತೆಗೆ ಬಾಂಧವರ ಮದುವೆ ಮತ್ತು ಮತ್ತಿತರ ಕಾರ್ಯಕ್ರಮಗಳಿಗೆ ಅನುಕೂಲವಾಗಲು ಸಮುದಾಯ ಭವನ ನಿರ್ಮಿಸಲು ಮುಂದಾಗಿದ್ದಾರೆ. ಈ ಮಹತ್ವಪೂರ್ಣ ಕಾಮಗಾರಿ ನಿರ್ಮಾಣಕ್ಕೆ ಸರ್ಕಾರದಿಂದ ₹3 ಕೋಟಿ ಬಿಡುಗಡೆ ಮಾಡಿಸಲಾಗುವುದು. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದು, ಲೋಕಸಭಾ ಚುನಾವಣೆಯ ಬಳಿಕ ಕಾಮಗಾರಿಗೆ ಅನುದಾನವು ಬಿಡುಗಡೆಯಾಗಲಿದೆ. ಉಳಿದ ಹಣವನ್ನು ಸಮಾಜ ಬಾಂಧವರು ವಂತಿಗೆಯ ಮೂಲಕ ಸಂಗ್ರಹಿಸಬೇಕೆಂದು ಅವರು ಹೇಳಿದರು.

ಎಲ್ಲ ಸಮುದಾಯಗಳು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬರಬೇಕಿದೆ. ಕ್ಷೇತ್ರದಲ್ಲಿ ಶಿಕ್ಷಣದ ಅಮೂಲಾಗ್ರ ಬದಲಾವಣೆಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಈ ಬಾಂಧವರು ಸಹ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಮುಂದೆ ಬರುವಂತೆ ಕೋರಿಕೊಂಡರು.

ಈ ವೇಳೆ ಮೂಡಲಗಿ ಚರ್ಚ್ ಸಭಾ ಪಾಲಕ ವಿಜಯಕುಮಾರ, ಭೂ-ದಾನಿ ಮರೆಪ್ಪ ಮರೆಪ್ಪಗೋಳ, ಚಾರ್ಟರ್ಡ್ ಅಕೌಂಟೆಂಟ್ ಸೈದಪ್ಪ ಗದಾಡಿ, ರವೀಂದ್ರ ಸಣ್ಣಕ್ಕಿ, ರಮೇಶ ಸಣ್ಣಕ್ಕಿ, ರವೀಂದ್ರ ಸೋನವಾಲ್ಕರ, ಪ್ರಭಾಕರ ಬಂಗೆನ್ನವರ, ಹಣಮಂತ ಹವಳೆಪ್ಪಗೋಳ, ಸಂತೋಷ ಸೋನವಾಲಕರ, ಯಮನಪ್ಪ ಕರಬನ್ನವರ, ಹಣಮಂತ ಗುಡ್ಲಮನಿ, ವಿಜಯ ಮೂಡಲಗಿ, ಡಾ.ವೀಣಾ ಕನಕರಡ್ಡಿ, ಗಿರೀಶ ಢವಳೇಶ್ವರ, ಈರಪ್ಪ ಬನ್ನೂರ, ಡಾ.ಅನೀಲ ಪಾಟೀಲ, ಡಾ.ಎಸ್.ಎಸ್.ಪಾಟೀಲ, ಅನ್ವರ ನದಾಫ, ರಾಮಣ್ಣ ಬಂಗೆನ್ನವರ, ಸುಭಾಸ ಸಣ್ಣಕ್ಕಿ, ಸಚಿನ್ ಸೋನವಾಲಕರ, ಶಾಬು ಸಣ್ಣಕ್ಕಿ, ಲಾಲಸಾಬ ಸಿದ್ದಾಪೂರ, ಎಡ್ವಿನ್ ಪರಸನ್ನವರ, ಗಂಗಪ್ಪ ಮೇತ್ರಿ, ಬಿಇಒ ಅಜೀತ ಮನ್ನಿಕೇರಿ, ಪಿಎಸ್‌ಐ ಎಚ್.ವೈ. ಬಾಲದಂಡಿ ಸೇರಿದಂತೆ ಹಲವು ಗಣ್ಯರು ಇದ್ದರು.